ನನ್ನ ಅತ್ತಿಗೆ ವಿದ್ಯಾ ಯಾವಾಗಲೂ ಚುರುಕು. ಹಳ್ಳಿಮನೆಯಲ್ಲಿ ಉಳಿದು ಮನೆ-ಮಕ್ಕಳು, ಆಳು-ಕಾಳು, ಅಡುಗೆ, ಕೊಟ್ಟಿಗೆ, ತೋಟ, ದೇವರಕಾರ್ಯ....... ಹೀಗೆ ಕೈತುಂಬಾ ಕೆಲಸವಿದ್ದರೂ ಎಲ್ಲವನ್ನೂ ನಿಭಾಯಿಸಿ ಸಭೆ-ಸಮಾರಂಭ, ಜಾತ್ರೆ, ಬಂಧು-ಬಾoಧವರ ಮನೆಯ ಕಾರ್ಯ, ಮಕ್ಕಳ ಜೊತೆ ಆಟ-ಒಡನಾಟ ಎಲ್ಲದರಲ್ಲೂ ಸಮಯಕ್ಕೆ ಭಾಗವಹಿಸಿ ಸಂಭ್ರಮಪಡುತ್ತಾಳೆ. ಹುಟ್ಟಿನಿಂದ ಪಟ್ಟಣದಲ್ಲಿ ಬೆಳೆದರೂ ಹಳ್ಳಿ ಜನ, ಜೀವನ ಇಷ್ಟಪಡುವ ಅತ್ತಿಗೆ ಬಾಲ್ಯದಲ್ಲೇ ರಾಮಾಯಣ, ಮಹಾಭಾರತವನ್ನು ಓದಿ, ಅರಿತು ವಿವರಿಸುವ; ಹಿಂದಿ, ಕೊಂಕಣಿ ಭಾಷೆಗಳನ್ನೂ ಚೆನ್ನಾಗಿ ಮಾತನಾಡಬಲ್ಲ ನನ್ನ ಅತ್ತಿಗೆ; ಹಳ್ಳಿಮನೆಯನ್ನು, ಹಳ್ಳಿಯಲ್ಲಿರುವ ಗಂಡುಮಕ್ಕಳನ್ನು ತಿರಸ್ಕರಿಸುವ ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ, ಪಾಲಕರಿಗೂ ಮಾದರಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅಮ್ಮನ ಸೊಸೆಯಾಗಿ, ಅಣ್ಣನ ಮಡದಿಯಾಗಿ ಅವರ ಕಷ್ಟ-ಸುಖ ಅರಿತು ಮಕ್ಕಳ ಜೊತೆ ತುಂಬು ಜೀವನ ನಡೆಸುತ್ತಿರುವ ಅತ್ತಿಗೆ ನನಗೆ ಎಂದಿಗೂ ಅಚ್ಚುಮೆಚ್ಚು.
ಆ ದಿನ ಅಮ್ಮನ ಮನೆಗೆ ಹೋದಾಗ ನಾವು ಮಾತನಾಡುತ್ತ ರಾತ್ರಿ ಮಲಗುವಾಗ ತಡವಾಗಿತ್ತು. ಆದರೂ ಬೆಳಿಗ್ಗೆ ಬೇಗ ಎದ್ದು ಆಕಳ ಹಾಲು ಕರೆದು ಪುಟ್ಟ ಕರುವಿಗೆ ಹಾಲುಕುಡಿಸಿ, ಬಿಸಿಲೇರುವ ಮುಂಚೆ ಅವನ್ನು ಮೇಯಲು ಬಿಟ್ಟು; ಕೊಟ್ಟಿಗೆ ಕೆಲಸ ಮುಗಿಸಿ ಮನೆಗೆ ಬಂದು ಶಾಲೆಗೆ ಹೋಗುವ ಮಕ್ಕಳನ್ನು ತಯಾರಿ ಮಾಡುವ ಕೆಲಸ. ಅಂದು ಗಡಿಬಿಡಿಯಲ್ಲಿ ಅತ್ತಿಗೆ ಉಳಿದ ದೋಸೆ ಹಿಟ್ಟಿಗೆ ಹಿತ್ತಲಲ್ಲಿ ಬೆಳೆದ ವಿಟಾಮಿನ್ ಸೊಪ್ಪನ್ನು ತಂದು ಅರ್ಜೆಂಟಾಗಿ ಮಾಡಿದ ಕಲರಫುಲ್ ದೋಸೆ ನನಗೆ ತುಂಬ ಇಷ್ಟವಾಯ್ತು. ವರ್ಷದ ಹಿಂದೆ ತಿಂದರೂ ಮತ್ತೆ ಮತ್ತೆ ನೆನಪಾಗುವ ಈ ದೋಸೆಗೆ ಹಾಕಿದ ಸೊಪ್ಪಿನ ಗಿಡವನ್ನು ಕುಂಡದಲ್ಲಿ, ಮನೆಯಂಗಳದಲ್ಲಿ ಯಾರೂ ಸಲೀಸಾಗಿ ಬೆಳೆಯಬಹುದು. ಆರೋಗ್ಯಕ್ಕೂ ಒಳ್ಳೆಯದು. ಈ ರೆಸಿಪಿ ನಿಮಗಾಗಿ -
ವಿಟಾಮಿನ್ ಸೊಪ್ಪನ್ನು ಸಾಕಷ್ಟು ತಂದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಜೊತೆಗೆ ಟೊಮೆಟೊ, ಈರುಳ್ಳಿಯನ್ನೂ ಚಿಕ್ಕದಾಗಿ ಹೆಚ್ಚಿ ಸೇರಿಸಿ. ಕಾಯಿತುರಿ ಜೊತೆ ಖಾರಕ್ಕೆ ಹಸಿಮೆಣಸು ಸೇರಿಸಿ ಸ್ವಲ್ಪ ಮಿಕ್ಸಿ ಮಾಡಿ. ರುಬ್ಬಿಟ್ಟ ದೋಸೆ ಹಿಟ್ಟಿಗೆ ಸ್ವಲ್ಪ ಗೋಧಿರವಾ, ಅರಿಶಿನ ಹಾಗೂ ಉಳಿದೆಲ್ಲ ಮಿಶ್ರಣ ಸೇರಿಸಿ. ಬೇಕಿದ್ದರೆ ಉಪ್ಪು ಹಾಕಿ. ಕಾವಲಿ ಬಿಸಿ ಮಾಡಿ ತೆಳ್ಳಗೆ ದೋಸೆ ಹೊಯ್ದು ಮೇಲೆ ಸ್ವಲ್ಪ ತುಪ್ಪ/ಎಣ್ಣೆ ಹಾಕಿ ಬೇಯಿಸಿದರೆ ರುಚಿಕರ ಹಾಗೂ ಆರೋಗ್ಯಕರವಾದ ಕಲರ್ಫುಲ್ ದೋಸೆ ಸವಿಯಲು ಸಿದ್ಧ. ಇದನ್ನು ಕಾಯಿ+ಹಸಿಮೆಣಸು+ಇಂಗು ಹಾಕಿದ ಚಟ್ನಿಯೊಂದಿಗೆ ಸವಿಯಲು ತುಂಬಾ ಚೆನ್ನಾಗಿರುತ್ತದೆ. - ರೇಖಾ ಕೆ. ಹೆಬ್ಬಾರ್, ಕರ್ಕಿ


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