‘ಮೃಗಶಿರೆ ಮಳೆಯಲ್ಲಿ ಮೃಗದ ಕೊಂಬೂ ಚಿಗುರುತ್ತದೆ’ ಎಂದು ಪ್ರತಿವರ್ಷ ಈ ಸಮಯದಲ್ಲಿ ಅತ್ತೆ ಹೇಳುವ ಮಾತಿದು.
ನಿಜ. ಅತ್ತೆ - ಮಾವ ಮನೆಯಂಗಳದಲ್ಲಿ ಬೆಂಡೆ ಬೀಜ, ಪಡವಲ ಬೀಜ, ಹೀರೇಬೀಜ ಬಿತ್ತಿ ಅದಕ್ಕೆ ಮಣ್ಣು, ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದ ಕಾಲವದು. ಬೇಕಾಬಿಟ್ಟಿ ಬೆಳೆದ ಗಿಡದ ಟೊಂಗೆಗಳನ್ನೆಲ್ಲ ಕಡಿದು, ಬೇಕಾದಲ್ಲಿ ನೆಟ್ಟು - ಬೇಕಾದವರಿಗೆ ಕೊಟ್ಟು, ಬೇಕಾಗಿದ್ದು ಅವರಿಂದ ತರುವ ಕಾಲ......
೭೮ ವರ್ಷ ದಾಟಿದ ಆಚೆಮನೆ ಅಪ್ಪಚ್ಚಿ - ಚಿಕ್ಕಿ ಪ್ರತಿವರ್ಷ ಅಂಗಳದಲ್ಲಿ ಬೆಂಡೆ, ಹೀರೆ, ಪಡುವಲ, ಹಾಗಲ.... ಅಂತ ಬೀಜ ಬಿತ್ತಿ; ಬರುವ ಗಿಡದ ಆರೈಕೆ ಮಾಡುವ ಪರಿ ಅನುಕರಣೀಯ. ಕಾಲಕಾಲಕ್ಕೆ ಸರಿಯಾಗಿ ಗಿಡಗಳಿಗೆ ಗೊಬ್ಬರ, ಮಣ್ಣು ನೀಡಿ ಗಿಡಗಳನ್ನು ಮಕ್ಕಳಂತೆ ಬೆಳೆಯುವ ಅಪ್ಪಚ್ಚಿಯ ಪರಿ ಖುಷಿ ನೀಡುತ್ತದೆ. ಮಳೆ ಕಡಿಮೆ ಇರುವ ಸಮಯ ನೋಡಿ, ಮಳೆ ಬಂದರೆ ಮತ್ತೆ ಮರೆಯಲ್ಲಿ ನಿಂತು ಹೀಗೇ ವಾರಕ್ಕೊಮ್ಮೆ ಗಿಡಗಳಿಗೆ ಆರೈಕೆ ಮಾಡಿ, ಬೆಳಗಿನ ಸಮಯ ಸಕಾಲಕ್ಕೆ ಹೊರಗಿನ ಕೆಲಸ ಮುಗಿಸುವುದು.....
ಚಹಾ-ತಿಂಡಿ-ಊಟ, ಕವಳ, ಕೆಲಸ.... ಹೀಗೇ ಎಲ್ಲವನ್ನೂ ಸಮಯಕ್ಕೆ ಸರಿಯಾಗಿ ಮಾಡುತ್ತ ಬಿ.ಪಿ., ಶುಗರ್, ಮಂಡಿನೋವುಗಳಂತಹ ಖಾಯಂ ಕಾಯಿಲೆಗಳಿಂದ ದೂರವಿದ್ದು; ತಮ್ಮ ಆರೋಗ್ಯ ಅನುಪಮವಾಗಿ ಕಾದುಕೊಂಡಿರುವ ಅಪ್ಪಚ್ಚಿ-ಚಿಕ್ಕಿಯ ದಿನಚರಿ ಅನುಕರಣೀಯ......
ನಾನು ಪಂಚಾಂಗ ನೋಡಲು ಬರದೆ ಕಷ್ಟಪಡುತ್ತಿದ್ದೆ. ಅತ್ತಿಗೆ ಹೇಳಿದ್ದರಿಂದ; ಶಾಬಾದಿಮಠ ಕ್ಯಾಲೆಂಡರ್ನ್ನು ಮಳೆನಕ್ಷತ್ರದ ಜೊತೆ ಸಾಕಷ್ಟು ವಿವರ ಇರುವುದು ನೋಡಿ ಖುಷಿಯಿಂದ ತರಿಸಿಕೊಂಡೆ. ಅದರಲ್ಲಿ ಮೃಗಶಿರ, ಮಘ, ಹುಬ್ಬೆ, ಸ್ವಾತಿ.... ಹೀಗೇ ಪದೇ ಪದೇ ಅತ್ತೆಯ ಬಾಯಿಂದ ಕೇಳುತ್ತಿದ್ದ ಮಳೆ ನಕ್ಷತ್ರದ ಆ ಹೆಸರು ನೋಡುವುದೇ ಖುಷಿ.
