ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಾಡಿದ ಕಸಬರಿಗೆ ಗಿಡದ ಕಥೆ.....

  https://youtube.com/shorts/lq8ivUm_ae0?si=GRfmfTjQMLu9Axqz 4,5 ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ರೈಲಿನಲ್ಲಿ ಹೋಗುವಾಗ ಈ ಗಿಡ ಮೊದಲ ಬಾರಿ ಕಂಡಿದ್ದೆ. ಭತ್ತದ ತೆನೆಯಂತೆ ದೊಡ್ಡ ದೊಡ್ಡ ತೆನೆ ಹೊತ್ತ ಈ ಹಸಿರು ಹಿಂಡು ನನಗೆ ಕುತೂಹಲ ಮೂಡಿಸಿತ್ತು. ಪುನಹ ಹಿಂತಿರುಗು ಬರುವಾಗ ಕೂಡ ಹುಡುಕಿ ನೋಡಿದ್ದೆ. ಅದೇ ಗಿಡ ನನ್ನನ್ನು ಕಾಡುತ್ತಿತ್ತು.....      ಸ್ವಲ್ಪ ದಿನಗಳ ನಂತರ ಅಮ್ಮನ ಮನೆಗೆ ಹೋದಾಗ ಅಲ್ಲಿ ಪಕ್ಕದ ಮನೆಯ ತಂಗಿ ಶೋಭಾ ಬಂದಿದ್ದಳು. ಅವಳೊಂದಿಗೆ ಮಾತನಾಡುತ್ತಾ ಈ ಗಿಡದ ವಿಷಯ ಹೇಳಿದೆ. ಅವಳು ಇದು ನಮ್ಮನೆಯಲ್ಲಿ ತುಂಬಾ ಇದೆ. ಕಡಿದಷ್ಟೂ ಚಿಗುರುತ್ತಲೆ, ಹುಟ್ಟುತ್ತಲೇ ಇರುತ್ತದೆ ಅಂದಳು. ಇದರ ಹೆಸರೇನು ಕೇಳಿದೆ.  'ಹಿಡಿಕುಂಟೆ ಗಿಡ ' ಎಂದಳು. ಇದು ಒಂದು ಗಿಡ ನೆಟ್ಟರೆ ಆಗಬಹುದಾ ಎಂದು ಕೇಳಿದೆ. ಆಗುತ್ತದೆ ನಾನು ಮುಂದಿನ ಬಾರಿ ಬರುವಾಗ ನಿನಗೆ ತಂದು ಕೊಡುವೆ ಎಂದಳು. ನಾನು ಖುಷಿಯಾಗಿ ಕುತೂಹಲದಿಂದ ಕಾಯುತ್ತಲೆ ಇದ್ದೆ.       ಇನ್ನೊಮ್ಮೆ ನಾನು ತವರಿಗೆ ಹೋದಾಗ ಅವಳು ಮರೆಯದೆ ಗಿಡ ತಂದು ಕೊಟ್ಟಿದ್ದಳು. ನಾನು ಸಂಭ್ರಮದಿಂದ ಮನೆಗೆ ತಂದು ಒಳ್ಳೆಯ ಬಿಸಿಲು ಬರುವ ಜಾಗದಲ್ಲಿ ಕಾಳಜಿಯಿಂದ ಅದನ್ನು ನೆಟ್ಟೆ. ಎರಡು ಮೂರು ವರ್ಷಗಳಲ್ಲಿ ಅದಕ್ಕೆ ತೆನೆ ಬರಲು ಪ್ರಾರಂಭವಾಯಿತು. ಗಿಡ ಹಿಂಡು ಹಿಂಡಾಗಿ ಬೆಳೆದಿತ್ತು. ಮೊದಲ ಬಾರಿ ಬಂದ 15, 20 ತೆನೆಗಳನ್ನು ಬಿಸಿಲಿನಲ್ಲಿ...
ಇತ್ತೀಚಿನ ಪೋಸ್ಟ್‌ಗಳು

ಮತ್ತೆ ಅದೇ ಬೇಸರ.....

