ವಿಷಯಕ್ಕೆ ಹೋಗಿ

'ಪರಿಸರ ದಿನ'ದ ಕನ್ನಡಿಯಲ್ಲಿ ಕಂಡ ಅಕ್ಕರೆಯ ಮಗ ಸೂರ್ಯನಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ....

ನಿನ್ನೆ ಜೂನ್‌ 8. ನನ್ನ ಎರಡನೆ ಮಗ ಸೂರ್ಯ ಹುಟ್ಟಿದ ದಿನ. ಸೂರ್ಯ ಅಪ್ಪಟ ಪರಿಸರ ಪ್ರೇಮಿಯಾಗಿದ್ದಕ್ಕೆ ಜೂನ್‌ ತಿಂಗಳಲ್ಲಿ ಹುಟ್ಟಿದನೋ ಅಥವಾ ಜೂನ್‌ ತಿಂಗಳಲ್ಲಿ ಹುಟ್ಟಿದ್ದಕ್ಕೆ ಪರಿಸರ ಪ್ರೇಮಿ ಆದನೋ ಗೊತ್ತಿಲ್ಲ! ಆದರೆ ನಮ್ಮ ಮನೆಯಲ್ಲಿ ಎಲ್ಲರಿಗೂ ಅಕ್ಕರೆಯ ಹುಡುಗ. ಪರಿಸರ ಪ್ರಜ್ಞೆಯ ಪಾಠ ಹೇಳುವವನು ಎಂದರೆ 23ರ ಪೋರ ಸೂರ್ಯ ಎನ್ನಲು ನನಗೆ ಹೆಮ್ಮೆ. ಅವನಿಗೆ ಪರಿಸರ ಪ್ರಜ್ಞೆ ಬಂದಾಗಿನಿಂದ ಪರಿಸರ ಪ್ರೇಮಿಯಾಗಿ ಬದಲಾದ ಬಗೆ ತುಂಬಾ ಹೆಮ್ಮೆ ಪಡುವಂತದ್ದು. ತನ್ನ ದಾರಿಯಲ್ಲಿ ಬಂದವರಿಗೆಲ್ಲ ತನಗೆ ತಿಳಿದದ್ದನ್ನು, ತಾನು ಆಚರಿಸುವುದನ್ನು ಅವರು ಕೇಳಲಿ, ಬಿಡಲಿ ತನ್ನ ಕರ್ತವ್ಯ ಎಂಬಂತೆ ಅವರ ಮುಂದೇ ಹೇಳಿಕೊಂಡೇ ಬರುತ್ತಿರುವ ಸೂರ್ಯನಿಂದ ಅವರ ನಿತ್ಯ ಜೀವನದಲ್ಲಿ ಪುಟ್ಟ ಪರಿವರ್ತನೆಯಾದರೂ ಖಂಡಿತಾ ಆಗಿದೆ ಎಂಬುದು ನನ್ನ ನಂಬಿಕೆ. ಯಾಕೆಂದರೆ ಆತ ಕೇವಲ ಉಪದೇಶ ಮಾಡುವವನಲ್ಲ, 99% ಆಚರಣೆ ಕೂಡಾ ಮಾಡುತ್ತ ತನ್ನ ನಡತೆಯಿಂದಲೇ ಇತರರಿಗೆ ಮಾದರಿಯಾಗುತ್ತ ಬಂದಿದ್ದಾನೆ. ನಮ್ಮ ಪರಿಸರ, ಅದರ ಭೀಕರವಾಗುತ್ತಿರುವ ಭವಿಷ್ಯದ ಕುರಿತು ಆಳವಾಗಿ ಅಧ್ಯಯನ ಮಾಡಿ ಅರಿತ ಅವನಿಗೆ ನಮ್ಮ ಪರಿಸರದ ಭವಿಷ್ಯಕ್ಕೆ ಯಾವುದು ಮಾರಕ? ಯಾವುದು ಪೂರಕ? ಎಂಬ ಬಗ್ಗೆ ತುಂಬ ತಿಳುವಳಿಕೆಯಿದೆ. ನನ್ನ ಮಗ ಸೂರ್ಯನ ಪ್ರತಿ ಕೆಲಸದಲ್ಲೂ ಪರಿಸರ ಪ್ರಜ್ಞೆ ಜಾಗೃತವಾಗುತ್ತದೆ. ವಿಜ್ಞಾನಿಯಾಗುವ ಮನಸ್ಸಿದ್ದರೂ ಮನೆಯ ಪರಿಸ್ಥಿತಿ, ಅಪ್ಪ- ಅಮ್ಮನ ಒತ್ತಾಸೆಯ ಮೇರೆಗೆ ರಾಮಯ್ಯ ಕಾಲೇಜಿನಲ್ಲಿದ್ದ ಏಕೈಕ ಕನ್ನಡ ಮೀಡಿಯಂನ ಸೀಟ್‌ ಗಿಟ್ಟಿಸಿಕೊಂಡು, ತನ್ನ‌ ಒಳ್ಳೆಯ ನಡೆ-ನುಡಿ-ಓದಿನಿಂದ ಎಲ್ಲರ ಗಮನ ಸೆಳೆದು ಯಶಸ್ವಿ ಇಂಜನೀಯರ್‌ ಆಗಿ; ಮನೆಗೆ ಆಸರೆಯಾಗಿ; ಎಲ್ಲರ ಕೈಮುದ್ದಾಗಿ; ಅವನ ಅಭಿಲಾಷೆಯಂತೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎನ್ನಲೇಬೇಕು. ನಮಗೂ ಇಂಜನೀಯರಿಂಗ್‌ ಓದಿಸುವ ಮನಸ್ಸಿಲ್ಲದಿದ್ದರೂ, ಅವನಿಗೆ ಅಪಘಾತದಲ್ಲಿ ಕಾಲಿಗೆ ಪ್ಲಾಸ್ಟರ್‌ ಹಾಕಿದಾಗ; ಅವನ ಕೈಗೆ ಕಂಪ್ಯೂಟರ್‌ ಸಿಕ್ಕು ಅವನು ಅದರಲ್ಲಿ ತುಂಬ ಪರಿಣಿತನಾಗಿದ್ದನ್ನು ಕಂಡು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಯ್ತು. ಅವನ ಅಣ್ಣ ಚಿನ್ಮಯನ ಮಾರ್ಗದರ್ಶನ ಕೂಡ ಅವನಿಗೆ ಒತ್ತಾಸೆಯಾಗಿ ಸಿಕ್ಕತ್ತು. ಚಿಕ್ಕವರಿರುವಾಗಲೇ ಶಾಲೆಯ ಜೊತೆಗೆ ಖಾಯಂ ಸಿನೆಮಾ ನೋಡುತ್ತಿದ್ದ ಅವರು ಇಂಗ್ಲೀಷ್‌, ಹಿಂದಿ ಭಾಷೆ ನಿರರ್ಗಳವಾಗಿ ಮಾತನಾಡುವಂತಾದರು. ಅಪ್ಪನ ಆಶಯದಂತೆ ಯಾವುದೇ ಅಂಕ, ಐಶ್ವರ್ಯಗಳ ಒತ್ತಡವಿಲ್ಲದೇ ನಮ್ಮ ಮಕ್ಕಳು ಕಾಡು ಮರದಂತೆ ಬೆಳಕನ್ನರಸುತ್ತಾ ಬೆಳೆಯುತ್ತಿದ್ದಾರೆ..... ಒಟ್ಟಿನಲ್ಲಿ ಯಾವುದೇ ಟ್ಯೂಶನ್‌ ಇಲ್ಲದೆಯೂ ಸಿಇಟಿಯಲ್ಲಿ ಉತ್ತಮ ಅಂಕ ಪಡೆದು ಸೂರ್ಯ ಬೆಂಗಳೂರಿನ ರಾಮಯ್ಯ ಕಾಲೇಜಿಗೆ ಸೀಟ್‌ ಪಡೆದಿದ್ದ. ಹವ್ಯಕ ಹಾಸ್ಟೇಲ್‌ನಿಂದ ಪ್ರತಿದಿನ ಕಾಲೇಜಿಗೆ ಹೋಗಿ ಬರುತ್ತಿದ್ದ. ಸರ್ಕಾರಿ ಬಸ್‌ನಲ್ಲೇ ಓಡಾಡುತ್ತಿದ್ದ. ಹಾಸ್ಟೇಲ್‌ಗೆ ಯಾವುದೇ ಪಾರ್ಸಲ್‌ ತರಿಸದೇ ಅಮ್ಮ ಕೊಟ್ಟ ತಿಂಡಿ ತಿನ್ನುತ್ತಿದ್ದ ಅಥವಾ ಬೇಕಾದರೆ ಹೊಟೆಲ್‌ಗೆ ಹೋಗಿ ತಿಂಡಿ ತಿಂದು ಬರುತ್ತಿದ್ದ. ಕಾರಣ ಪಾರ್ಸಲ್‌ ಪ್ಲಾಸ್ಟಿಕ್‌! ಹಾಗೇ ಪ್ಯಾಕ್ಡ್‌ ಫುಡ್‌ ಯಾವುದನ್ನೂ ತರುತ್ತಿರಲಿಲ್ಲ. ನಮಗೂ ತರಲು ಬಿಡುತ್ತಿರಲಿಲ್ಲ. ಅಮ್ಮ ತಿಂಡಿ ಕೊಟ್ಟ ಪ್ಲಾಸ್ಟಿಕ್‌ ಪ್ರತಿಯೊಂದೂ ಪ್ಲಾಸ್ಟಿಕ್‌ ಕವರ್‌, ಡಬ್ಬಿ ಎಲ್ಲವೂ ಲೆಕ್ಕವಿಟ್ಟಂತೆ ಬೆಂಗಳೂರಿನಿಂದ ಮನೆಗೆ ಬರುವಾಗ ಹಿಂದಿರುಗುತ್ತಿತ್ತು. ಇಡೀ ನಾಲ್ಕು ವರ್ಷಗಳ ಇಂಜನೀಯರಿಂಗ್‌ ಓದಿಗೆ ಕಾಲೇಜು ಪ್ರಾರಂಭದಲ್ಲಿ ಹೋದಾಗ ಅಣ್ಣನ ಜೊತೆ ಅಂಗಡಿಗೆ ಹೋಗ ತೆಗೆದುಕೊಂಡ ಬಟ್ಟೆ ಬಿಟ್ಟರೆ ಮತ್ತೆ ಒಂದೂ ಬಟ್ಟೆ ಖರೀದಿ ಮಾಡಿರಲಿಲ್ಲ. ನಾಲ್ಕು ವರ್ಷಕ್ಕೆ ಒಂದೇ ಜೊತೆ ಚಪ್ಪಲಿ. ಹರಿದು ಹೋದರೂ ಬಿಡದೇ ಒಂದೇ ಕಾಲೇಜ್‌ ಬ್ಯಾಗ್!‌ ತನ್ನ ತಾಟು, ತಟ್ಟೆ, ಬಟ್ಟೆ ಎಲ್ಲವನ್ನೂ ಮನೆಗೆ ಬಂದರೂ ತಾನೇ ತೊಳೆದುಕೊಳ್ಳುತ್ತಿದ್ದ. ಈಗಲೂ ಅದು ಮುಂದುವರಿದೇ ಇದೆ.......
