ವಿಷಯಕ್ಕೆ ಹೋಗಿ

ಹೆಬ್ಬಾರರು ಹೇಳಿಕೊಳ್ಳುವುದೇ ಇಲ್ಲ.......

    

ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... 
ಕೊಂಚ ತಿಳಿದವರೂ ಇಂದು ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್‌ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್‌ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್‌ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. 
ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್‌ಬುಕ್‌ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ  ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ.....
ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವುದು, ಮನೆಗೆ ಬೇಕಾದ ಸಾಮಾನು-ತರಕಾರಿ ತರುವುದು, ಹೀಗೇ ಏನೇ ಕೆಲಸ ಕಂಡರೂ ಮಾಡುವುದು..... ಸ್ನಾನ ಮಾಡಿ ಆಫೀಸ್ ಕಡೆ ಅರ್ಜೆಂಟ್ ಇದ್ದರೆ ಹೋಗುವುದು, ಅಲ್ಲಿ ಸ್ವಚ್ಛ ಮಾಡುವುದು, ಪೇಪರ್ ಓದುವುದು, ಪರಿಚಿತರ ಜೊತೆ ಮಾತನಾಡುವುದು, ತಪ್ಪು ಕಂಡಲ್ಲಿ ಖಂಡಿಸುವುದು, ಅಸಹಾಯಕರಿಗೆ ಸಹಾಯ ಮಾಡುವುದು.........
ಹೀಗೇ ಮತ್ತೆ ಮನೆಗೆ ಬಂದು ಪುಸ್ತಕ ಮನೆ ಹೊಕ್ಕರೆ ಅಲ್ಲಿ ಎಲ್ಲ ಪುಸ್ತಕ, ಪತ್ರಿಕೆ, ಬರೆಯುವ ಹಾಳೆ ಎಲ್ಲವನ್ನೂ ಹರವಿಕೊಂಡು ಓದುತ್ತಾ, ಬರೆಯತ್ತಾ, ಪತ್ರಿಕೆ ಕೆಲಸ ಮಾಡುತ್ತ, ಅದೇ ಪುಟ್ಟ ಮೊಬೈಲ್‌ನಲ್ಲಿ ಮಾತನಾಡುತ್ತ, ಮೇಸೇಜ್ ಮಾಡುತ್ತ, ಸಿನೆಮಾ ನೋಡುತ್ತಲೇ ಅದರಲ್ಲಿ ಫೈಟಿಂಗ್ ಇಲ್ಲದಿದ್ದರೆ..... ತನ್ನ ಪ್ರೀತಿಯ ನಿದ್ದೆಗೆ ಜಾರಿರುತ್ತಾರೆ. 
ಅವರ ವಾಟ್ಸಾಪ್, ಫೇಸ್‌ಬುಕ್, ಇ-ಮೇಲ್...... ಎಲ್ಲಾ ನನಗೇ ಮೀಸಲು. ಆಗಾಗ ಅವರಿಗೆ ಅದನ್ನೆಲ್ಲ ಓದಿಹೇಳಿ ಅವರಿಂದ ಉತ್ತರ ಪಡೆದು ಹಾಕುವ ಕೆಲಸ ನನ್ನದು. ಕಾರಣ ಅವರಿಗೆ ಅದರಲ್ಲಿ ಆಸಕ್ತಿ ಕಡಿಮೆ. ಎಂಡ್ರೊಯ್ಡಮೊಬೈಲ್ ಬೇಡವೇಬೇಡ ಎನ್ನುತ್ತಾರೆ. ಅವರ ಪುಟ್ಟ ಕೀಪ್ಯಾಡ್ ಫೋನ್‌ನಲ್ಲೇ ಮೇಸೇಜ್, ಮಾತು, ಸಿನೆಮಾ..... ಹೀಗೇ ಅದೇ ಅವರಿಗೆ ಇಷ್ಟ. ಅದರಲ್ಲೇ ಫೇಸ್‌ಬುಕ್ ಕೂಡಾ ತೆಗೆದು ಒಮ್ಮೊಮ್ಮೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ.
    ಅಕ್ಷರ ಅಳಿಸಿ ಹೋಗುತ್ತಿರುವ ಕೀಪ್ಯಾಡ್‌ನಲ್ಲಿ ತಪ್ಪಾಗಿ ಮೂಡುವ ಅಕ್ಷರಗಳೇ ಹೆಚ್ಚು! ಅದಕ್ಕೆ ಮೊನ್ನೆ ಕಲಬುರ್ಗಿಯ ದೀದಿಗೆ ಫೇಸ್‌ಬುಕ್ನಲ್ಲಿ ಕೊಟ್ಟ ಪ್ರತಿಕ್ರಿಯೆಯೇ ಸಾಕ್ಷಿ !!                                                                                                             ನನಗೂ ನೋಡಿ ನೋಡಿ ಸಾಕಾಯ್ತು. ನಾನು ಎಲ್ಲವನ್ನೂ ಎಲ್ಲರಿಗೂ ಹೇಳುತ್ತೇನೆ. ಫೇಸ್‌ಬುಕ್‌ಗೆ ಹಾಕುತ್ತೇನೆ ಎಂದರೆ ‘ಖಂಡಿತಾ ಹೇಳು. ಎಲ್ಲವನ್ನೂ ಹಾಕು. ನನಗೇನೂ ಬೇಸರವಿಲ್ಲ. ನಿನಗೆ ಬೇಕಾದ ಹಾಗೆ ಮಾಡಿಕೊ. ನನಗೆ ಸುಮ್ಮನೆ ಬಿಡು. ಆ ಮೊಬೈಲ್, ಫೇಸ್‌ಬುಕ್, ವಾಟ್ಸಾಪ್ ಅಂತಾ ನನಗೆ ಕಾಟ ಕೊಡಬೇಡ’ ಎನ್ನುತ್ತಾರೆ! ಕಳೆದ ವರ್ಷ ಕೋವಿಡ್ ಬಂದು ಹೋಮ್‌ಕ್ವಾರಂಟೈನ್‌ನಲ್ಲಿ ಇದ್ದಾಗ ಕೂಡ ಅವರಿಗೆ ಅದೇ ಮೊಬೈಲ್, ಮಾತು, ಪುಸ್ತಕ, ನಡಿಗೆ, ಪ್ರಾಣಾಯಾಮ, ವ್ಯಾಯಾಮ....... ಇವೇ ಅವರ ಸಂಗಾತಿಗಳು.
ನಾನು ಮದುವೆಯಾಗಿ ಬಂದಾಗ ಅವರ ಹಾಗೂ ಅವರ ಅಣ್ಣ-ತಮ್ಮಂದಿರ ಪ್ರತಿಭೆಗೆ ಸಂದ ಬಹುಮಾನಗಳ ಸರ್ಟಿಫಿಕೇಟ್, ಕಪ್, ಶೀಲ್ಡ್, ಸನ್ಮಾನಪತ್ರ, ಸ್ಮರಣಿಕೆಗಳೆಲ್ಲ ಮೇಲಿನ ಅಟ್ಟದ ಮೇಲೆ ಚೀಲದಲ್ಲಿ ತುಂಬಿಕೊಂಡಿತ್ತು. ನನಗೆ ಅಕಸ್ಮಾತ್ ಸಿಕ್ಕಾಗ ಆಶ್ಚರ್ಯ. ಅವರಾರಿಗೂ ಅದು ಹೇಳಿಕೊಳ್ಳುವ ವಿಷಯವೇ ಅಲ್ಲ!
ನಾನು ಕಿರಿಕಿರಿ ಮಾಡಿ ಮಾಡಿ ಈಗ ೭-೮ ವರ್ಷಗಳ ಈಚೆಗೆ ಒಂದು ಶೋಕೇಸ್ ಮಾಡಿಸಿ ಸಾಧ್ಯವಾದಷ್ಟು ಹಿಡಿಸಿದ್ದೇನೆ! ಅದು ಇನ್ನೂ ಗಾಜನ್ನು ಕಾಣದೇ ಹಾಗೇ ಉಳಿದಿದೆ !! 
    ಹೆಬ್ಬಾರರ ಕಾಲೇಜು ದಿನಗಳ ಸರ್ಟಿಫಿಕೇಟ್ ನೋಡುತ್ತಿದ್ದರೆ ಎಲ್ಲವೂ ಪ್ರಥಮ, ಪ್ರಥಮ, ಪ್ರಥಮ...... ಸಿಕ್ಕಷ್ಟು ಸಂಗ್ರಹಿಸಿ ಕಾದಿಡುವ ಕೆಲಸ ಮಾಡುತ್ತಿದ್ದೇನೆ.                                                                                     ಆ ಕ್ಷಣದಲ್ಲಿ; ಹೊಗಳಿದರೆ ಉಬ್ಬುವ ತೆಗಳಿದರೆ ಸಿಟ್ಟಾಗುವ ಮಗುಮನದ ಹೆಬ್ಬಾರರು ಮುಂಗೋಪಿ. ಊಟ, ತಿಂಡಿ, ಔಷಧ..... ಹೀಗೆ ಅಗತ್ಯವಿರುವ ವಸ್ತುಗಳನ್ನು ಬಿಟ್ಟರೆ ಬೇರೆ ಖರ್ಚಿನ ವಿಷಯ ಹೇಳಿದರೆ ಸಿಟ್ಟು ಸಿಡಿಯುತ್ತದೆ. ಯಾಕೆಂದರೆ ಅವರ ಬಳಿ ಹೇಗೆಂದರೆ ಹಾಗೆ ಹಣ ಮಾಡಲು ಸಾಧ್ಯವಿಲ್ಲ ! ‘ಪುಟ್ಟ ಪತ್ರಿಕೆ. ಮರ್ಯಾದೆಯಿಂದ ಊಟ ಮಾಡಿಕೊಂಡು ಹೋದರೆ ಸಾಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಇಲ್ಲವಾದರೆ ಕಾಲಿದ್ದಷ್ಟೇ ಹಾಸಿಗೆ ಮಾಡಿಕೊಳ್ಳಬೇಕು. ಉತ್ಪಾದಕ ಕೆಲಸ ಮಾಡಬೇಕು’ ಎನ್ನುತ್ತಿರುತ್ತಾರೆ. 