ಸುಮಾರು ಎರಡು ವಾರಗಳ ಹಿಂದಿನಿಂದ ಜುಟ್ಟವಿರುವ ಸುಂದರವಾದ ಜೋಡಿ ಹಕ್ಕಿಗಳು ಹಾರಿ ಬಂದು ನಮ್ಮ ಮನೆಯ ಅಂಗಳದ ಮೇಲೆ ಹಾದು ಹೋದ ಕೇಬಲ್‌ ಮೇಲೆ ಕುಂತು ಮಾತುಕತೆ ನಡೆಸುತ್ತಿದ್ದವು. ಹೊಳ್ಳಿಯ ಮೇಲೆ ಕುಂತಿದ್ದ ನಮ್ಮನ್ನು ಗಮನಿಸುತ್ತಾ ಇವರಿಂದ ಏನಾದರೂ ಅಪಾಯವಿದೆಯೇ ಎಂದು ಬಹುಶಃ ಮಾತನಾಡಿಕೊಳ್ಳುತ್ತಿದ್ದರು. ಕೆಳಗೆ ಗಿಡಗಳನ್ನು ನೋಡುತ್ತ ಸುತ್ತಲೂ ಓಡಾಡುತ್ತ ಏನೋ ಚರ್ಚೆ ನಡೆಸುತ್ತಿದ್ದವು.  ಈಗ 5-6 ದಿನಗಳ ಹಿಂದೆ ಒಂದು ಹಕ್ಕಿ ಚುಂಚಿನಲ್ಲಿ ಎಲೆ ಕಚ್ಚಿಕೊಂಡು ಬಂತು. ಅದರ ಹಿಂದೆ ಇನ್ನೊಂದು ಹಕ್ಕಿ ಹಾರಿ ಬಂದು ಕೇಬಲ್‌ ಮೇಲೆ ಕುಳಿತು ನೋಡುತ್ತಿತ್ತು. ಇದು ಪೊದೆಯಂತೆ ಬೆಳೆದಿರುವ ಮಲ್ಲಿಗೆ ಬಳ್ಳಿಯ ಒಳಗೆ ಹೋಗಿ ಗೂಡು ಕಟ್ಟುವ ಕಾರ್ಯ ಶುರು ಮಾಡಿತ್ತು. ಇಬ್ಬರೂ ಪುರ್ರನೆ ಹಾರಿ ಬಂದು ಕಿಚಿಪಿಚಿ ಮಾಡುತ್ತ ಒಬ್ಬರು ಕಟ್ಟುವವರು, ಇನ್ನೊಬ್ಬರು ಕಾಯುವ ಕಾರ್ಯ ನಡೆದೇ ಇತ್ತು. ಅದು ಗೂಡು ಕಟ್ಟಲು ಪ್ರಾರಂಭಿಸಿದ ಮೇಲೆ ಒಂದು ದಿನವೂ ರಾತ್ರಿ ಅಥವಾ ಬೆಳ್ಳಂಬೆಳಗ್ಗೆ ಅಲ್ಲಿ ಇರುತ್ತಿರಲಿಲ್ಲ. ತಡವಾಗಿ ಗೂಡಿಗೆ ಬರುತ್ತಿತ್ತು.  ಆ ಕುರಿತು ನಾನು youtube shorts ಕೂಡಾ ಹಾಕಿದ್ದೆ. https://youtube.com/shorts/WdCtQIiKAQA?si=H9X3E1iToXN-gF8u ಮೊನ್ನೆ ಬಹುಶಃ ಗೂಡು ಮುಗಿದಿತ್ತು. ಮೌನವಾಗಿ ಬಂದು ಹೋಗಿ ಮಾಡುತ್ತಿತ್ತು. ನಾನು ನಿನ್ನೆ ಬೆಳಿಗ್ಗೆ ಹೂವು ಕೊಯ್ಯಲು ಹೋದಾಗ ಅರೆ ! ಗೂಡಿನಲ್ಲಿ ಹಕ್ಕಿ ಮೌನವಾಗಿ ಕುಳಿತಿತ್ತು. ನನ್ನ...

ನಮ್ಮ ಮನೆಯಲ್ಲಿ ಹಂಡಾಹುಂಡಿ ಜಗಳ!