ಹೀಗೇ ನನ್ನ ಕಿರಿಯ ಮಗ ಸೂರ್ಯನ ಕುರಿತು ಹೇಳುತ್ತಾ ಹೋದರೆ ಪುಟಗಳೇ ಸಾಲದು. ಪ್ರತಿದಿನವೂ ಪಾಠವಿದೆ.... ಹಾಗೇ ಅವನ ಅಣ್ಣ ಚಿನ್ಮಯನ ಕತೆಯ ಚಿತ್ರಣವೇ ಬೇರೆ. ಅವನು ಸಣ್ಣವನಿಂದ ಮಾಡಿದ ಹಠ, ಪುಂಡು, ರಗಳೆ, ರಂಪಾಟ ಸಿಕ್ಕಾಪಟ್ಟೆ. ಅಪಾರ ಪ್ರತಿಭೆ ಅವನದು. ಸದಾ ಸಂಚಾರಿ. ಡಿಗ್ರಿಯನ್ನೂ ಮುಗಿಸದ ಪೋರ ಇಷ್ಟು ಸಣ್ಣ ವಯಸ್ಸಿನಲ್ಲಿ 4-5 ಭಾಷೆಗಳನ್ನು ಮಾತನಾಡುತ್ತ ದೇಶ-ವಿದೇಶ ಸುತ್ತಾಡಿ, ಅಂತರಾಷ್ಟ್ರೀಯ ಪ್ರಶಸ್ತಿ ಪಡೆದು ಮತ್ತೂ ಕನಸು ಹೊತ್ತು ಸಾಗುತ್ತಲೇ ಇರುವ ಅನುಭವದ ಗಣಿಯಾದ ಅವನ ಕತೆ ಬರೆದು ಮುಗಿಸಲು ನನ್ನ ಬಳಿ ಸಾಧ್ಯವೇ ಇಲ್ಲವೇನೋ! ಒಟ್ಟಿನಲ್ಲಿ ಪರಿಸರ ಮಾಸದ ಈ ದಿನ ಪರಿಸರ ಪ್ರೇಮಿ ಮಗನನ್ನು ಹಡೆದ ನನ್ನ ಕನಸು ಇಷ್ಟೇ. ಪರಿಸರಕ್ಕಾಗಿ ಪ್ರತಿದಿನ ಪರಿತಪಿಸಲು ಸೂರ್ಯನಂತಹ ಯುವಕರು, ಮಕ್ಕಳು ಮುಂದೆ ಬಂದರೆ; ದೊಡ್ಡವರಾದ ನಾವು ಕಳೆದ ೫೦ ವರ್ಷಗಳ ಈಚೆಗೆ ಪರಿಸರಕ್ಕೆ ಮಾಡುತ್ತಿರುವರೆನ್ನಲಾದ ಅಪಚಾರಕ್ಕೆ ತಡೆಯಾಗಿ; ಅವರು ಅವರ ಮುಂದಿನ ಪೀಳಿಗೆಗೆ ಸ್ವಲ್ಪವಾದರೂ ಪರಿಸರದ ನೈಜ ಚಿತ್ರಣ ಕಾದಿಡಲು ಸಾಧ್ಯ. ಹೀಗಾಗಿ ಬಿಡುವಾದಾಗ ಅವನ ಪರಿಸರ ಪ್ರಜ್ಞೆಯ ಪ್ರತಿಯೊಂದು ಹೆಜ್ಜೆಯ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅವನ ಪುಟ್ಟ ಪುಟ್ಟ ಮಾರ್ಗದರ್ಶನದಿಂದ ನನ್ನಲ್ಲಿ ತುಂಬಾ ಬದಲಾವಣೆ ಆಗಿದೆ. ನೀವೂ ಅರಿತು ನಿಮ್ಮ ಹಿರಿಯರಿಗೆ, ಮಕ್ಕಳಿಗೆ ತಿಳಿಸಿ ಮುನ್ನಡೆಯಿರಿ. ಅಲ್ಲದೇ ನಮಗಾಗಿಯೇ ಇರುವ ಪರಿಸರವನ್ನು ರಕ್ಷಿಸುವ ಹೊಣೆ ನಮ್ಮದೇ ಆಗಿದೆ. ನಮ್ಮ ಮಕ್ಕಳಿಗಾಗಿ ಈ ಪರಿಸರವನ್ನು ಕಾದುಕೊಂಡು ಮುನ್ನಡೆಯಲೇಬೇಕಾದ ಸಂದರ್ಭ ಈಗ ನಮ್ಮ ಮುಂದಿದೆ ಎಂಬ ಮಾತನ್ನು ಹೇಳುತ್ತಾ ನಮ್ಮ ಮಕ್ಕಳಿಗೆ ನಿಮ್ಮೆಲ್ಲರ ಶುಭಹಾರೈಕೆ ಬೇಡುತ್ತೇನೆ.......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೆಬ್ಬಾರರು ಹೇಳಿಕೊಳ್ಳುವುದೇ ಇಲ್ಲ.......

     ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ.....  ಕೊಂಚ ತಿಳಿದವರೂ ಇಂದು ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್‌ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್‌ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್‌ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು.  ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್‌ಬುಕ್‌ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ  ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...

ಮತ್ತೆ ಮತ್ತೆ ನೆನಪಾಗುವ ಅತ್ತಿಗೆಯ ಆ ದೋಸೆ......

  ನನ್ನ ಅತ್ತಿಗೆ ವಿದ್ಯಾ ಯಾವಾಗಲೂ ಚುರುಕು. ಹಳ್ಳಿಮನೆಯಲ್ಲಿ ಉಳಿದು ಮನೆ-ಮಕ್ಕಳು, ಆಳು-ಕಾಳು, ಅಡುಗೆ, ಕೊಟ್ಟಿಗೆ, ತೋಟ, ದೇವರಕಾರ್ಯ....... ಹೀಗೆ ಕೈತುಂಬಾ ಕೆಲಸವಿದ್ದರೂ ಎಲ್ಲವನ್ನೂ ನಿಭಾಯಿಸಿ ಸಭೆ-ಸಮಾರಂಭ, ಜಾತ್ರೆ, ಬಂಧು-ಬಾoಧವರ ಮನೆಯ ಕಾರ್ಯ, ಮಕ್ಕಳ ಜೊತೆ ಆಟ-ಒಡನಾಟ ಎಲ್ಲದರಲ್ಲೂ ಸಮಯಕ್ಕೆ ಭಾಗವಹಿಸಿ ಸಂಭ್ರಮಪಡುತ್ತಾಳೆ. ಹುಟ್ಟಿನಿಂದ ಪಟ್ಟಣದಲ್ಲಿ ಬೆಳೆದರೂ ಹಳ್ಳಿ ಜನ, ಜೀವನ ಇಷ್ಟಪಡುವ ಅತ್ತಿಗೆ ಬಾಲ್ಯದಲ್ಲೇ ರಾಮಾಯಣ, ಮಹಾಭಾರತವನ್ನು ಓದಿ, ಅರಿತು ವಿವರಿಸುವ; ಹಿಂದಿ, ಕೊಂಕಣಿ ಭಾಷೆಗಳನ್ನೂ ಚೆನ್ನಾಗಿ ಮಾತನಾಡಬಲ್ಲ ನನ್ನ ಅತ್ತಿಗೆ; ಹಳ್ಳಿಮನೆಯನ್ನು, ಹಳ್ಳಿಯಲ್ಲಿರುವ ಗಂಡುಮಕ್ಕಳನ್ನು ತಿರಸ್ಕರಿಸುವ ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ, ಪಾಲಕರಿಗೂ ಮಾದರಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅಮ್ಮನ ಸೊಸೆಯಾಗಿ, ಅಣ್ಣನ ಮಡದಿಯಾಗಿ ಅವರ ಕಷ್ಟ-ಸುಖ ಅರಿತು ಮಕ್ಕಳ ಜೊತೆ ತುಂಬು ಜೀವನ ನಡೆಸುತ್ತಿರುವ ಅತ್ತಿಗೆ ನನಗೆ ಎಂದಿಗೂ ಅಚ್ಚುಮೆಚ್ಚು. ಆ ದಿನ ಅಮ್ಮನ ಮನೆಗೆ ಹೋದಾಗ ನಾವು ಮಾತನಾಡುತ್ತ ರಾತ್ರಿ ಮಲಗುವಾಗ ತಡವಾಗಿತ್ತು. ಆದರೂ ಬೆಳಿಗ್ಗೆ ಬೇಗ ಎದ್ದು ಆಕಳ ಹಾಲು ಕರೆದು ಪುಟ್ಟ ಕರುವಿಗೆ ಹಾಲುಕುಡಿಸಿ, ಬಿಸಿಲೇರುವ ಮುಂಚೆ ಅವನ್ನು ಮೇಯಲು ಬಿಟ್ಟು; ಕೊಟ್ಟಿಗೆ ಕೆಲಸ ಮುಗಿಸಿ ಮನೆಗೆ ಬಂದು ಶಾಲೆಗೆ ಹೋಗುವ ಮಕ್ಕಳನ್ನು ತಯಾರಿ ಮಾಡುವ ಕೆಲಸ. ಅಂದು ಗಡಿಬಿಡಿಯಲ್ಲಿ ಅತ್ತಿಗೆ ಉಳಿದ ದೋಸೆ ಹಿಟ್ಟಿಗೆ ಹಿತ್ತಲಲ್ಲಿ ಬೆಳೆದ...

