ಜೂನ್ ತಿಂಗಳಲ್ಲಿ ಅವನ ಹುಟ್ಟಿದ ದಿನದ ನಿಮಿತ್ತ ೨೫ ಗಿಡ ನೆಟ್ಟು ಬಂದಿದ್ದೆವು. ಮತ್ತೆ ೫೦ ಗಿಡ ನೆಡೋಣ ಎನ್ನುತ್ತಿದ್ದ ಮಗ ಸೂರ್ಯ ಮೊನ್ನೆ ಪಟ್ಟು ಹಿಡಿದಿದ್ದ.
ದಿನದಿನವೂ "ಅಮ್ಮ, ಗುಡ್ಡಕ್ಕೆ ಹೋಗಿ ಮತ್ತೆ ಗಿಡ ನೆಟ್ಟು ಬರೋಣ" ಎಂದು ಹಠ ಹಿಡಿದಿದ್ದ ಮಗನಿಗೆ ಬಿಡದ ಮಳೆಯ ಕಾರಣ ನೀಡಿ ಮುಂದೂಡುತ್ತಿದ್ದೆ.
ನಿನ್ನೆ ನನ್ನ ಅಕ್ಕ ದೂರದ ಕಲಬುರ್ಗಿಯಿಂದ ಬಂದಿದ್ದಳು. ಅವನಿಗೆ ಆನೆಬಲ ಬಂದಂತಾಯಿತು. ಅವಳು ಪರಿಸರ ಪ್ರೇಮದ, ಜನೋಪಕಾರಿಯಾದ ಯಾವುದೇ ಕೆಲಸಕ್ಕೂ ಸೈ. ಇಬ್ಬರೂ ಸೇರಿ ನಮ್ಮ ಮನೆಯ ಹೊಂಗೆಯ ಮರದಡಿ ಬಿದ್ದು ತಾನಾಗಿ ಬೇರೂರಿ ಬೆಳೆಯುತ್ತಿರುವ ೨೫ಕ್ಕೂ ಹೆಚ್ಚು ಎತ್ತರವಾದ ಹೊಂಗೆ ಗಿಡ ಕಿತ್ತರು. ನಂತರ ಅಪ್ಪನನ್ನು ಪುಸಲಾಯಿಸಿ ಕರೆದ. ೩ ಹಾರೆಯೊಂದಿಗೆ ನಾವು ನಾಲ್ಕು ಜನ ಸೇರಿ ಕಿತ್ತು ಹೋದ ರಸ್ತೆಯಲ್ಲಿ ಕಾರಲ್ಲಿ ಹೊಡಚಾಡುತ್ತ ಹೋದೆವು. ಕಲ್ಲು ಗಣಿಯ ಕೆಲಸ ಅಕ್ಕ-ಪಕ್ಕ ನಡೆದಿತ್ತು. ನಮ್ಮ ಜಾಗದಲ್ಲಿ ಎಲ್ಲರೂ ಸೇರಿ ಆ ಗಿಡಗಳನ್ನೆಲ್ಲ ನೆಟ್ಟು ಮಣ್ಣು ಹಾಕಿ ಗಟ್ಟಿ ಮಾಡಿ ಖುಷಿಯಿಂದ ಮನೆಗೆ ಬಂದೆವು.....
ಕಳೆದವರ್ಷ ಮಗ ಚಿನ್ಮಯನ ಜೊತೆ ಹೋಗಿ ನೆಟ್ಟ ಹತ್ತಾರು ಗಿಡಗಳಲ್ಲಿ ೪-೫ ಗಿಡಗಳು ಮಾತ್ರ ಬದುಕಿವೆ.... ಕಲ್ಲಿನ ಜಾಗ. ಕಿಡಿಗೇಡಿಗಳ ಕೈಯಿಂದ, ಆಕಳ ಬಾಯಿಂದ ಎಲ್ಲಾ ಗಿಡಗಳು ಬದುಕಿ ಬೆಳೆಯಲಿ..... ಹಸಿರು ತುಂಬಲಿ.... ಎಂಬುದೊಂದೇ ದೇವರಲ್ಲಿ ಪ್ರಾರ್ಥನೆ.
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್ಬುಕ್ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