ಮೊನ್ನೆ ನಮ್ಮ ಮನೆಯಲ್ಲಿ ಅಪ್ಪ - ಮಗನಿಗೆ ಹಂಡಾಹುಂಡಿ ಜಗಳ. ಮುನಿಸು. ಸಿಟ್ಟು. ಕೋಪ....  ಯಾಕೆ ಗೊತ್ತಾ? ವಿಷಯ ಕೇಳಿದರೆ ನಿಮಗೆ ದಂಗಾಗಬಹುದು. ಯಾಕೆ ಹೇಳಿ?  ಯಾಕೆಂದ್ರೆ ಕಾರಣ ಇಷ್ಟೇ 'ಗಿಡಗಳಿಗೆ ನಾನು ನೀರು ಹಾಕ್ತೇನೆ.... ಇಲ್ಲ ನಾನು.... ಇಲ್ಲ ನಾನು..... ಇಲ್ಲಾ ನಾನೇ.....' ಹೀಗೆ ಕಂಡಾಪಟ್ಟೆ ಜಗಳ. ನೀನು ನೀರು ಹಾಕು ಅಂತಲ್ಲ ಅಥವಾ ನೀನು ಕೆಲಸ ಮಾಡು ಅಂತಲ್ಲ, 'ನಾನು ಮಾಡ್ತೀನಿ, ನಾನು ಮಾಡ್ತೀನಿ' ಅಂತ ಜಗಳವೇ ಜಗಳ!!   ಹೌದು, ಮಗನ ಹಠಕ್ಕೆ ಮಣಿದು ಅವನದೇ ಖರ್ಚಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 300ಕ್ಕೂ ಹೆಚ್ಚು ಗಿಡ ಅರಣ್ಯ ಇಲಾಖೆ ನರ್ಸರಿಯಿಂದ ತಂದು ಗುಡ್ಡದ ಜಾಗದಲ್ಲಿ ನೆಟ್ಟಿದ್ದೆವು. ಅದರಲ್ಲಿ 150 ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಕಾಡು ಜಾತಿಯ ಗಿಡವಾದರೂ ಅದು ಪುಟ್ಟದಾಗಿರುವುದರಿಂದ ಈ ಬಾರಿ ಅದಕ್ಕೆ ನೀರು ಬೇಕು. ಹಾಗಾಗಿ ಅಲ್ಲೊಂದು ನೀರಿನ ಟ್ಯಾಂಕ್ ತಂದಿಟ್ಟು; ಅದರಲ್ಲಿ ಹಣ ಕೊಟ್ಟು ನೀರು ಸಪ್ಲೈ ಮಾಡುವವರಿಂದ ನೀರು ತುಂಬಿಸಿ ಬಕೆಟ್ ನಲ್ಲಿ ಹಿಡಿದು ಗಿಡಗಳಿಗೆ ಹಾಕುವ ಕೆಲಸ. ಇದು ಇಬ್ಬರಿಗೆ ಸುಮಾರು 2 ತಾಸಿನ ಕೆಲಸ.  ಮಗನಿಗೆ ವರ್ಕ್ ಫ್ರಮ್ ಹೋಮ್. ಹಾಗಾಗಿ ತನಗೆ ಕೆಲಸ ಇದ್ದಾಗ ಅಪ್ಪ ಒಬ್ಬರೇ ಹೋಗುತ್ತಾರೆ ಎಂಬ ಚಿಂತೆ ಮಗನಿಗೆ. ಮಗನಿಗೆ ಕಷ್ಟ ಆಗಬಾರದು ಎಂದು ಅಪ್ಪನಿಗೆ. ಹೀಗೆ ಇಬ್ಬರ ಕಾಳಜಿಯ ಜಗಳ ! ನನಗೆ ಮನದಲ್ಲೇ ನಗು. ಹೆಮ್ಮೆ.....  ಕೊನೆಗೂ ಮಗ ಅಪ್ಪನ ಕಣ್ತ...