ಪರಿಸರ ದಿನವಾದ ಇಂದು ನಾನು ತುಂಬ ಹೆಮ್ಮೆಪಡುವ ಹೆಬ್ಬಾರರ ಕೆಲಸ ಅಂದರೆ ನಮ್ಮ ಮನೆಯಂಗಳದ ಹೊಂಗೆ ಮರ. ಹೊನ್ನಾವರದ ಬಳಿ ರಸ್ತೆಪಕ್ಕದಲ್ಲಿದ್ದು ಈಗ ನಡೆಯುತ್ತಿರುವ ಹೆದ್ದಾರಿ ಕೆಲಸಕ್ಕೆ ಬಲಿಯಾಗಲಿದ್ದ ಸುಮಾರು ೨-೩ ಆಳೆತ್ತರದ ೨ ಹೊಂಗೆಮರವನ್ನು ೪-೫ ಜನರನ್ನು ಕರೆದುಕೊಂಡು ಹೋಗಿ ಕೀಳಿಸಿ ತಂದು ಮನೆಯಂಗಳದಲ್ಲಿ ನೆಟ್ಟಿದ್ದರು. ಕಡಿದಷ್ಟೂ ಚಿಗುರುವ ಒಮ್ಮೇಲೆ ಎಲ್ಲ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ಮತ್ತೆ ಒಮ್ಮೇಲೆ ಚಿಗುರುವುದು, ಇನ್ನೂ ಹಳೆಯ ಕಾಯಿ ಹಣ್ಣಾಗಿ ಉದುರುವ ಮೊದಲು ಹೂವು, ಕಾಯಿಗಳೊಂದಿಗೆ ಮತ್ತೆ ನಳನಳಿಸುವ ಹೊಂಗೆ ಮರವನ್ನು ನೋಡುವುದೇ ನಮಗೆ ಪ್ರತಿದಿನದ ಅಚ್ಚರಿ. ವಿಶೇಷವೆಂದರೆ ಅದರ ಎಲೆಗಳು ಉದುರುವುದು ವರ್ಷಕ್ಕೊಮ್ಮೆ ಮಾತ್ರ! 

ಹೌದು. ಹೆಬ್ಬಾರರು ಹೇಳಿಕೊಳ್ಳುವುದು, ಹೇಳಿಕೊಡುವುದು ತುಂಬಾ ಇದೆ. ಅದು ಹಲವರಿಗೆ ಸ್ಫೂರ್ತಿಯಾಗಲಿದೆ. ಪಾಠವಾಗಲಿದೆ ಎಂಬುದು ಅವರೊಂದಿಗಿನ ಒಡನಾಟದ ನನ್ನ ಅನುಭವ.