ನಾನು ಕ್ಯಾಲೆಂಡರ್ನಲ್ಲಿ ನೋಡಿದ ಹಾಗೆ ಎಪ್ರಿಲ್ ತಿಂಗಳಲ್ಲಿ ಮಳೆನಕ್ಷತ್ರ ಆರಂಭ. *ಅಶ್ವಿನಿ *ಭರಣಿ *ಕೃತ್ತಿಕ *ರೋಹಿಣಿ *ಮೃಗಶಿರ *ಆರಿದ್ರ *ಪುನರ್ವಸು *ಪುಷ್ಯ *ಆಶ್ಲೇಷ *ಮಘ *ಹುಬ್ಬ *ಉತ್ತರ *ಹಸ್ತ *ಚಿತ್ತ *ಸ್ವಾತಿ *ವಿಶಾಖಾ......... ನವೆಂಬರ್ನಲ್ಲಿ ಮುಕ್ತಾಯ.
ಹೀಗೇ ಅತ್ತೆ ಮಳೆ ನಕ್ಷತ್ರಗಳ ಬಗ್ಗೆ ಹಲವಾರು ಗಾದೆ ಮಾತು, ಮಾಹಿತಿ ಪ್ರತಿಬಾರಿ ನೀಡುತ್ತಲೇ ಇದ್ದುದು ಆಗಾಗ ನೆನಪಾಗುತ್ತಿರುತ್ತದೆ. ಜೂನ್ ೮ ರಿಂದ ಆರಂಭವಾದ ಮೃಗಶಿರ ಮಳೆ ಜೂನ್ ೨೧ರವರೆಗೆ ಇದ್ದು ಅಲ್ಲಿಯವರೆಗೆ ನಾವು ಯಾವುದೇ ಗಿಡದ ಟೊಂಗೆ, ಗಿಡ ನೆಟ್ಟರೆ ಖಂಡಿತಾ ಫಲವಿದೆ. ನಂತರ ನೆಟ್ಟರೆ ಕೊಳೆ ರೋಗ ಬಂದು ಹಾಳಾಗುವುದೇ ಜಾಸ್ತಿ. ಇದು ಅತ್ತೆಯಿಂದ ನಾನು ಕಂಡ, ಕಲಿತ ಪಾಠ ಕೂಡ.
ಹಾಗೇ ನೆನಪಾಗುವುದು ನನ್ನ ಅಣ್ಣ ಹೇಳಿದ್ದು. 'ಕುಂಭ ಮಾಸದ ೯ ನೇ ದಿನ ತೆಂಗಿನ ಗಿಡ ನೆಟ್ಟರೆ ತುಂಬಾ ಒಳ್ಳೆಯದು. ಗಿಡ ಚೆನ್ನಾಗಿ ಬೆಳೆಯುತ್ತದೆ. ಒಳ್ಳೆಯ ಫಸಲು ನೀಡುತ್ತದೆ' ಎಂದಿದ್ದ. ಅದರಂತೆ ನಾವು ಈ ಬಾರಿ ನಮ್ಮ ಮನೆಯ ತೋಟದಲ್ಲಿ ಕುಂಭ ಮಾಸದ ೯ನೇ ದಿನ ರವಿವಾರ(೨೦೨೧ ಫೆಬ್ರವರಿ ೨೧ಕ್ಕೆ) ೧೦ ತೆಂಗಿನ ಗಿಡಗಳನ್ನು ನೆಟ್ಟಿದ್ದು ಗಿಡ ಬೇರು ಬಿಟ್ಟು ಬದುಕಿದೆ.
ಹೀಗೇ ಹಿರಿಯರು ಕಟ್ಟಿಕೊಟ್ಟ ಈ ಹತ್ತಾರು ಅನುಭವ ಪಾಠ ಸ್ವಲ್ಪವಾದರೂ ನಮ್ಮಿಂದ ಮುಂದೆ ಮಕ್ಕಳಿಗೆ ಸಾಗಬೇಕಿದೆ. ಇಂದು ಜೂನ್ ೧೪. ಮೃಗಶಿರ ಬಂದು ಮುಂದೆ ಸಾಗುತ್ತಿದೆ........
ಮತ್ತೆ ಮತ್ತೆ ಪ್ರತಿವರ್ಷವೂ ಬಂದು; ಮುರಿದೂರಿದ ಟೊಂಗೆಗೂ ಜೀವನೀಡುವ ಈ 'ಮೃಗಶಿರ ಮಳೆ'ಯನ್ನು ನಾವೆಂದೂ ಮರೆಯದಿರೋಣ ಅಲ್ಲವೇ?

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