ಆತ್ಮೀಯರೇ,
ನಾನು ಬಹುದಿನಗಳಿಂದ ನನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಬೇಕು ಅಂದುಕೊಂಡಿದ್ದೆ. ಕೆಲಸದ ಒತ್ತಡ, ಸಮಯದ ಅಭಾವ, ಅನಾರೋಗ್ಯ, ಆಲಸ್ಯದಿಂದ ದಿನ ದೂಡುತ್ತಲೇ ಇದ್ದೆ. ಆದರೆ ಇಂದು ಮತ್ತೆ ಪ್ರಾರಂಭ ಮಾಡಬೇಕೆಂಬ ನಿರ್ಧಾರ ಮಾಡಿ ಬೆಳಗಿನ ತಿಂಡಿ ಮಾಡುತ್ತ ನಾನು 3-4 ತಿಂಗಳುಗಳಿಂದ ನೋಡುತ್ತಿರುವ Indiamoney.com ತೆಗೆದೆ. ಅರೆ! ಹೊಸ ಕೋರ್ಸ್. ಬಹಳ ಖುಷಿಯಾಯ್ತು. ಅಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸುವ ಕುರಿತು ತುಂಬಾ ಸರಳವಾಗಿ, ಸರಾಗವಾಗಿ, ಸುಂದರವಾಗಿ ವಿವರಣೆ ನೀಡಿದ್ದರು. ಸಂಭ್ರಮದಿಂದ ನಾನು ಅಂದೇ ಯುಟ್ಯೂಬ್ ಚಾನೆಲ್ ಶುರು ಮಾಡುವ ಹುಮ್ಮಸ್ಸಿನಲ್ಲಿದ್ದೆ. ಆದರೆ ಆಗಾಗ ಬಿಡುವು ಮಾಡಿಕೊಂಡು ಕೆಲಸ ಮುಗಿಸಿ ಅವರ ಎಲ್ಲ ವೀಡಿಯೋ ಮುಗಿಸುವುದರೊಳಗೆ ಸಂಜೇ ಆಗಿತ್ತು. ನನಗೂ ಕೆಲಸ ಮಾಡಿ ಸುಸ್ತು.......
ಮತ್ತೆ ಮುಂದೂಡಿದೆ.
2-3 ದಿನಗಳೇ ಕಳೆಯಿತು.. ಯೂಟ್ಯೂಬ್ ಗೆ ಸರಿಯಾಗಿ ವೀಡಿಯೋ ಮಾಡಲು ಕ್ಯಾಮೆರಾ ಎದುರು ತುಂಬಾ ಪ್ರಯೋಗ ಮಾಡಿ ಕಲಿಯಬೇಕು. ತುಂಬಾ ಸಮಯ ಬೇಕು ಎಂದು ಯೋಚಿಸಿ ಸದ್ಯ ಬ್ಲಾಗ್ ಮಾಡುವ ನಿರ್ಧಾರಕ್ಕೆ ಬಂದು ಇದೀಗ Rekha Hebbar's ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ..........
ನಾನು ಗೃಹಿಣಿ. ಮದುವೆಯಾಾಗಿ 26 ವರ್ಷ ಕಳೆಯಿತು. ಹಿಂದೆ ತವರು ಮನೆಯಲ್ಲಿ ಕಳೆದ ದಿನಗಳಲ್ಲಿ ಕಿವಿಗೆ ರೇಡಿಯೋ ಹಿಡಿದು ಅದರಲ್ಲಿ ಬರುವಂತ ಸಿನಿಮಾ, ಚಿತ್ರಗೀತೆ, ವಾರ್ತೆ ಕೇಳುವುದನ್ನು ಬಿಟ್ಟರೆ ಫೋನ್, ಮೊಬೈಲ್, ಟಿವಿ, ಇಂಟರ್ನೆಟ್..... ಈ ತರಹದ ಯಾವುದೇ ಸೌಲಭ್ಯ ಇರಲಿಲ್ಲ. ಆಗ ಅಕ್ಕ-ಅಣ್ಣಂದಿರು, ಗೆಳತಿಯರ ಜೊತೆ ಶಾಲೆಗೆ ಹೋಗುವುದು, ಗುಡ್ಡಬೆಟ್ಟ ಸುತ್ತುವುದು, ಸೈಕಲ್ ಹೊಡೆಯುವುದು, ಅಂಗಳದಲ್ಲಿ ಆಡುವುದು. ಇಲ್ಲವಾದರೆ ಮನೆಯಲ್ಲಿ ಇರುವಾಗ ತೋಟ, ಬೇಣ, ಕೊಟ್ಟಿಗೆ, ಮನೆಗೆಲಸ, ಕರೆಂಟ್-ಮಿಶನ್ ರಿಪೇರಿ, ಗಿಲಾಯ, ಸುಣ್ಣ, ಬಣ್ಣ..... ಹೀಗೇ ಯಾರು ಯಾವುದೇ ಕೆಲಸಕ್ಕೆ ಬಂದರೂ ಅವರ ಜೊತೆ ಹೋಗುವುದು, ಅವರು ಮಾಡುವ ಕೆಲಸಗಳನ್ನೆಲ್ಲ ನೋಡುವುದು ಇದರಲ್ಲಿ ತುಂಬಾ ಆಸಕ್ತಿ ಇತ್ತು. ಅಪ್ಪ ಕೇಳಿದ ಎಲ್ಲದಕ್ಕೂ ವಿವರಣೆ ನೀಡುತ್ತಿದ್ದ..... ಯಾವತ್ತೂ ನಮ್ಮ ತಿಳಿದುಕೊಳ್ಳುವ ಉತ್ಸಾಹಕ್ಕೆ ತಣ್ಣೀರೆರಚಲಿಲ್ಲ......