ಈಗ ೨ ವರ್ಷಗಳ ಹಿಂದೆ; ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರು ಹೇಳಿದ್ದಾರೆಂದು ಬಂದ ಕಾರವಾರ ಆಕಾಶವಾಣಿಕೇಂದ್ರದ ಫ್ಲೋರಿನ್ ರೋಶ್ ಅವರು ‘ನೀವು ಚೆನ್ನಾಗಿ ಕವಿತೆ ಬರೆಯುತ್ತೀರಂತೆ. ನಿಮ್ಮ ಕವನದ ಪುಸ್ತಕ ಕೊಡಿ. ಆಕಾಶವಾಣಿಯಲ್ಲಿ ‘ಕವಿ-ಕವಿಮನ’ ಕಾರ್ಯಕ್ರಮದಲ್ಲಿ ನಿಮ್ಮ ಸಂದರ್ಶನ ಮಾಡುತ್ತೇವೆ’ ಎಂದರು. ಅದಕ್ಕೆ ಇವರು ‘ನನ್ನದು ಒಂದೇ ಕವನಸಂಕಲನ. ಅದು ತುಂಬಾ ಹಳೆಯದು. ನಾನೇನೂ ತುಂಬಾ ಕವಿತೆ ಬರೆದಿಲ್ಲ. ನನ್ನದು ಪುಟ್ಟ ಪತ್ರಿಕೆ. ನಿಮ್ಮ ಸಂದರ್ಶನಕ್ಕೆ ನಾನು ಯೋಗ್ಯನಲ್ಲ.....’ ಎಂದೆಲ್ಲ ತುಂಬಾ ವಿರೋಧ ವ್ಯಕ್ತಪಡಿಸಿದರು. ನಾನು ಒಳಗಿನಿಂದ ಸನ್ನೆ ಮಾಡಿ ಮುದ್ರಣಕ್ಕೆ ಸಿದ್ಧವಾಗಿದ್ದ ‘ಕವಿಯಲ್ಲದವನ ಕವಿತೆಗಳು’ ಪುಸ್ತಕ ತೋರಿಸಿದೆ. ಅಂತೂ ಅಸಮಾಧಾನದಿಂದಲೇ ಅದನ್ನು ಅವರ ಕೈಗಿತ್ತರು. ೫-೧೦ ನಿಮಿಷಗಳಲ್ಲಿ ಪುಸ್ತಕ ತಿರುವಿ ಹಾಕಿದ ಪ್ಲೋರಿನ್ ಅವರು ಪಟ್ಟುಬಿಡದೇ ಪ್ರಶ್ನೆ ಕೇಳಲು ಶುರುಮಾಡಿದರು. ಮೊದಲು ಆಲಸ್ಯ ಮಾಡಿದ್ದ ಹೆಬ್ಬಾರರು, ನಂತರ ಅವರು ಪ್ರಶ್ನೆ ಕೇಳಿ ಮುಗಿಯುವ ಮೊದಲೇ ಬಿಡದೇ ಉತ್ತರಿಸತೊಡಗಿದ್ದರು...... ತಾಸುಗಟ್ಟಲೇ ಅವರ ಸಂದರ್ಶನ ನಿರರ್ಗಳವಾಗಿ ನಡೆದಿತ್ತು ! ಆಕಸ್ಮಿಕ ಭೇಟಿ ಕೊಟ್ಟು ನಮಗೂ ಅಪರೂಪದ ಸಂದರ್ಶನ ಕೇಳುವ ಭಾಗ್ಯ ಒದಗಿಸಿದ ಪ್ಲೋರಿನ್ ಅವರಿಗೆ ಮನದುಂಬಿ ವಂದಿಸಿದ್ದೆ....... 
(ಅವರ ಆಕಾಶವಾಣಿ ಸಂದರ್ಶನದ ಆಡಿಯೋ ಫೇಸ್‌ಬುಕ್ ನಲ್ಲಿ  ಹಂಚಿಕೊಳ್ಳುತ್ತಿದ್ದೇನೆ.......)
ಇವೆಲ್ಲವನ್ನೂ ಇಲ್ಲಿ ಬರೆದು, ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ; ಇನ್ನೂ ಪುಸ್ತಕ ಮಾಡಲಾಗದ, ಕಾದಿಡಲೇಬೇಕಾದ ಹೆಬ್ಬಾರರ ಹಲವು ಲೇಖನ, ಕವನ, ಕಥೆ, ಪತ್ರ, ಫೋಟೊಗಳನ್ನೆಲ್ಲ ಬಿಡುವಾದಾಗ ಸಂಗ್ರಹಿಸಿ ಅಂತರ್ಜಾಲದಲ್ಲಿ ಕಾದಿಡುವ ಪುಟ್ಟ ಪ್ರಯತ್ನ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಶುಭ ಹಾರೈಕೆಗಳಿರಲಿ...........

- ರೇಖಾ ಕೃಷ್ಣಮೂರ್ತಿ ಹೆಬ್ಬಾರ್, ಕರ್ಕಿ

ಕಾಮೆಂಟ್‌ಗಳು

  1. ಖರೇ ಹೌದು. ಅವ ' ಹೇಳಿಕೊಳ್ಳದವ' ನನ್ನ ತಮ್ಮ.