ಬಾಯಿ ಹುಣ್ಣಿಗೆ ಗುಡ್ ಬೈ ಹೇಳಿ

ಇದು ಬಿಳಿ ಕುಸುಮಾಲೆ. ಗುಡ್ಡದ ಮೇಲೆ ಹಿಂಡುಗಳಲ್ಲಿ ಇರುವುದು ಕೆಂಪು ಕುಸುಮಾಲೆ. ಎರಡೂ ಓಕೆ. ಬಿಳಿ ಕುಸುಮಾಲೆ ಬೇರು ಬಿಳಿಮುಟ್ಟು(ವೈಟ್‌ ಡಿಸ್ಚಾರ್ಜ್)‌ ಇರುವವರಿಗೆ ಸ್ವಚ್ಚವಾದ ಅಂದರೆ ೨ನೇ ಬಾರಿ ಅಕ್ಕಿ ತೊಳೆದ ದಪ್ಪ ನೀರಿನಲ್ಲಿ ತೇಯ್ದು ಕೊಟ್ಟರೆ ಬಹುಬೇಗ ಕಡಿಮೆ ಆಗುತ್ತದೆ ಹಾಗೇ ಮೂತ್ರದಲ್ಲಿ ಧಾತು ಹೋಗುವವರಿಗೆ ಕೂಡಾ ಒಳ್ಳೆಯದು ಎಂದು ಹಿರಿಯರು ಹೇಳಿದ್ದು ಕೇಳಿದ್ದೆ. ಹಾಗೇ ಕೆಂಪು ಕುಸುಮಾಲೆ ಬೇರನ್ನು ತರಿಸಿಕೊಂಡು ನನ್ನ ಆಯಿ ಕಡ್ಲಂಗಡ್ಲೆ ಬೇರಿನ ಜೊತೆ ಹಾಕಿ ಕಷಾಯ ಬತ್ತಿಸಿ ಪ್ರತಿದಿನ ಹಾಲಿಗೆ ಹಾಕಿ ಕುಡಿಯುತ್ತಿದುದನ್ನು ನೋಡಿದ್ದೆ. ಅದು ಅತಿಯಾದ ರಕ್ತಸ್ರಾವದಿಂದ ರಕ್ತ ಅಂದರೆ ಹಿಮೊಗ್ಲೋಬಿನ್‌ ಕಡಿಮೆ ಆದರೆ ಸರಿಪಡಿಸಿಕೊಳ್ಳಲು ತುಂಬಾ ಉತ್ತಮ ಪರಿಣಾಮ ಕೊಡುತ್ತದೆ ಎಂದು ಹೇಳುತ್ತಿದ್ದರು. ಹಾಗೇ ತುಂಬಾ ಪರಿಮಳದ ಗುಲಾಬಿ ಬಣ್ಣದ ಕಷಾಯ ಅದಾಗಿತ್ತು. ನಾನು ನಮ್ಮ ಮನೆಯಲ್ಲಿ ಅತ್ತೆಯ ಕಾಲದಿಂದ ಅಂದರೆ ಸುಮಾರು ೩೦ ವರ್ಷಗಳಿಂದ ಬಿಳಿ ಕುಸುಮಾಲೆ ಗಿಡ ಇರುವುದನ್ನು ನಡಿದ್ದೆ. ಅತ್ತೆ ಅದರ ಹೂವಿನ ತಂಬ್ಳಿ ಮಾಡುತ್ತಿದ್ದರು. ನನಗೆ ಈಗ ಸುಮಾರು ೧೫ ವರ್ಷಗಳ ಹಿಂದೆ ಯಾರು ಹೇಳಿದ್ದು ನೆನಪಿಲ್ಲ, ಆದರೆ ಬಾಯಿಹುಣ್ಣಿಗೆ ಹೆಬ್ಬಾರರಿಗೆ, ಮಕ್ಕಳಿಗೆ ಇದರ ಪ್ರಯೋಗ ಅದ್ಭುತ ಯಶಸ್ಸು ಕಂಡಿದ್ದಂತೂ ಸತ್ಯ. ಈವರೆಗೆ ಮತ್ತೆ ಬಾಯಿಹುಣ್ಣಿನ ಬಾಧೆ ಅವರನ್ನು ಕಾಡಿಲ್ಲ. ತಿಂಗಳಿಗೆ ೨೫ ದಿನ ಅವರಿಗೆ ಬಾಯಿ ಹುಣ್ಣು ಆಗುತ್ತಲೇ ಇರುತ್ತಿತ್ತು. ರಾತ್...

ಇವೆಲ್ಲವನ್ನೂ ದಾಖಲಿಸಬೇಕೆನಿಸಿತು..........

