ಮೊನ್ನೆ ನಮ್ಮ ಮನೆಯಲ್ಲಿ ಅಪ್ಪ - ಮಗನಿಗೆ ಹಂಡಾಹುಂಡಿ ಜಗಳ. ಮುನಿಸು. ಸಿಟ್ಟು. ಕೋಪ....
ಯಾಕೆ ಗೊತ್ತಾ? ವಿಷಯ ಕೇಳಿದರೆ ನಿಮಗೆ ದಂಗಾಗಬಹುದು. ಯಾಕೆ ಹೇಳಿ?
ಯಾಕೆಂದ್ರೆ ಕಾರಣ ಇಷ್ಟೇ 'ಗಿಡಗಳಿಗೆ ನಾನು ನೀರು ಹಾಕ್ತೇನೆ.... ಇಲ್ಲ ನಾನು.... ಇಲ್ಲ ನಾನು..... ಇಲ್ಲಾ ನಾನೇ.....' ಹೀಗೆ ಕಂಡಾಪಟ್ಟೆ ಜಗಳ. ನೀನು ನೀರು ಹಾಕು ಅಂತಲ್ಲ ಅಥವಾ ನೀನು ಕೆಲಸ ಮಾಡು ಅಂತಲ್ಲ, 'ನಾನು ಮಾಡ್ತೀನಿ, ನಾನು ಮಾಡ್ತೀನಿ' ಅಂತ ಜಗಳವೇ ಜಗಳ!!
ಹೌದು, ಮಗನ ಹಠಕ್ಕೆ ಮಣಿದು ಅವನದೇ ಖರ್ಚಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 300ಕ್ಕೂ ಹೆಚ್ಚು ಗಿಡ ಅರಣ್ಯ ಇಲಾಖೆ ನರ್ಸರಿಯಿಂದ ತಂದು ಗುಡ್ಡದ ಜಾಗದಲ್ಲಿ ನೆಟ್ಟಿದ್ದೆವು. ಅದರಲ್ಲಿ 150 ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಕಾಡು ಜಾತಿಯ ಗಿಡವಾದರೂ ಅದು ಪುಟ್ಟದಾಗಿರುವುದರಿಂದ ಈ ಬಾರಿ ಅದಕ್ಕೆ ನೀರು ಬೇಕು. ಹಾಗಾಗಿ ಅಲ್ಲೊಂದು ನೀರಿನ ಟ್ಯಾಂಕ್ ತಂದಿಟ್ಟು; ಅದರಲ್ಲಿ ಹಣ ಕೊಟ್ಟು ನೀರು ಸಪ್ಲೈ ಮಾಡುವವರಿಂದ ನೀರು ತುಂಬಿಸಿ ಬಕೆಟ್ ನಲ್ಲಿ ಹಿಡಿದು ಗಿಡಗಳಿಗೆ ಹಾಕುವ ಕೆಲಸ. ಇದು ಇಬ್ಬರಿಗೆ ಸುಮಾರು 2 ತಾಸಿನ ಕೆಲಸ.
ಮಗನಿಗೆ ವರ್ಕ್ ಫ್ರಮ್ ಹೋಮ್. ಹಾಗಾಗಿ ತನಗೆ ಕೆಲಸ ಇದ್ದಾಗ ಅಪ್ಪ ಒಬ್ಬರೇ ಹೋಗುತ್ತಾರೆ ಎಂಬ ಚಿಂತೆ ಮಗನಿಗೆ. ಮಗನಿಗೆ ಕಷ್ಟ ಆಗಬಾರದು ಎಂದು ಅಪ್ಪನಿಗೆ. ಹೀಗೆ ಇಬ್ಬರ ಕಾಳಜಿಯ ಜಗಳ ! ನನಗೆ ಮನದಲ್ಲೇ ನಗು. ಹೆಮ್ಮೆ.....
ಕೊನೆಗೂ ಮಗ ಅಪ್ಪನ ಕಣ್ತಪ್ಪಿಸಿ ಹೋಗಿ ಒಂದೂವರೆ ತಾಸುಗಳ ಕಾಲ ಗಿಡಗಳಿಗೆ ನೀರುಹಾಕಿ ಬಂದು ಅಪ್ಪನಿಗೆ ನೆರವಾದ ಖುಷಿಯಲ್ಲಿ ಗೆಳೆಯರ ಮನೆಪ್ರವೇಶದ ಕಾರ್ಯಕ್ರಮಕ್ಕೆ 4ದಿನಗಳ ಟ್ರಿಪ್ ಹೊರಟ.....
ಕೆಲಸ ಮಾಡದಿರಲು ಜಗಳ ನಡೆಯುವುದು ಸಾಮಾನ್ಯವಾಗಿ ಸಹಜ. ನಾನು ನಾನು ಅಂತ ಕೆಲಸ ಮಾಡಲು ಜಗಳಾಡುವುದನ್ನು ನಾನು ನೋಡಿದ ನೆನಪಿಲ್ಲ.... ಒಟ್ಟಿನಲ್ಲಿ ಇವರ ಜಗಳದಲ್ಲಿರುವ ಪ್ರೀತಿಯಿಂದಾಗಿ ನಮ್ಮ ಗಿಡಗಳು ಹಸಿರಾಗಿ ಬೆಳೆದರೆ ಅಷ್ಟೇ ಸಾಕು ಎಂದು ಮನದಲ್ಲೇ ಅಂದುಕೊಂಡೆ.... ನೀವೇನಂತೀರಾ.....

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