    ಪ್ರತ್ಯುತ್ತರಅಳಿಸಿ
  2. ರೇಖಾ ಹೆಬ್ಬಾರ್ ಅವರ... ಹೆಬ್ಬಾರರು ಹೇಳಿಕೊಳ್ಳುವುದಿಲ್ಲ., ಲೇಖನಕ್ಕೆ ಪ್ರತಿಕ್ರಿಯೆ... ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಕರ್ಕಿ ಅವರ ಧರ್ಮಪತ್ನಿ ರೇಖಾ ಹೆಬ್ಬಾರ್ ಬರೆದ ಲೇಖನ ತುಂಬಾ ಮೆಚ್ಚುಗೆಯಾಯಿತು ಅವರು ಹೇಳಿದ ಪ್ರತಿಯೊಂದು ನೂರಕ್ಕೆ ನೂರು ಸತ್ಯ ಮಗಳಂತಿರುವ ರೇಖಾಳ ನಾನು ನೋಡಿಲ್ಲ ಆದರೆ ಹಬ್ಬ ಹುಣ್ಣಿಮೆಗಳಲ್ಲಿ ಕೃಷ್ಣಮೂರ್ತಿಯವರ ಜಯಂತಿಯ ದಿನ ಅವರಿಗೆ ಶುಭಕೋರಿ ಆಶೀರ್ವದಿಸಿ ದ್ಧೇನೆ ಆದರೆ ಕೃಷ್ಣಮೂರ್ತಿ ಅವರು ಹೇಳುತ್ತಿದ್ದರು.. ಆಫೀಸಿನ ಎಲ್ಲಾ ಜವಾಬ್ದಾರಿಯನ್ನು ರೇಖಾಗೆ ನೋಡಿಕೊಳ್ಳುತ್ತಾಳೆ ಎಂದು ಈ ಲೇಖನ ಓದಿದಾಗ ಅವಳು ಒಬ್ಬಳು ಉತ್ತಮ ಬರಹಗಾರ್ತಿ ಸಾಹಿತ್ಯಾಸಕ್ತಿ ಉಳ್ಳವಳು ಎಂದು ತಿಳಿಯಿತು ಎಲ್ಲವನ್ನೂ ನಿರ್ಭಿಡೆಯಿಂದ ನೇರವಾಗಿ ಸತ್ಯವಾಗಿ ಹೇಳುವ ಈ ಗುಣ ಪತಿಯಿಂದಲೇ ಬಂದಿರಬೇಕು ಕೃಷ್ಣಮೂರ್ತಿಯವರ ಬಗ್ಗೆ ಬರೆದ ಲೇಖನ ಓದಿದಾಗ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಆಸೆಯಾಗುತ್ತದೆ ಇನ್ನು ಓದಬೇಕೆನಿಸುತ್ತದೆ
    ಕೃಷ್ಣಮೂರ್ತಿಯವರು ತಂದೆಯವರು ನಾರಾಯಣ ಹೆಬ್ಬಾರ್ ದಿವಂಗತರು ಉತ್ತಮರು ನಿಷ್ಕಪಟ ನಿಸ್ವಾರ್ಥಿ ಹೃದಯ ನನ್ನ ಸ್ನೇಹಿತರಾಗಿದ್ದರು ಊರಿಗೆ ಬೇಕಾದ ಸದ್ಗೃಹಸ್ಥರು ಮತ್ತು ಅವರಾಗಿದ್ದರು
    ಕೃಷ್ಣಮೂರ್ತಿ ಹೆಬ್ಬಾರರು ಏನನ್ನು ಹೇಳುವುದಿಲ್ಲ ಹೇಳಿದರೆ ಎಲ್ಲವನ್ನು ವಿವರವಾಗಿ ಹೇಳುತ್ತಾರೆ ಎಂಬ ಮಾತು ನಿಜ ಅವರದು ಬಹುಮುಖ ವ್ಯಕ್ತಿತ್ವ ಓದಿನ ಅನುಭವ ಅಭಿನಯ ಆಟ-ಪಾಠ ಕಥೆ ಕವಿತೆ ವಿಮರ್ಶೆ ಬರಹ ಬದುಕು ಬಹಳಷ್ಟಿದೆ ಜ್ಞಾನಕೋಶ ಅವರ ಮನೆಯೊಂದು ಗ್ರಂಥಾಲಯ ಉತ್ತಮ ಭಾಷಣಕಾರ ಅನಾಥ ಬಂಧು ಸತ್ಯಕ್ಕಾಗಿ ಹೋರಾಟ ಮಾಡುವ ಹೋರಾಟಗಾರ ಬಡವರು ದೀನರು ದಲಿತರು ನಿರ್ಗತಿಕರು ಅಂದರೆ ಅವರಿಗೆ ಕನಿಕರ ಅವರಿಗೆ ಇವರದು ಸಹಾಯಹಸ್ತ ಸಹಾಯಹಸ್ತ ಇಂಗ್ಲಿಷ್ ಕನ್ನಡ ಕವಿಗಳ ಕವಿತೆಗಳು ಅವರಿಗೆ ಬಾಯಿಪಾಠ ಅವರು ನಿಸರ್ಗ ಪ್ರೇಮಿ ಹಚ್ಚಹಸುರಿನ ಹುಲ್ಲು ಗದ್ದೆ ಇಚ್ಚೆಯಲಿ ಹಾಡುತ್ತ ಹಕ್ಕಿಗಳ ಸ್ವರ ಸೌಂದರ್ಯ ಸೂರ್ಯ ಯಾಗಿರುವ ಸೂರ್ಯಾಸ್ತ ಸೂರ್ಯೋದಯ ಅವರ ಪ್ರಿಯ ವಸ್ತು ತಪ್ಪನ್ನು ಅಸತ್ಯವನ್ನು ಡಂಭಾಚಾರ ವನ್ನು ಕಂಡರೆ ಅವರು ಸಿಡಿಮಿಡಿಗೊಳ್ಳುತ್ತತ್ತಾರೆ ಸ್ವಲ್ಪ ಮುಂಗೋಪಿ ಆದರೆ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎನ್ನುವ ಮಾತು ಅವರಿಗೆ ಅನ್ವಯಿಸುತ್ತದೆ ಅವರ ದಿನಚರಿಯನ್ನು ಪ್ರತ್ಯಕ್ಷ ನೋಡಿ ರೆಖಾಳು ಸುಂದರವಾಗಿ ವ್ಯಕ್ತಿತ್ವ ಚಿತ್ರಿಸಿದ್ದಾಳೆ ಅವಳೊಬ ಆದರ್ಶ ಸತಿ ಪತಿಗೆ ತಕ್ಕ ಸತಿ ಸ್ತ್ರೀ ಭಾಗ್ಯ ಪುರುಷನ ಪುಣ್ಯ ಎಂಬುದು ನಿಜ ಹೊಂಗೆಮರ ಬೆಳೆಸಿದ್ದು ಅವರ ನಿಸರ್ಗ ಪ್ರೇಮಕ್ಕೆ ಸಾಕ್ಷಿ ದೇವರು ದಂಪತಿಗಳಿಗೆ ನೂರು ವರ್ಷ ಸುಖ ದಾಂಪತ್ಯವನ್ನು ಕೊಡಲೆಂದು ಪ್ರಾರ್ಥಿಸುವೆ ಇಚ್ಚೆಯನರಿವ ಸತಿ ಯಾಗು ಎಂದು ಅವಳನ್ನು ಹರಸತ್ತೇನೆ ಕೃಷ್ಣಮೂರ್ತಿಯವರ ಸಂಸಾರ ಸುಖ ಮಯವಾಗಲಿ ಉಪಕಾರಿಯಾಗಿ ಕನ್ನಡ ಸಾಹಿತ್ಯ ಸೇವೆ ನಿರಂತರ ಸಾಗಲಿ ಊರಿಗಾಗಿ ದೇಶಕ್ಕಾಗಿ ಕನ್ನಡ ಸಾಹಿತ್ಯ ಅಭಿವೃದ್ಧಿಗಾಗಿ ಅವರ ಜೀವನ ಸಾಗಲಿ ಎಂದು ಆಶೀರ್ವದಿಸುವೆ ಸಿರಿಗನ್ನಡಂ ಗೆಲ್ಗೆ. ಸರಿಗನ್ನಡಮ ಗೆಲ್ಗೆ
    ರೇಖಾಳಿಗೂ ಕೃಷ್ಣಮೂರ್ತಿ ಅವರಿಗೂ ನನ್ನ ಧನ್ಯವಾದಗಳು ಶುಭವಾಗಲಿ ನಾರಾಯಣ ಎಸ್ ಭಟ್ ಗಾಬ್ರಿ ಕರ್ಕಿ
    M .A M Ed ೮೭ ವರುಷ ವಯೊಮಾನ

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಹಿರಿಯರಿಗೆ ನೂರು ನೂರು ನಮನಗಳು 🙏🙏
      ನನಗೆ ನನ್ನ ಮಾವನೇ ಬಂದು ಶುಭ ಆಶೀರ್ವಾದ ಮಾಡಿದಂತೆ ಅನಿಸಿತು. ಧನ್ಯನಾದೆ ಸರ್ 🙏🙏

      ಅಳಿಸಿ
  3. ಅಕ್ಕಾ... ಕಡೆಗೂ ಇಂಥದ್ದೊಂದು ಧೈರ್ಯ ಮಾಡಿದ್ರಿ ನೀವು...

    ಬಹಳ ಆಪ್ತವೆನಿಸಿತು ನಿಮ್ಮ ಬರಹ. ರವಿ ಭಟ್ ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದನ್ನು ನೋಡಿ ಈ ಕ್ಷಣವೇ ಓದಿದೆ. ಪ್ರತಿಕ್ರಿಯಿಸಬೇಕು ಅನಿಸಿತು.