ತಪ್ಪು ಕಂಡರೆ ತಿದ್ದಿ...... ಒಪ್ಪು ಅನಿಸಿದರೆ ಹರಸಿ......

ಆತ್ಮೀಯರೇ,  ನಮಸ್ತೆ.  ನಾನು ಬಹುದಿನಗಳಿಂದ ನನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಬೇಕು ಅಂದುಕೊಂಡಿದ್ದೆ. ಕೆಲಸದ ಒತ್ತಡ, ಸಮಯದ ಅಭಾವ, ಅನಾರೋಗ್ಯ, ಆಲಸ್ಯದಿಂದ ದಿನ ದೂಡುತ್ತಲೇ ಇದ್ದೆ. ಆದರೆ ಇಂದು ಮತ್ತೆ ಪ್ರಾರಂಭ ಮಾಡಬೇಕೆಂಬ ನಿರ್ಧಾರ ಮಾಡಿ ಬೆಳಗಿನ ತಿಂಡಿ ಮಾಡುತ್ತ ನಾನು 3-4 ತಿಂಗಳುಗಳಿಂದ ನೋಡುತ್ತಿರುವ Indiamoney.com  ತೆಗೆದೆ. ಅರೆ! ಹೊಸ ಕೋರ್ಸ್. ಬಹಳ ಖುಷಿಯಾಯ್ತು. ಅಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸುವ ಕುರಿತು ತುಂಬಾ ಸರಳವಾಗಿ, ಸರಾಗವಾಗಿ, ಸುಂದರವಾಗಿ ವಿವರಣೆ ನೀಡಿದ್ದರು. ಸಂಭ್ರಮದಿಂದ ನಾನು ಅಂದೇ ಯುಟ್ಯೂಬ್ ಚಾನೆಲ್ ಶುರು ಮಾಡುವ ಹುಮ್ಮಸ್ಸಿನಲ್ಲಿದ್ದೆ. ಆದರೆ ಆಗಾಗ ಬಿಡುವು ಮಾಡಿಕೊಂಡು ಕೆಲಸ ಮುಗಿಸಿ ಅವರ ಎಲ್ಲ ವೀಡಿಯೋ ಮುಗಿಸುವುದರೊಳಗೆ ಸಂಜೇ ಆಗಿತ್ತು. ನನಗೂ ಕೆಲಸ ಮಾಡಿ ಸುಸ್ತು.......  ಮತ್ತೆ ಮುಂದೂಡಿದೆ.  2-3 ದಿನಗಳೇ ಕಳೆಯಿತು.. ಯೂಟ್ಯೂಬ್ ಗೆ ಸರಿಯಾಗಿ ವೀಡಿಯೋ ಮಾಡಲು ಕ್ಯಾಮೆರಾ ಎದುರು ತುಂಬಾ ಪ್ರಯೋಗ ಮಾಡಿ ಕಲಿಯಬೇಕು. ತುಂಬಾ ಸಮಯ ಬೇಕು ಎಂದು ಯೋಚಿಸಿ ಸದ್ಯ ಬ್ಲಾಗ್ ಮಾಡುವ ನಿರ್ಧಾರಕ್ಕೆ ಬಂದು ಇದೀಗ Rekha Hebbar's ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ.......... ನಾನು ಗೃಹಿಣಿ. ಮದುವೆಯಾಾಗಿ  26 ವರ್ಷ ಕಳೆಯಿತು. ಹಿಂದೆ ತವರು ಮನೆಯಲ್ಲಿ ಕಳೆದ ದಿನಗಳಲ್ಲಿ ಕಿವಿಗೆ ರೇಡಿಯೋ ಹಿಡಿದು ಅದರಲ್ಲಿ ...

'ಕಸುವಿನ ಬಳ್ಳಿ'ಗೆ ಕೈಮುಗಿದೆ....