ಇಂದು ತುಂಬಾ ದಿನಗಳ ನಂತರ ಮತ್ತೆ ಬ್ಲಾಗ್‌ಗೆ ಬಂದೆ. ವರ್ಷಗಳಿಂದ ನನ್ನನ್ನು ಕಾಡುತ್ತಿದ್ದ ಮೆನೋಪಾಸ್ ಭೂತ ಸ್ವಲ್ಪ ಬಿಡುಗಡೆ ಕೊಡ್ತಾ ಇದೆ. ಬೆಳಗಿನಿಂದ ಮಧ್ಯಾಹ್ನದವರೆಗೆ 5೦೦ ಪತ್ರಿಕೆಗಳಿಗೆ ಎಡ್ರೆಸ್‌ ಕತ್ತರಿಸಿ ಅಂಟಿಸಿ ಸ್ಟಾಂಪ್‌ ಹಚ್ಚಲು ಹೆಬ್ಬಾರರಿಗೆ ಕೊಟ್ಟೆ. ನಿನ್ನೆ ಬೆಳಿಗ್ಗೆಯಿಂದ ಶುರುವಾದ ಕೆಲಸ ಮುಂದುವರಿದಿತ್ತು. ಮಧ್ಯಾಹ್ನ 1.30ಕ್ಕೆ ಮುಗಿದು ಪತ್ರಿಕೆ ಪೋಸ್ಟ್‌ ಸೇರಿತ್ತು. ಬೆಳಗ್ಗೆ ಎದ್ದು 2 ತಾಸು ಅಕ್ಕಿ ನೆನೆಸಿ ಹಾಲುಗುಂಬಳಕಾಯಿ ಹಾಕಿ ರುಬ್ಬಿ ದೋಸೆ; ತೆಂಗಿನಕಾಯಿ + ಈರುಳ್ಳಿ + ಒಣಮೆಣಸು + ಹುಣಸೆಹಣ್ಣು + ಉಪ್ಪು ಹಾಕಿ ಚಟ್ನಿ ಮಾಡಿದೆ. ಮಧ್ಯಾಹ್ನ ಊಟಕ್ಕೆ ಮೂಲಂಗಿ ಸಾರು, ಮೀಟರ್‌ ಬೀನ್ಸ್‌ ಪಲ್ಯ. ಕೆಂಪಕ್ಕಿ ಅನ್ನ ಮಾಡಿದೆ. ಎಲ್ಲ ಚೆನ್ನಾಗಿತ್ತು. ಮೂಲಂಗಿ ಸಾರು:- ಇದು ನನ್ನ ಅತ್ತಿಗೆಮಗಳು ಪೂರ್ಣಿಮಾ ಕಲಿಸಿಕೊಟ್ಟ ಸಾರು. ಮೂಲಂಗಿ, ಟೊಮೆಟೋ ಸ್ವಚ್ಛ ಮಾಡಿ ತೊಳೆದು ಬೇರೆ ಬೇರೆ ಕತ್ತರಿಸಿದೆ. ಒಂದು ಕಪ್‌ ತೊಗರಿಬೇಳೆ, ಮೂಲಂಗಿ ಬೇಯಿಸಲು ಇಟ್ಟೆ. ಒಂದು ಪಾತ್ರೆಯಲ್ಲಿ ಒಗ್ಗರಣೆಗೆ ಎಣ್ಣೆ ಹಾಕಿ ಒಂದು ಚಮಚ ಜೀರಿಗೆ, ಅರ್ಧ ಚಮಚ ಸಾಸಿವೆ ಹಾಕಿದೆ. ಖಾರಾಪುಡಿ ಒಂದು ಚಮಚ ಅದಕ್ಕೆ ಹಾಕಿ ತಕ್ಷಣ ಟೊಮೆಟೊ ಹಾಕಿದೆ. ಟೊಮೆಟೊ ಮೆತ್ತಗಾಗುವವರೆಗೆ ಹುರಿದು ನಂತರ ಬೇಯಿಸಿದ ಮೂಲಂಗಿ ನಂತರ ತೊಗರಿಬೇಳೆ ಹಾಕಿದೆ. ನಂತರ ರುಚಿಗೆ ತಕ್ಕಷ್ಟು ಉಪ್ಪು, ನೀರು ಹಾಕಿ ಕುದಿಸಿದೆ. ಇಷ್ಟೇ ಮಾಡಿದ್ದು. ಅನ್ನಕ್ಕೆ ರುಚಿಕರವಾದ ...