    ಕೃಷ್ಣಮೂರ್ತಿ ಹೆಬ್ಬಾರರು ಒಂದು ಅಧ್ಬುತ ಶಕ್ತಿ. ನಿಸ್ಕಲ್ಮಶ ಮನಸ್ಸಿನ ಅಪರೂಪದ ಪತ್ರಕರ್ತ. ಅವರ ನಿತ್ಯದ ಕಾಯಕ ಬರವಣಿಗೆಯಷ್ಟೇ ಅಲ್ಲ, ಮತ್ತಿನ್ನೇನೇನೆಲ್ಲಾ ಇವೆ ಎನ್ನುವುದನ್ನು ಚೆಂದವಾಗಿ ತಿಳಿಸಿದ್ದೀರಿ. ನಿಷ್ಪಕ್ಷಪಾತವಾದ, ನಿಷ್ಠುರವಾದ, ತಪ್ಪನ್ನು ಖಂಡಿಸುವ ಹೆಬ್ಬಾರರಂಥ ಪತ್ರಕರ್ತರ ಗುಣ ಮನೆಮಂದಿಗೆ ಅನೇಕ ಸಂದರ್ಭಗಳಲ್ಲಿ ಸವಾಲಾಗಿರುತ್ತದೆ. ಆದರೆ ನೀವು ಅದನ್ನು ಹೇಗೆ ಸಹಿಸಿಕೊಂಡು, ನಿಭಾಯಿಸಿದಿರಿ ಎನ್ನುವುದನ್ನು ನನ್ನ ಗಮನ ಸೆಳೆಯಿತು. ಅವರ ಅದೆಷ್ಟೋ ಯಶಸ್ಸಿನ ಹಿಂದೆ ನೀವಿದ್ದೀರಿ ಅಕ್ಕಾ. ಓದಿ ಖುಷಿಪಟ್ಟೆ.

    ಕೃಷ್ಣಮೂರ್ತಿ ಹೆಬ್ಬಾರರಿಗೆ, ನಿಮಗೆ ನನ್ನದೊಂದು ಉದ್ದಂಡ ನಮಸ್ಕಾರ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಪ್ರಶಾಂತೋ, ಧನ್ಯವಾದ.
      ಬಂಧುವಾದರೂ ಬಹಳ ವರ್ಷಗಳ ನಂತರದ ಭೇಟಿ. ನಿನ್ನ ಮಾತು ಕೇಳಿ ಖುಷಿಯಾಯ್ತು. ಬಿಡುವಿರದ ಕೆಲಸದ ಮಧ್ಯೆ ನಿನಗೆ ಉತ್ತರಿಸಲು ತಡವಾಯಿತು. ಸಹನೆಯೊಂದಿಗೆ ಏನನ್ನೂ ನಿಭಾಯಿಸುವ ಗುಣ ಬಹುಶಃ ನಮಗೆ ರಕ್ತಗತ! ದೇವರು ನಮಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಪ್ರಾರ್ಥಿಸೋಣ.
      ಹೆಬ್ಬಾರರಿಗೆ ನಿನ್ನ ಹಾಗೂ ನಿನ್ನ ಕುಟುಂಬದ ಕಲೆ, ಅಚ್ಚುಕಟ್ಟುತನದ ಬಗ್ಗೆ ಸದಾ ಅಕ್ಕರೆ. ಅಭಿಮಾನ.
      ನಿನ್ನ ಪ್ರೀತಿ, ಅಭಿಮಾನಕ್ಕೆ ಶರಣು

      ಅಳಿಸಿ
  4. Congrats to my friend, college & cricket mate, #murthy💜💜..As I know him closely, he is very sharp, knowledgeable, friendly & above all has the talent to excel in any field, he enters!

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು ಸರ್.
      ನಿಮ್ಮ ಗೆಳೆಯ ಹೆಬ್ಬಾರರಿಗೆ ಹೇಳಿದ್ದೇನೆ.
      ನೀವು ಯಾರೆಂದು ತಿಳಿಯಲಿಲ್ಲ.
      ನಮ್ಮ ಮನೆಗೆ ಸದಾ ಸ್ವಾಗತ

      ಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮತ್ತೆ ಮತ್ತೆ ನೆನಪಾಗುವ ಅತ್ತಿಗೆಯ ಆ ದೋಸೆ......

  ನನ್ನ ಅತ್ತಿಗೆ ವಿದ್ಯಾ ಯಾವಾಗಲೂ ಚುರುಕು. ಹಳ್ಳಿಮನೆಯಲ್ಲಿ ಉಳಿದು ಮನೆ-ಮಕ್ಕಳು, ಆಳು-ಕಾಳು, ಅಡುಗೆ, ಕೊಟ್ಟಿಗೆ, ತೋಟ, ದೇವರಕಾರ್ಯ....... ಹೀಗೆ ಕೈತುಂಬಾ ಕೆಲಸವಿದ್ದರೂ ಎಲ್ಲವನ್ನೂ ನಿಭಾಯಿಸಿ ಸಭೆ-ಸಮಾರಂಭ, ಜಾತ್ರೆ, ಬಂಧು-ಬಾoಧವರ ಮನೆಯ ಕಾರ್ಯ, ಮಕ್ಕಳ ಜೊತೆ ಆಟ-ಒಡನಾಟ ಎಲ್ಲದರಲ್ಲೂ ಸಮಯಕ್ಕೆ ಭಾಗವಹಿಸಿ ಸಂಭ್ರಮಪಡುತ್ತಾಳೆ. ಹುಟ್ಟಿನಿಂದ ಪಟ್ಟಣದಲ್ಲಿ ಬೆಳೆದರೂ ಹಳ್ಳಿ ಜನ, ಜೀವನ ಇಷ್ಟಪಡುವ ಅತ್ತಿಗೆ ಬಾಲ್ಯದಲ್ಲೇ ರಾಮಾಯಣ, ಮಹಾಭಾರತವನ್ನು ಓದಿ, ಅರಿತು ವಿವರಿಸುವ; ಹಿಂದಿ, ಕೊಂಕಣಿ ಭಾಷೆಗಳನ್ನೂ ಚೆನ್ನಾಗಿ ಮಾತನಾಡಬಲ್ಲ ನನ್ನ ಅತ್ತಿಗೆ; ಹಳ್ಳಿಮನೆಯನ್ನು, ಹಳ್ಳಿಯಲ್ಲಿರುವ ಗಂಡುಮಕ್ಕಳನ್ನು ತಿರಸ್ಕರಿಸುವ ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ, ಪಾಲಕರಿಗೂ ಮಾದರಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅಮ್ಮನ ಸೊಸೆಯಾಗಿ, ಅಣ್ಣನ ಮಡದಿಯಾಗಿ ಅವರ ಕಷ್ಟ-ಸುಖ ಅರಿತು ಮಕ್ಕಳ ಜೊತೆ ತುಂಬು ಜೀವನ ನಡೆಸುತ್ತಿರುವ ಅತ್ತಿಗೆ ನನಗೆ ಎಂದಿಗೂ ಅಚ್ಚುಮೆಚ್ಚು. ಆ ದಿನ ಅಮ್ಮನ ಮನೆಗೆ ಹೋದಾಗ ನಾವು ಮಾತನಾಡುತ್ತ ರಾತ್ರಿ ಮಲಗುವಾಗ ತಡವಾಗಿತ್ತು. ಆದರೂ ಬೆಳಿಗ್ಗೆ ಬೇಗ ಎದ್ದು ಆಕಳ ಹಾಲು ಕರೆದು ಪುಟ್ಟ ಕರುವಿಗೆ ಹಾಲುಕುಡಿಸಿ, ಬಿಸಿಲೇರುವ ಮುಂಚೆ ಅವನ್ನು ಮೇಯಲು ಬಿಟ್ಟು; ಕೊಟ್ಟಿಗೆ ಕೆಲಸ ಮುಗಿಸಿ ಮನೆಗೆ ಬಂದು ಶಾಲೆಗೆ ಹೋಗುವ ಮಕ್ಕಳನ್ನು ತಯಾರಿ ಮಾಡುವ ಕೆಲಸ. ಅಂದು ಗಡಿಬಿಡಿಯಲ್ಲಿ ಅತ್ತಿಗೆ ಉಳಿದ ದೋಸೆ ಹಿಟ್ಟಿಗೆ ಹಿತ್ತಲಲ್ಲಿ ಬೆಳೆದ...