ಅಂದು ತುಂಬಾ ಸೊಂಟ ನೋವು. ಕೂತಲ್ಲಿಂದ ಎದ್ದರೆ ನೋವು. ಎಲುಬಿಗೇನಾಗಿದೆಯೇನೋ ಅಂತ ಹೆದರಿದ್ದೆ. ಮೈಕೈ ಕೂಡಾ ಅಲ್ಲಲ್ಲಿ ನೋವು.  ಆಯಿಯ ಫೋನ್ ಬಂದಿತ್ತು. ಸೊಂಟನೋವು ಅಂದೆ. ‘ಕಸುವಿನ ಬಳ್ಳಿ ಕುಡಿ’ ಅಂದಳು. ‘ಅಯ್ಯೋ ಬೇಸರ’ ಅಂದೆ. ‘ಆರಾಮ ಆಗ ಅಂದ್ರೆ ಕುಡ್ಯ’ ಅಂದಳು. ಹಿತ್ತಲಿಂದ ಅದನ್ನು ತಂದು ಸೊಂಯ್ಸಿ ತೊಳೆದು ಜಜ್ಜಿ ಅಥವಾ ಕತ್ತರಿಸಿ ರುಬ್ಬಿ........ ಇದೆಲ್ಲಾ ರಗಳೆ ಕೆಲ್ಸ ನನಗಾಗಿ ಮಾಡಕೊಳ್ಳಲಿಕ್ಕೆ ಬೇಜಾರು ಅನ್ನಿಸ್ತು. ಆದರೂ ಆಯಿಗೆ ಬೇಜಾರಾಗಬಾರದೆಂದು ಕಸುವಿನಬಳ್ಳಿ ತಂದು ಕತ್ತರಿಸಿ ಸ್ವಲ್ಪ ಜೀರಿಗೆ ಜೊತೆ ಮಿಕ್ಸರ್‌ಗೆ ಹಾಕಿ ತಿರುಗಿಸಿ ನೀರು ಹಾಕಿ ಸೋಸಿ ಕುಡಿದೆ. ಅದಕ್ಕೆ ಮತ್ತೆ ನೀರು ಹಾಕಿಟ್ಟು ಚೆನ್ನಾಗಿ ಕಿವುಚಿ ಮತ್ತೆ ೨-೩ ಬಾರಿ ಕುಡಿದೆ. ಕೆಳಗೆ ಕೂರಲು, ಸ್ವಲ್ಪವೂ ಬಗ್ಗಲು ಆಗದೆ ಭಯಗೊಂಡಿದ್ದೆ.  ಮರುದಿನ ಬೆಳಿಗ್ಗೆ ಎದ್ದಾಗ ೧೦% ನಷ್ಟು ಕಡಿಮೆಯಾಗಿತ್ತು. ಪೂರ್ತಿ ಕಡಿಮೆ ಆಗುವ ಹಾಗೆ ತೋರಲಿಲ್ಲ. ಮತ್ತೆ ಆಯಿ ಮಧ್ಯಾಹ್ನ ಫೋನ್ ಮಾಡಿ ವಿಚಾರಿಸಿದಳು. ‘ಹೇಂಗಿದ್ಯೆ? ಕಸುವಿನ ಬಳ್ಳಿ ಮಾಡ್ಕಂಡ್ಯಾ?’ ಎಂದು ಕೇಳಿದಳು. ‘ನಿನ್ನೆ ಕುಡಿದಿದ್ದೆ. ಇವತ್ತು ಮತ್ತೆ ಮಾಡುದಾ?’ ಕೇಳಿದೆ. ‘ಕಡಿಮೆ ಆಗಿಲ್ಲ ಅಂದ್ರೆ ಇವತ್ತೊಂದಿನ ಕುಡಿ’ ಅಂದಳು. ಮತ್ತೆ ಮಾಡಿ ಕುಡಿದೆ. ಡಾಕ್ಟರ್ ಹತ್ರ ಹೋಗೋಣ ಅಂದ್ರೂ ದಬ್ಬೆ ಕಟ್ಟಿಕೊಂಡಂತೆ ಸೊಂಟ ದಕ್ಕಾಗಿತ್ತು.  ಸಂಜೆ ಆಗುವಾಗ ನನಗೇ ಆಶ್ಚರ್ಯ. ಅರೆ ಸೊಂಟನೋವು ಮರೆತೇ ಹ...

ನಮ್ಮ ಮನೆಯಲ್ಲಿ ಹಂಡಾಹುಂಡಿ ಜಗಳ!

ಮೊನ್ನೆ ನಮ್ಮ ಮನೆಯಲ್ಲಿ ಅಪ್ಪ - ಮಗನಿಗೆ ಹಂಡಾಹುಂಡಿ ಜಗಳ. ಮುನಿಸು. ಸಿಟ್ಟು. ಕೋಪ....  ಯಾಕೆ ಗೊತ್ತಾ? ವಿಷಯ ಕೇಳಿದರೆ ನಿಮಗೆ ದಂಗಾಗಬಹುದು. ಯಾಕೆ ಹೇಳಿ?  ಯಾಕೆಂದ್ರೆ ಕಾರಣ ಇಷ್ಟೇ 'ಗಿಡಗಳಿಗೆ ನಾನು ನೀರು ಹಾಕ್ತೇನೆ.... ಇಲ್ಲ ನಾನು.... ಇಲ್ಲ ನಾನು..... ಇಲ್ಲಾ ನಾನೇ.....' ಹೀಗೆ ಕಂಡಾಪಟ್ಟೆ ಜಗಳ. ನೀನು ನೀರು ಹಾಕು ಅಂತಲ್ಲ ಅಥವಾ ನೀನು ಕೆಲಸ ಮಾಡು ಅಂತಲ್ಲ, 'ನಾನು ಮಾಡ್ತೀನಿ, ನಾನು ಮಾಡ್ತೀನಿ' ಅಂತ ಜಗಳವೇ ಜಗಳ!!   ಹೌದು, ಮಗನ ಹಠಕ್ಕೆ ಮಣಿದು ಅವನದೇ ಖರ್ಚಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 300ಕ್ಕೂ ಹೆಚ್ಚು ಗಿಡ ಅರಣ್ಯ ಇಲಾಖೆ ನರ್ಸರಿಯಿಂದ ತಂದು ಗುಡ್ಡದ ಜಾಗದಲ್ಲಿ ನೆಟ್ಟಿದ್ದೆವು. ಅದರಲ್ಲಿ 150 ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಕಾಡು ಜಾತಿಯ ಗಿಡವಾದರೂ ಅದು ಪುಟ್ಟದಾಗಿರುವುದರಿಂದ ಈ ಬಾರಿ ಅದಕ್ಕೆ ನೀರು ಬೇಕು. ಹಾಗಾಗಿ ಅಲ್ಲೊಂದು ನೀರಿನ ಟ್ಯಾಂಕ್ ತಂದಿಟ್ಟು; ಅದರಲ್ಲಿ ಹಣ ಕೊಟ್ಟು ನೀರು ಸಪ್ಲೈ ಮಾಡುವವರಿಂದ ನೀರು ತುಂಬಿಸಿ ಬಕೆಟ್ ನಲ್ಲಿ ಹಿಡಿದು ಗಿಡಗಳಿಗೆ ಹಾಕುವ ಕೆಲಸ. ಇದು ಇಬ್ಬರಿಗೆ ಸುಮಾರು 2 ತಾಸಿನ ಕೆಲಸ.  ಮಗನಿಗೆ ವರ್ಕ್ ಫ್ರಮ್ ಹೋಮ್. ಹಾಗಾಗಿ ತನಗೆ ಕೆಲಸ ಇದ್ದಾಗ ಅಪ್ಪ ಒಬ್ಬರೇ ಹೋಗುತ್ತಾರೆ ಎಂಬ ಚಿಂತೆ ಮಗನಿಗೆ. ಮಗನಿಗೆ ಕಷ್ಟ ಆಗಬಾರದು ಎಂದು ಅಪ್ಪನಿಗೆ. ಹೀಗೆ ಇಬ್ಬರ ಕಾಳಜಿಯ ಜಗಳ ! ನನಗೆ ಮನದಲ್ಲೇ ನಗು. ಹೆಮ್ಮೆ.....  ಕೊನೆಗೂ ಮಗ ಅಪ್ಪನ ಕಣ್ತ...