ಈವರೆಗೂ ನಮ್ಮ ಹಿರಿಯರು ಕೆಲವೊಂದು ವಿಷಯವನ್ನು ಮತ್ತೆ ಮತ್ತೆ ಹೇಳಿದ್ದು ಮನದಲ್ಲಿ ಅಚ್ಚೊತ್ತಿದೆ. ಅಂದು ನಮ್ಮ ಕಿವಿ ತೆರೆದೇ ಇರುತ್ತಿತ್ತು.... ಬಾಲ್ಯದಿಂದ ಅಪ್ಪ-ಅಮ್ಮನಿಂದ, ನಂತರ ಗಂಡ, ಅತ್ತೆ-ಮಾವ, ಹಿರಿಯರು, ಮನೆಯವರು, ಬಂಧುಗಳು, ಗೆಳತಿಯರು....... ಇವರಿಂದ ಕಲಿತಂತಹ ಉತ್ತಮ ವಿಷಯ, ಒಳ್ಳೆಯ ಪಾಠ, ಔಷಧಿ, ಅಡುಗೆ..... ಹೀಗೆ ಏನೆಲ್ಲ ನಮ್ಮ ಮಕ್ಕಳಿಗೂ ಹೇಳಬೇಕು ಎಂದರೆ ಅವರಿಗೆ ಈಗ ಅದನ್ನೆಲ್ಲ ಪೂರ್ತಿಯಾಗಿ ಕೇಳುವ ವ್ಯವಧಾನ ಇಲ್ಲ. ಸಮಯವಿಲ್ಲ... ಕಿವಿ ತೆರೆದಿರುವುದೇ ಇಲ್ಲ..... ಮೊಬೈಲ್, ಕಂಪ್ಯೂಟರ್ ಇದರಲ್ಲಿ ಮುಳುಗಿರುವ ಮಕ್ಕಳಿಗೆ ಅವರ ಉತ್ತಮ ಆರೋಗ್ಯಕರ ಭವಿಷ್ಯಕ್ಕಾಗಿ ನನಗೆ ತಿಳಿದಿರುವ, ನಮ್ಮ ಸುತ್ತ ಇರುವ ಕೆಲವೊಂದು ತೀರಾ ಅವಶ್ಯಕ ಮಾಹಿತಿಯನ್ನು ತಿಳಿಸಬೇಕು, ದಾಖಲಿಸಬೇಕು ಅಂದರೆ ಇದೊಂದು ಒಳ್ಳೆಯ ದಾರಿ ಎಂಬ ಸದಾಶಯದಿಂದ ಈ ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ಇದರಲ್ಲಿ ಸುಲಭದ ಅಡುಗೆ, ಮನೆಮದ್ದು, ಗಿಡಮರ, ಪರಿಸರ, ಮನೆ, ಜನ, ದಿನ, ಜೀವನ.... ಹೀಗೆ ಒಳ್ಳೆಯದನ್ನು ಹೇಳುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇನೆ.
ಸದಾ ನಿಮ್ಮ ಸಹಕಾರವಿರಲಿ....... ತಪ್ಪು ಕಂಡರೆ ತಿದ್ದಿ. ಒಪ್ಪು ಅನಿಸಿದರೆ ಹರಸಿ. ಬೇರೆಯವರಿಗೂ ತಿಳಿಸಿ. ಎಲ್ಲರಿಗೂ ಒಳಿತಾಗಲಿ.......
- ರೇಖಾ ಕೆ. ಹೆಬ್ಬಾರ್, ಕರ್ಕಿ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