ತಪ್ಪು ಕಂಡರೆ ತಿದ್ದಿ...... ಒಪ್ಪು ಅನಿಸಿದರೆ ಹರಸಿ......

ಆತ್ಮೀಯರೇ,  ನಮಸ್ತೆ.  ನಾನು ಬಹುದಿನಗಳಿಂದ ನನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಬೇಕು ಅಂದುಕೊಂಡಿದ್ದೆ. ಕೆಲಸದ ಒತ್ತಡ, ಸಮಯದ ಅಭಾವ, ಅನಾರೋಗ್ಯ, ಆಲಸ್ಯದಿಂದ ದಿನ ದೂಡುತ್ತಲೇ ಇದ್ದೆ. ಆದರೆ ಇಂದು ಮತ್ತೆ ಪ್ರಾರಂಭ ಮಾಡಬೇಕೆಂಬ ನಿರ್ಧಾರ ಮಾಡಿ ಬೆಳಗಿನ ತಿಂಡಿ ಮಾಡುತ್ತ ನಾನು 3-4 ತಿಂಗಳುಗಳಿಂದ ನೋಡುತ್ತಿರುವ Indiamoney.com  ತೆಗೆದೆ. ಅರೆ! ಹೊಸ ಕೋರ್ಸ್. ಬಹಳ ಖುಷಿಯಾಯ್ತು. ಅಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸುವ ಕುರಿತು ತುಂಬಾ ಸರಳವಾಗಿ, ಸರಾಗವಾಗಿ, ಸುಂದರವಾಗಿ ವಿವರಣೆ ನೀಡಿದ್ದರು. ಸಂಭ್ರಮದಿಂದ ನಾನು ಅಂದೇ ಯುಟ್ಯೂಬ್ ಚಾನೆಲ್ ಶುರು ಮಾಡುವ ಹುಮ್ಮಸ್ಸಿನಲ್ಲಿದ್ದೆ. ಆದರೆ ಆಗಾಗ ಬಿಡುವು ಮಾಡಿಕೊಂಡು ಕೆಲಸ ಮುಗಿಸಿ ಅವರ ಎಲ್ಲ ವೀಡಿಯೋ ಮುಗಿಸುವುದರೊಳಗೆ ಸಂಜೇ ಆಗಿತ್ತು. ನನಗೂ ಕೆಲಸ ಮಾಡಿ ಸುಸ್ತು.......  ಮತ್ತೆ ಮುಂದೂಡಿದೆ.  2-3 ದಿನಗಳೇ ಕಳೆಯಿತು.. ಯೂಟ್ಯೂಬ್ ಗೆ ಸರಿಯಾಗಿ ವೀಡಿಯೋ ಮಾಡಲು ಕ್ಯಾಮೆರಾ ಎದುರು ತುಂಬಾ ಪ್ರಯೋಗ ಮಾಡಿ ಕಲಿಯಬೇಕು. ತುಂಬಾ ಸಮಯ ಬೇಕು ಎಂದು ಯೋಚಿಸಿ ಸದ್ಯ ಬ್ಲಾಗ್ ಮಾಡುವ ನಿರ್ಧಾರಕ್ಕೆ ಬಂದು ಇದೀಗ Rekha Hebbar's ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ.......... ನಾನು ಗೃಹಿಣಿ. ಮದುವೆಯಾಾಗಿ  26 ವರ್ಷ ಕಳೆಯಿತು. ಹಿಂದೆ ತವರು ಮನೆಯಲ್ಲಿ ಕಳೆದ ದಿನಗಳಲ್ಲಿ ಕಿವಿಗೆ ರೇಡಿಯೋ ಹಿಡಿದು ಅದರಲ್ಲಿ ...

'ಕಸುವಿನ ಬಳ್ಳಿ'ಗೆ ಕೈಮುಗಿದೆ....

ಅಂದು ತುಂಬಾ ಸೊಂಟ ನೋವು. ಕೂತಲ್ಲಿಂದ ಎದ್ದರೆ ನೋವು. ಎಲುಬಿಗೇನಾಗಿದೆಯೇನೋ ಅಂತ ಹೆದರಿದ್ದೆ. ಮೈಕೈ ಕೂಡಾ ಅಲ್ಲಲ್ಲಿ ನೋವು.  ಆಯಿಯ ಫೋನ್ ಬಂದಿತ್ತು. ಸೊಂಟನೋವು ಅಂದೆ. ‘ಕಸುವಿನ ಬಳ್ಳಿ ಕುಡಿ’ ಅಂದಳು. ‘ಅಯ್ಯೋ ಬೇಸರ’ ಅಂದೆ. ‘ಆರಾಮ ಆಗ ಅಂದ್ರೆ ಕುಡ್ಯ’ ಅಂದಳು. ಹಿತ್ತಲಿಂದ ಅದನ್ನು ತಂದು ಸೊಂಯ್ಸಿ ತೊಳೆದು ಜಜ್ಜಿ ಅಥವಾ ಕತ್ತರಿಸಿ ರುಬ್ಬಿ........ ಇದೆಲ್ಲಾ ರಗಳೆ ಕೆಲ್ಸ ನನಗಾಗಿ ಮಾಡಕೊಳ್ಳಲಿಕ್ಕೆ ಬೇಜಾರು ಅನ್ನಿಸ್ತು. ಆದರೂ ಆಯಿಗೆ ಬೇಜಾರಾಗಬಾರದೆಂದು ಕಸುವಿನಬಳ್ಳಿ ತಂದು ಕತ್ತರಿಸಿ ಸ್ವಲ್ಪ ಜೀರಿಗೆ ಜೊತೆ ಮಿಕ್ಸರ್‌ಗೆ ಹಾಕಿ ತಿರುಗಿಸಿ ನೀರು ಹಾಕಿ ಸೋಸಿ ಕುಡಿದೆ. ಅದಕ್ಕೆ ಮತ್ತೆ ನೀರು ಹಾಕಿಟ್ಟು ಚೆನ್ನಾಗಿ ಕಿವುಚಿ ಮತ್ತೆ ೨-೩ ಬಾರಿ ಕುಡಿದೆ. ಕೆಳಗೆ ಕೂರಲು, ಸ್ವಲ್ಪವೂ ಬಗ್ಗಲು ಆಗದೆ ಭಯಗೊಂಡಿದ್ದೆ.  ಮರುದಿನ ಬೆಳಿಗ್ಗೆ ಎದ್ದಾಗ ೧೦% ನಷ್ಟು ಕಡಿಮೆಯಾಗಿತ್ತು. ಪೂರ್ತಿ ಕಡಿಮೆ ಆಗುವ ಹಾಗೆ ತೋರಲಿಲ್ಲ. ಮತ್ತೆ ಆಯಿ ಮಧ್ಯಾಹ್ನ ಫೋನ್ ಮಾಡಿ ವಿಚಾರಿಸಿದಳು. ‘ಹೇಂಗಿದ್ಯೆ? ಕಸುವಿನ ಬಳ್ಳಿ ಮಾಡ್ಕಂಡ್ಯಾ?’ ಎಂದು ಕೇಳಿದಳು. ‘ನಿನ್ನೆ ಕುಡಿದಿದ್ದೆ. ಇವತ್ತು ಮತ್ತೆ ಮಾಡುದಾ?’ ಕೇಳಿದೆ. ‘ಕಡಿಮೆ ಆಗಿಲ್ಲ ಅಂದ್ರೆ ಇವತ್ತೊಂದಿನ ಕುಡಿ’ ಅಂದಳು. ಮತ್ತೆ ಮಾಡಿ ಕುಡಿದೆ. ಡಾಕ್ಟರ್ ಹತ್ರ ಹೋಗೋಣ ಅಂದ್ರೂ ದಬ್ಬೆ ಕಟ್ಟಿಕೊಂಡಂತೆ ಸೊಂಟ ದಕ್ಕಾಗಿತ್ತು.  ಸಂಜೆ ಆಗುವಾಗ ನನಗೇ ಆಶ್ಚರ್ಯ. ಅರೆ ಸೊಂಟನೋವು ಮರೆತೇ ಹ...

