ಅಂದು ತುಂಬಾ ಸೊಂಟ ನೋವು. ಕೂತಲ್ಲಿಂದ ಎದ್ದರೆ ನೋವು. ಎಲುಬಿಗೇನಾಗಿದೆಯೇನೋ ಅಂತ ಹೆದರಿದ್ದೆ. ಮೈಕೈ ಕೂಡಾ ಅಲ್ಲಲ್ಲಿ ನೋವು.

ಮರುದಿನ ಬೆಳಿಗ್ಗೆ ಎದ್ದಾಗ ೧೦% ನಷ್ಟು ಕಡಿಮೆಯಾಗಿತ್ತು. ಪೂರ್ತಿ ಕಡಿಮೆ ಆಗುವ ಹಾಗೆ ತೋರಲಿಲ್ಲ. ಮತ್ತೆ ಆಯಿ ಮಧ್ಯಾಹ್ನ ಫೋನ್ ಮಾಡಿ ವಿಚಾರಿಸಿದಳು. ‘ಹೇಂಗಿದ್ಯೆ? ಕಸುವಿನ ಬಳ್ಳಿ ಮಾಡ್ಕಂಡ್ಯಾ?’ ಎಂದು ಕೇಳಿದಳು. ‘ನಿನ್ನೆ ಕುಡಿದಿದ್ದೆ. ಇವತ್ತು ಮತ್ತೆ ಮಾಡುದಾ?’ ಕೇಳಿದೆ. ‘ಕಡಿಮೆ ಆಗಿಲ್ಲ ಅಂದ್ರೆ ಇವತ್ತೊಂದಿನ ಕುಡಿ’ ಅಂದಳು. ಮತ್ತೆ ಮಾಡಿ ಕುಡಿದೆ. ಡಾಕ್ಟರ್ ಹತ್ರ ಹೋಗೋಣ ಅಂದ್ರೂ ದಬ್ಬೆ ಕಟ್ಟಿಕೊಂಡಂತೆ ಸೊಂಟ ದಕ್ಕಾಗಿತ್ತು.
ಸಂಜೆ ಆಗುವಾಗ ನನಗೇ ಆಶ್ಚರ್ಯ. ಅರೆ ಸೊಂಟನೋವು ಮರೆತೇ ಹೋಗಿತ್ತು. ಯಾಕೆಂದರೆ ಅದು ಮಾಯವಾಗಿತ್ತು! ಅನಾಯಾಸವಾಗಿ ನಾನು ಆಯಿಯ ಕಸುವಿನ ಬಳ್ಳಿಯ ಮದ್ದಿಗೆ ಕೈಮುಗಿದಿದ್ದೆ !!
ಆಯಿ ನಾವು ಸಣ್ಣವರಿರುವಾಗಿನಿಂದ ಹೇಳುತ್ತಿದ್ದ ಈ ಔಷಧ ಆಗ ನನಗಂತೂ ಅದರ ಬಗ್ಗೆ ಏನೂ ಅನಿಸಿರಲಿಲ್ಲ. ಈಗ ಆಗಾಗ ಈ ಕಸುವಿನ ಬಳ್ಳಿಯ ಪ್ರಯೋಗ ನಡೆಯುತ್ತಲೇ ಇದೆ. ಕೈ-ಕಾಲು ಜಗೆತ(ಸೆಳೆತ), ಸೊಂಟನೋವು ಏನೇ ಬಂದರೂ ನೆನಪಾಗುವುದು ಕಸುವಿನ ಬಳ್ಳಿ. ಇದು ದೇಹಕ್ಕೆ ತುಂಬಾ ತಂಪು.... ಪುಷ್ಟಿದಾಯಕ.... ಧಾತುವರ್ಧಕ... ನರಗಳ ದೌರ್ಬಲ್ಯ ಕಡಿಮೆ ಮಾಡುವ ಕಸುವಿನಬಳ್ಳಿ ಉಷ್ಣದಿಂದ ಬಂದ ಹಲ್ಲುನೋವಿಗೂ ತುಂಬಾ ಪರಿಣಾಮಕಾರಿ. ನೆಗಡಿ, ಕಫ ಪ್ರಕೃತಿಯವರು ಕುದಿಸಿ ಸೋಸಿ ಕುಡಿಯಬಹುದು.