ಪಟ್ಟು ಬಿಡದೇ ಗಿಡ ನೆಟ್ಟ ಮಗ ಸೂರ್ಯ

ಜೂನ್‌ ತಿಂಗಳಲ್ಲಿ ಅವನ ಹುಟ್ಟಿದ ದಿನದ ನಿಮಿತ್ತ ೨೫ ಗಿಡ ನೆಟ್ಟು ಬಂದಿದ್ದೆವು. ಮತ್ತೆ ೫೦ ಗಿಡ ನೆಡೋಣ ಎನ್ನುತ್ತಿದ್ದ ಮಗ ಸೂರ್ಯ ಮೊನ್ನೆ ಪಟ್ಟು ಹಿಡಿದಿದ್ದ. ದಿನದಿನವೂ "ಅಮ್ಮ, ಗುಡ್ಡಕ್ಕೆ ಹೋಗಿ ಮತ್ತೆ ಗಿಡ ನೆಟ್ಟು ಬರೋಣ" ಎಂದು ಹಠ ಹಿಡಿದಿದ್ದ ಮಗನಿಗೆ ಬಿಡದ ಮಳೆಯ ಕಾರಣ ನೀಡಿ ಮುಂದೂಡುತ್ತಿದ್ದೆ. ನಿನ್ನೆ ನನ್ನ ಅಕ್ಕ ದೂರದ ಕಲಬುರ್ಗಿಯಿಂದ ಬಂದಿದ್ದಳು. ಅವನಿಗೆ ಆನೆಬಲ ಬಂದಂತಾಯಿತು. ಅವಳು ಪರಿಸರ ಪ್ರೇಮದ, ಜನೋಪಕಾರಿಯಾದ ಯಾವುದೇ ಕೆಲಸಕ್ಕೂ ಸೈ. ಇಬ್ಬರೂ ಸೇರಿ ನಮ್ಮ ಮನೆಯ ಹೊಂಗೆಯ ಮರದಡಿ ಬಿದ್ದು ತಾನಾಗಿ ಬೇರೂರಿ ಬೆಳೆಯುತ್ತಿರುವ ೨೫ಕ್ಕೂ ಹೆಚ್ಚು ಎತ್ತರವಾದ ಹೊಂಗೆ ಗಿಡ ಕಿತ್ತರು. ನಂತರ ಅಪ್ಪನನ್ನು ಪುಸಲಾಯಿಸಿ ಕರೆದ. ೩ ಹಾರೆಯೊಂದಿಗೆ ನಾವು ನಾಲ್ಕು ಜನ ಸೇರಿ ಕಿತ್ತು ಹೋದ ರಸ್ತೆಯಲ್ಲಿ ಕಾರಲ್ಲಿ ಹೊಡಚಾಡುತ್ತ ಹೋದೆವು. ಕಲ್ಲು ಗಣಿಯ ಕೆಲಸ ಅಕ್ಕ-ಪಕ್ಕ ನಡೆದಿತ್ತು. ನಮ್ಮ ಜಾಗದಲ್ಲಿ ಎಲ್ಲರೂ ಸೇರಿ ಆ ಗಿಡಗಳನ್ನೆಲ್ಲ ನೆಟ್ಟು ಮಣ್ಣು ಹಾಕಿ ಗಟ್ಟಿ ಮಾಡಿ ಖುಷಿಯಿಂದ ಮನೆಗೆ ಬಂದೆವು..... ಕಳೆದವರ್ಷ ಮಗ ಚಿನ್ಮಯನ ಜೊತೆ ಹೋಗಿ ನೆಟ್ಟ ಹತ್ತಾರು ಗಿಡಗಳಲ್ಲಿ ೪-೫ ಗಿಡಗಳು ಮಾತ್ರ ಬದುಕಿವೆ.... ಕಲ್ಲಿನ ಜಾಗ. ಕಿಡಿಗೇಡಿಗಳ ಕೈಯಿಂದ, ಆಕಳ ಬಾಯಿಂದ ಎಲ್ಲಾ ಗಿಡಗಳು ಬದುಕಿ ಬೆಳೆಯಲಿ..... ಹಸಿರು ತುಂಬಲಿ.... ಎಂಬುದೊಂದೇ ದೇವರಲ್ಲಿ ಪ್ರಾರ್ಥನೆ.

'ಪರಿಸರ ದಿನ'ದ ಕನ್ನಡಿಯಲ್ಲಿ ಕಂಡ ಅಕ್ಕರೆಯ ಮಗ ಸೂರ್ಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ....