ನಮ್ಮ ಮನೆಯಲ್ಲಿ ಹಂಡಾಹುಂಡಿ ಜಗಳ!

ಮೊನ್ನೆ ನಮ್ಮ ಮನೆಯಲ್ಲಿ ಅಪ್ಪ - ಮಗನಿಗೆ ಹಂಡಾಹುಂಡಿ ಜಗಳ. ಮುನಿಸು. ಸಿಟ್ಟು. ಕೋಪ....  ಯಾಕೆ ಗೊತ್ತಾ? ವಿಷಯ ಕೇಳಿದರೆ ನಿಮಗೆ ದಂಗಾಗಬಹುದು. ಯಾಕೆ ಹೇಳಿ?  ಯಾಕೆಂದ್ರೆ ಕಾರಣ ಇಷ್ಟೇ 'ಗಿಡಗಳಿಗೆ ನಾನು ನೀರು ಹಾಕ್ತೇನೆ.... ಇಲ್ಲ ನಾನು.... ಇಲ್ಲ ನಾನು..... ಇಲ್ಲಾ ನಾನೇ.....' ಹೀಗೆ ಕಂಡಾಪಟ್ಟೆ ಜಗಳ. ನೀನು ನೀರು ಹಾಕು ಅಂತಲ್ಲ ಅಥವಾ ನೀನು ಕೆಲಸ ಮಾಡು ಅಂತಲ್ಲ, 'ನಾನು ಮಾಡ್ತೀನಿ, ನಾನು ಮಾಡ್ತೀನಿ' ಅಂತ ಜಗಳವೇ ಜಗಳ!!   ಹೌದು, ಮಗನ ಹಠಕ್ಕೆ ಮಣಿದು ಅವನದೇ ಖರ್ಚಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 300ಕ್ಕೂ ಹೆಚ್ಚು ಗಿಡ ಅರಣ್ಯ ಇಲಾಖೆ ನರ್ಸರಿಯಿಂದ ತಂದು ಗುಡ್ಡದ ಜಾಗದಲ್ಲಿ ನೆಟ್ಟಿದ್ದೆವು. ಅದರಲ್ಲಿ 150 ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಕಾಡು ಜಾತಿಯ ಗಿಡವಾದರೂ ಅದು ಪುಟ್ಟದಾಗಿರುವುದರಿಂದ ಈ ಬಾರಿ ಅದಕ್ಕೆ ನೀರು ಬೇಕು. ಹಾಗಾಗಿ ಅಲ್ಲೊಂದು ನೀರಿನ ಟ್ಯಾಂಕ್ ತಂದಿಟ್ಟು; ಅದರಲ್ಲಿ ಹಣ ಕೊಟ್ಟು ನೀರು ಸಪ್ಲೈ ಮಾಡುವವರಿಂದ ನೀರು ತುಂಬಿಸಿ ಬಕೆಟ್ ನಲ್ಲಿ ಹಿಡಿದು ಗಿಡಗಳಿಗೆ ಹಾಕುವ ಕೆಲಸ. ಇದು ಇಬ್ಬರಿಗೆ ಸುಮಾರು 2 ತಾಸಿನ ಕೆಲಸ.  ಮಗನಿಗೆ ವರ್ಕ್ ಫ್ರಮ್ ಹೋಮ್. ಹಾಗಾಗಿ ತನಗೆ ಕೆಲಸ ಇದ್ದಾಗ ಅಪ್ಪ ಒಬ್ಬರೇ ಹೋಗುತ್ತಾರೆ ಎಂಬ ಚಿಂತೆ ಮಗನಿಗೆ. ಮಗನಿಗೆ ಕಷ್ಟ ಆಗಬಾರದು ಎಂದು ಅಪ್ಪನಿಗೆ. ಹೀಗೆ ಇಬ್ಬರ ಕಾಳಜಿಯ ಜಗಳ ! ನನಗೆ ಮನದಲ್ಲೇ ನಗು. ಹೆಮ್ಮೆ.....  ಕೊನೆಗೂ ಮಗ ಅಪ್ಪನ ಕಣ್ತ...

ಮರೆಯದಿರೋಣ ಈ ‘ಮೃಗಶಿರ ಮಳೆ’ಯ......