ಮರೆಯದಿರೋಣ ಈ ‘ಮೃಗಶಿರ ಮಳೆ’ಯ......

     ನನ್ನತ್ತೆ ಮಾತುಮಾತಿಗೆ ಗಾದೆ ಹೇಳುತ್ತಿದ್ದುದು ಆಗಾಗ ನೆನಪಿಗೆ ಬರುತ್ತಿರುತ್ತದೆ. ಮಳೆಗಾಲದ ಆರಂಭದಲ್ಲಿ ಆಗಾಗ ಬರುವ  ಬಿಸಿಲಿಗೆ ಒದ್ದೆಬಟ್ಟೆ, ಇನ್ನೂ ಒಣಗದ ಮಾವಿಹಣ್ಣಿನ ಹಪ್ಪಳ ಅಥವಾ ಇನ್ನೇನೋ ಸಾಮಾನುಗಳನ್ನು ಅಂಗಳದಲ್ಲಿ ಹಾಕಲು ಹೋಗಿ ತಿರುಗಿ ಒಳಗೆ ಬರುವಷ್ಟರಲ್ಲಿ ಮಳೆ ಬರುತ್ತಿತ್ತು. ಆಗೆಲ್ಲ ಅತ್ತೆ ಮಾವನ ಮುಂದೆ ಹೇಳಿ ಮಾವನನ್ನು ಚುಡಾಯಿಸುತ್ತಿದ್ದ ಮಳೆಗಾಲದ ಮುಖ್ಯ ಗಾದೆ ‘ಮಳೆಗಾಲದ ಬಿಸಿಲು ನಂಬುಲಿಲ್ಲೆ, ಮನೆಲಿ ಗಂಡನ ನಗೆ ನಂಬುಲಿಲ್ಲೆ’ ! ಆಗ ಆತ, ‘ಅದು ಹಾಗಲ್ಲ- ಮಳೆಗಾಲದ ಬಿಸಿಲು ನಂಬುಲಿಲ್ಲೆ, ಮನೆ ಹೆಂಡ್ತಿ ನಗೆ ನಂಬುಲಿಲ್ಲೆ’ ಅಂತ ತಿರುಗಿಸಿ ಹೇಳುತ್ತ ತಮಾಷೆ ಮಾಡುತ್ತಿದ್ದ !! ಆದರೆ ಯಾವುದು ಸತ್ಯವೋ ನನಗಂತೂ ಗೊತ್ತಿಲ್ಲ. ‘ಮೃಗಶಿರೆ ಮಳೆಯಲ್ಲಿ ಮೃಗದ ಕೊಂಬೂ ಚಿಗುರುತ್ತದೆ’ ಎಂದು ಪ್ರತಿವರ್ಷ ಈ ಸಮಯದಲ್ಲಿ ಅತ್ತೆ ಹೇಳುವ ಮಾತಿದು. ನಿಜ. ಅತ್ತೆ - ಮಾವ ಮನೆಯಂಗಳದಲ್ಲಿ ಬೆಂಡೆ ಬೀಜ, ಪಡವಲ ಬೀಜ, ಹೀರೇಬೀಜ ಬಿತ್ತಿ ಅದಕ್ಕೆ ಮಣ್ಣು, ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದ ಕಾಲವದು. ಬೇಕಾಬಿಟ್ಟಿ ಬೆಳೆದ ಗಿಡದ ಟೊಂಗೆಗಳನ್ನೆಲ್ಲ ಕಡಿದು, ಬೇಕಾದಲ್ಲಿ ನೆಟ್ಟು - ಬೇಕಾದವರಿಗೆ ಕೊಟ್ಟು, ಬೇಕಾಗಿದ್ದು ಅವರಿಂದ ತರುವ ಕಾಲ......  ೭೮ ವರ್ಷ ದಾಟಿದ ಆಚೆಮನೆ ಅಪ್ಪಚ್ಚಿ - ಚಿಕ್ಕಿ ಪ್ರತಿವರ್ಷ ಅಂಗಳದಲ್ಲಿ ಬೆಂಡೆ, ಹೀರೆ, ಪಡುವಲ, ಹಾಗಲ.... ಅಂತ ಬೀಜ ಬಿತ್ತಿ; ಬರುವ ಗಿಡದ ಆರೈಕೆ ಮಾಡು...