ನಿನ್ನೆ ಜೂನ್‌ 8. ನನ್ನ ಎರಡನೆ ಮಗ ಸೂರ್ಯ ಹುಟ್ಟಿದ ದಿನ. ಸೂರ್ಯ ಅಪ್ಪಟ ಪರಿಸರ ಪ್ರೇಮಿಯಾಗಿದ್ದಕ್ಕೆ ಜೂನ್‌ ತಿಂಗಳಲ್ಲಿ ಹುಟ್ಟಿದನೋ ಅಥವಾ ಜೂನ್‌ ತಿಂಗಳಲ್ಲಿ ಹುಟ್ಟಿದ್ದಕ್ಕೆ ಪರಿಸರ ಪ್ರೇಮಿ ಆದನೋ ಗೊತ್ತಿಲ್ಲ! ಆದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಅಕ್ಕರೆಯ ಹುಡುಗ. ಪರಿಸರ ಪ್ರಜ್ಞೆಯ ಪಾಠ ಹೇಳುವವನು ಎಂದರೆ 23ರ ಪೋರ ಸೂರ್ಯ ಎನ್ನಲು ನನಗೆ ಹೆಮ್ಮೆ. ಅವನಿಗೆ ಪರಿಸರ ಪ್ರಜ್ಞೆ ಬಂದಾಗಿನಿಂದ ಪರಿಸರ ಪ್ರೇಮಿಯಾಗಿ ಬದಲಾದ ಬಗೆ ತುಂಬಾ ಹೆಮ್ಮೆ ಪಡುವಂತದ್ದು. ತನ್ನ ದಾರಿಯಲ್ಲಿ ಬಂದವರಿಗೆಲ್ಲ ತನಗೆ ತಿಳಿದದ್ದನ್ನು, ತಾನು ಆಚರಿಸುವುದನ್ನು ಅವರು ಕೇಳಲಿ, ಬಿಡಲಿ ತನ್ನ ಕರ್ತವ್ಯ ಎಂಬಂತೆ ಅವರ ಮುಂದೇ ಹೇಳಿಕೊಂಡೇ ಬರುತ್ತಿರುವ ಸೂರ್ಯನಿಂದ ಅವರ ನಿತ್ಯ ಜೀವನದಲ್ಲಿ ಪುಟ್ಟ ಪರಿವರ್ತನೆಯಾದರೂ ಖಂಡಿತಾ ಆಗಿದೆ ಎಂಬುದು ನನ್ನ ನಂಬಿಕೆ. ಯಾಕೆಂದರೆ ಆತ ಕೇವಲ ಉಪದೇಶ ಮಾಡುವವನಲ್ಲ, 99% ಆಚರಣೆ ಕೂಡಾ ಮಾಡುತ್ತ ತನ್ನ ನಡತೆಯಿಂದಲೇ ಇತರರಿಗೆ ಮಾದರಿಯಾಗುತ್ತ ಬಂದಿದ್ದಾನೆ. ನಮ್ಮ ಪರಿಸರ, ಅದರ ಭೀಕರವಾಗುತ್ತಿರುವ ಭವಿಷ್ಯದ ಕುರಿತು ಆಳವಾಗಿ ಅಧ್ಯಯನ ಮಾಡಿ ಅರಿತ ಅವನಿಗೆ ನಮ್ಮ ಪರಿಸರದ ಭವಿಷ್ಯಕ್ಕೆ ಯಾವುದು ಮಾರಕ? ಯಾವುದು ಪೂರಕ? ಎಂಬ ಬಗ್ಗೆ ತುಂಬ ತಿಳುವಳಿಕೆಯಿದೆ. ನನ್ನ ಮಗ ಸೂರ್ಯನ ಪ್ರತಿ ಕೆಲಸದಲ್ಲೂ ಪರಿಸರ ಪ್ರಜ್ಞೆ ಜಾಗೃತವಾಗುತ್ತದೆ. ವಿಜ್ಞಾನಿಯಾಗುವ ಮನಸ್ಸಿದ್ದರೂ ಮನೆಯ ಪರಿಸ್ಥಿತಿ, ಅಪ್ಪ- ಅಮ್ಮನ ಒತ್ತಾಸೆಯ ಮೇರೆಗೆ ರಾಮಯ್ಯ ಕಾಲ...