     ನನ್ನತ್ತೆ ಮಾತುಮಾತಿಗೆ ಗಾದೆ ಹೇಳುತ್ತಿದ್ದುದು ಆಗಾಗ ನೆನಪಿಗೆ ಬರುತ್ತಿರುತ್ತದೆ. ಮಳೆಗಾಲದ ಆರಂಭದಲ್ಲಿ ಆಗಾಗ ಬರುವ  ಬಿಸಿಲಿಗೆ ಒದ್ದೆಬಟ್ಟೆ, ಇನ್ನೂ ಒಣಗದ ಮಾವಿಹಣ್ಣಿನ ಹಪ್ಪಳ ಅಥವಾ ಇನ್ನೇನೋ ಸಾಮಾನುಗಳನ್ನು ಅಂಗಳದಲ್ಲಿ ಹಾಕಲು ಹೋಗಿ ತಿರುಗಿ ಒಳಗೆ ಬರುವಷ್ಟರಲ್ಲಿ ಮಳೆ ಬರುತ್ತಿತ್ತು. ಆಗೆಲ್ಲ ಅತ್ತೆ ಮಾವನ ಮುಂದೆ ಹೇಳಿ ಮಾವನನ್ನು ಚುಡಾಯಿಸುತ್ತಿದ್ದ ಮಳೆಗಾಲದ ಮುಖ್ಯ ಗಾದೆ ‘ಮಳೆಗಾಲದ ಬಿಸಿಲು ನಂಬುಲಿಲ್ಲೆ, ಮನೆಲಿ ಗಂಡನ ನಗೆ ನಂಬುಲಿಲ್ಲೆ’ ! ಆಗ ಆತ, ‘ಅದು ಹಾಗಲ್ಲ- ಮಳೆಗಾಲದ ಬಿಸಿಲು ನಂಬುಲಿಲ್ಲೆ, ಮನೆ ಹೆಂಡ್ತಿ ನಗೆ ನಂಬುಲಿಲ್ಲೆ’ ಅಂತ ತಿರುಗಿಸಿ ಹೇಳುತ್ತ ತಮಾಷೆ ಮಾಡುತ್ತಿದ್ದ !! ಆದರೆ ಯಾವುದು ಸತ್ಯವೋ ನನಗಂತೂ ಗೊತ್ತಿಲ್ಲ. ‘ಮೃಗಶಿರೆ ಮಳೆಯಲ್ಲಿ ಮೃಗದ ಕೊಂಬೂ ಚಿಗುರುತ್ತದೆ’ ಎಂದು ಪ್ರತಿವರ್ಷ ಈ ಸಮಯದಲ್ಲಿ ಅತ್ತೆ ಹೇಳುವ ಮಾತಿದು. ನಿಜ. ಅತ್ತೆ - ಮಾವ ಮನೆಯಂಗಳದಲ್ಲಿ ಬೆಂಡೆ ಬೀಜ, ಪಡವಲ ಬೀಜ, ಹೀರೇಬೀಜ ಬಿತ್ತಿ ಅದಕ್ಕೆ ಮಣ್ಣು, ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದ ಕಾಲವದು. ಬೇಕಾಬಿಟ್ಟಿ ಬೆಳೆದ ಗಿಡದ ಟೊಂಗೆಗಳನ್ನೆಲ್ಲ ಕಡಿದು, ಬೇಕಾದಲ್ಲಿ ನೆಟ್ಟು - ಬೇಕಾದವರಿಗೆ ಕೊಟ್ಟು, ಬೇಕಾಗಿದ್ದು ಅವರಿಂದ ತರುವ ಕಾಲ......  ೭೮ ವರ್ಷ ದಾಟಿದ ಆಚೆಮನೆ ಅಪ್ಪಚ್ಚಿ - ಚಿಕ್ಕಿ ಪ್ರತಿವರ್ಷ ಅಂಗಳದಲ್ಲಿ ಬೆಂಡೆ, ಹೀರೆ, ಪಡುವಲ, ಹಾಗಲ.... ಅಂತ ಬೀಜ ಬಿತ್ತಿ; ಬರುವ ಗಿಡದ ಆರೈಕೆ ಮಾಡು...

ಮೈಂಡ್ ಫ್ರೆಶ್ ಮಾಡಿದ ನನ್ನ ತವರು... ಹರಿಣಿ.... ಚಿಪ್ಸು... ಇತ್ಯಾದಿ

ಆ ದಿನ ಆಯಿಯ ಮನೆಗೆ ಹೋಗಿದ್ದೆ. ಅತ್ತಿಗೆ ಹಲಸಿನ ಕಾಯಿ ಚಿಪ್ಸ್ ಮಾಡಲು ತಯಾರಿ ನಡೆಸಿದ್ದಳು.  ಅಲ್ಲಿ ತೋಟ, ಗದ್ದೆಯ ಕೆಲಸಕ್ಕೆ ಬರುವ ಹಾಣಿ, ತುಳ್ಸು, ವೆಂಕಟೇಶ ಹೀಗೇ ಯಾರಾದರೂ ಮರ ಹತ್ತಿ ಹಲಸಿನ ಕಾಯಿ ಕೊಯ್ದು ಕೊಡುವವರು. ಕೆಲವೊಮ್ಮೆ ಅಣ್ಣನೇ ಏಣಿ ಹತ್ತಿ ಕೊಕ್ಕೆಯಿಂದ ಕೊಯ್ದು ಬೀಳಿಸುತ್ತಾನೆ.      ಆ ದಿನ ಅಲ್ಲೇ ಹತ್ತಿರ ಇರುವ ಚಿಕ್ಕಪ್ಪನ ಮನೆಯಿಂದ ತಂದ ಹಲಸಿನ ಕಾಯಿ ಅದು. ಅದನ್ನು ಅಲ್ಲಿಗೆ ಪ್ರತಿದಿನ ಬರುವ ದುರ್ಗಿ ಕೊಡಲಿಯಿಂದ ಭಾಗ ಮಾಡಿ ಕೊಟ್ಟಿದ್ದಳು. ಅದನ್ನು ಮೆಟ್ಗತ್ತಿಯಿಂದ ಅತ್ತಿಗೆ ಚಿಕ್ಕ ಪೀಸ್ ಮಾಡಿ ಅದರ ಸಾರೆ, ಗುಂಜು ತೆಗೆದು ಕತ್ತರಿಸಿ ಹಾಕುತ್ತಿದ್ದಳು. ಆಯಿ ಅದರ ಸೊಳೆ ಬಿಡಿಸಿ ಮುಟ್ಟಿಗೆ ಹಾಕುತ್ತಿದ್ದಳು. ನಂತರ ಅದನ್ನು ತಂದು ಹೊಳ್ಳಿಯ ಮೇಲೆ ಇಟ್ಟು ನಾನು, ಅಣ್ಣನ ಮಗಳು ಹರಿಣಿ, ಆಯಿ ಸೇರಿ ಬೇಳೆ ತೆಗೆದು ಬಿಡಿಸಿ ಪಾತ್ರೆಗೆ ಹಾಕಿದೆವು. ನಂತರ ಅತ್ತಿಗೆ ಎಣ್ಣೆ ಬಂಡಿ ಒಲೆಯ ಮೇಲಿಟ್ಟು ಒಲೆಯ  ಮುಂದೆ ಅಲ್ಲೇ ಮೆಟ್ಗತ್ತಿ ಹಾಕಿ ಕುಳಿತುಕೊಂಡು ಸೊಳೆ ಶಿಗಿದು ಬಟ್ಟಲಲ್ಲಿ ಹಾಕುತ್ತಾ ಕಾದ ಎಣ್ಣೆಯಲ್ಲಿ 2-3 ತಾಸು ಕರಿದಳು. ನಾನು, ಆಯಿ ಕೂಡಾ ಸ್ವಲ್ಪ ಶಿಗಿದು ಕೊಟ್ಟೆವು. ಶಿಗಿದ ಸೊಳೆಯನ್ನು ಎಣ್ಣೆಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪುನೀರು ಹಾಕಿ ಗರಿಗರಿಯಾದ ಮೇಲೆ ತೆಗೆದ ನಂತರ ಅದಕ್ಕೆ ಖಾರ ಪುಡಿ ಉದುರಿಸಿ ಮತ್ತೆ ತಣಿಸಿ ಡಬ್ಬಿಯಲ್ಲಿ ತುಂಬುವವರೆಗೆ......  ಅಬ್ಬಬ್ಬಾ ಚಿಪ್ಸೇ.....