ಕಸುವಿನ ಬಳ್ಳಿ + ಸ್ವಲ್ಪ ಕೊತ್ತಂಬರಿ + ಸ್ವಲ್ಪ ಜೀರಿಗೆ + ನಾಲ್ಕಾರು ಕಾಳುಮೆಣಸು ಸೇರಿಸಿ ಬೇಯಿಸಿ. ನಂತರ ರುಬ್ಬಿ ಸೋಸಿ. ಹಾಲು, ಸಕ್ಕರೆ ಹಾಕಿ ಕುಡಿದರೆ ರುಚಿಕರವಾದ ಪೇಯ ಸಿಗುತ್ತದೆ. ಇದಕ್ಕೆ ಒಂದೆಲಗ ಕೂಡ ಸೇರಿಸಬಹುದು. ನನ್ನ ಅತ್ತೆ ಆಗಾಗ ಇಂತಹ ಕಷಾಯ ಮಾಡುತ್ತಿದ್ದರು. ಪ್ರತಿದಿನ ರಾತ್ರೆ ದಾಸವಾಳ ಹೂವಿನ ಕಷಾಯ ಇದ್ದೇಇರುತ್ತಿತ್ತು. ಔಷಧಿ ಗುಣ ಹೇರಳವಾಗಿದ್ದ ಸ್ವಲ್ಪ ಗಂಧದ ಬಿಣ್ಣದ ಆ ಬಿಳಿದಾಸವಾಳ ಈಗ ಕಾಣುವುದೇ ಅಪರೂಪ.
ಒಟ್ಟಿನಲ್ಲಿ ನಮ್ಮ ಆ ಬಾಲ್ಯದ ದಿನಗಳಲ್ಲಿ ಕನಿಷ್ಠವಾಗಿ ಕಂಡ; ಆದರೆ ಆಯಿ ಪದೇಪದೇ ಹೇಳುತ್ತಿದ್ದ ಈ ಕಸುವಿನ ಬಳ್ಳಿಯ ಅವಶ್ಯಕತೆ ೨೫-೩೦ ವರ್ಷಗಳ ನಂತರ ಮತ್ತೆ ನನಗೇ ಬೇಕಾದಾಗ ಹಳಬರು ಹೇಳುತ್ತಿದ್ದ ಮನೆ ಔಷಧಗಳ ಮಹತ್ವದ ಅರಿವು ಆಗಲೇಬೇಕಲ್ಲ? ಹಿರಿಯರೇ ಹೇಳಿದಂತೆ ‘ಇದು ಕಲಿಯುಗ. ಈಗ ಮಾಡಿದ್ದನ್ನು ಈ ಯುಗದಲ್ಲೇ ಅನುಭವಿಸಬೇಕು’ ಎಂಬುದು ಆಗಾಗ ನಿಜವಾಗುತ್ತಿದೆ !
ಮೊದಲು ನನ್ನ ತವರಿನ ತೋಟದಲ್ಲಿ ಹಾವಿನಂತೆ ಹರಿದಾಡುತ್ತ ಕಾಲಿಗೆ ಎಲ್ಲೆಂದರಲ್ಲಿ ತಡೆಯುತ್ತಿದ್ದ ಕಸುವಿನ ಬಳ್ಳಿ ಇದೀಗ ತುಂಬ ಕಡಿಮೆಯಾಗುತ್ತಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ಪುಟ್ಟದಾಗಿ ತಲೆ ಎತ್ತುತ್ತಿರುವ ಈ ಬಳ್ಳಿಯನ್ನು ಕಂಡಲ್ಲಿ ತಂದು ಕುಂಡದಲ್ಲಾದರೂ ಬೆಳೆಸಿ ಉಳಿಸಿಕೊಳ್ಳಬೇಕಾದ ಜರೂರತ್ತಿದೆಯಲ್ಲವೇ? - ರೇಖಾ ಕೆ. ಹೆಬ್ಬಾರ್, ಕರ್ಕಿ


ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