ಮೈಂಡ್ ಫ್ರೆಶ್ ಮಾಡಿದ ನನ್ನ ತವರು... ಹರಿಣಿ.... ಚಿಪ್ಸು... ಇತ್ಯಾದಿ

ಆ ದಿನ ಆಯಿಯ ಮನೆಗೆ ಹೋಗಿದ್ದೆ. ಅತ್ತಿಗೆ ಹಲಸಿನ ಕಾಯಿ ಚಿಪ್ಸ್ ಮಾಡಲು ತಯಾರಿ ನಡೆಸಿದ್ದಳು.  ಅಲ್ಲಿ ತೋಟ, ಗದ್ದೆಯ ಕೆಲಸಕ್ಕೆ ಬರುವ ಹಾಣಿ, ತುಳ್ಸು, ವೆಂಕಟೇಶ ಹೀಗೇ ಯಾರಾದರೂ ಮರ ಹತ್ತಿ ಹಲಸಿನ ಕಾಯಿ ಕೊಯ್ದು ಕೊಡುವವರು. ಕೆಲವೊಮ್ಮೆ ಅಣ್ಣನೇ ಏಣಿ ಹತ್ತಿ ಕೊಕ್ಕೆಯಿಂದ ಕೊಯ್ದು ಬೀಳಿಸುತ್ತಾನೆ.      ಆ ದಿನ ಅಲ್ಲೇ ಹತ್ತಿರ ಇರುವ ಚಿಕ್ಕಪ್ಪನ ಮನೆಯಿಂದ ತಂದ ಹಲಸಿನ ಕಾಯಿ ಅದು. ಅದನ್ನು ಅಲ್ಲಿಗೆ ಪ್ರತಿದಿನ ಬರುವ ದುರ್ಗಿ ಕೊಡಲಿಯಿಂದ ಭಾಗ ಮಾಡಿ ಕೊಟ್ಟಿದ್ದಳು. ಅದನ್ನು ಮೆಟ್ಗತ್ತಿಯಿಂದ ಅತ್ತಿಗೆ ಚಿಕ್ಕ ಪೀಸ್ ಮಾಡಿ ಅದರ ಸಾರೆ, ಗುಂಜು ತೆಗೆದು ಕತ್ತರಿಸಿ ಹಾಕುತ್ತಿದ್ದಳು. ಆಯಿ ಅದರ ಸೊಳೆ ಬಿಡಿಸಿ ಮುಟ್ಟಿಗೆ ಹಾಕುತ್ತಿದ್ದಳು. ನಂತರ ಅದನ್ನು ತಂದು ಹೊಳ್ಳಿಯ ಮೇಲೆ ಇಟ್ಟು ನಾನು, ಅಣ್ಣನ ಮಗಳು ಹರಿಣಿ, ಆಯಿ ಸೇರಿ ಬೇಳೆ ತೆಗೆದು ಬಿಡಿಸಿ ಪಾತ್ರೆಗೆ ಹಾಕಿದೆವು. ನಂತರ ಅತ್ತಿಗೆ ಎಣ್ಣೆ ಬಂಡಿ ಒಲೆಯ ಮೇಲಿಟ್ಟು ಒಲೆಯ  ಮುಂದೆ ಅಲ್ಲೇ ಮೆಟ್ಗತ್ತಿ ಹಾಕಿ ಕುಳಿತುಕೊಂಡು ಸೊಳೆ ಶಿಗಿದು ಬಟ್ಟಲಲ್ಲಿ ಹಾಕುತ್ತಾ ಕಾದ ಎಣ್ಣೆಯಲ್ಲಿ 2-3 ತಾಸು ಕರಿದಳು. ನಾನು, ಆಯಿ ಕೂಡಾ ಸ್ವಲ್ಪ ಶಿಗಿದು ಕೊಟ್ಟೆವು. ಶಿಗಿದ ಸೊಳೆಯನ್ನು ಎಣ್ಣೆಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪುನೀರು ಹಾಕಿ ಗರಿಗರಿಯಾದ ಮೇಲೆ ತೆಗೆದ ನಂತರ ಅದಕ್ಕೆ ಖಾರ ಪುಡಿ ಉದುರಿಸಿ ಮತ್ತೆ ತಣಿಸಿ ಡಬ್ಬಿಯಲ್ಲಿ ತುಂಬುವವರೆಗೆ......  ಅಬ್ಬಬ್ಬಾ ಚಿಪ್ಸೇ.....