https://youtube.com/shorts/lq8ivUm_ae0?si=GRfmfTjQMLu9Axqz
4,5 ವರ್ಷಗಳ ಹಿಂದೆ ನಾನು ಬೆಂಗಳೂರಿಗೆ ರೈಲಿನಲ್ಲಿ ಹೋಗುವಾಗ ಈ ಗಿಡ ಮೊದಲ ಬಾರಿ ಕಂಡಿದ್ದೆ. ಭತ್ತದ ತೆನೆಯಂತೆ ದೊಡ್ಡ ದೊಡ್ಡ ತೆನೆ ಹೊತ್ತ ಈ ಹಸಿರು ಹಿಂಡು ನನಗೆ ಕುತೂಹಲ ಮೂಡಿಸಿತ್ತು. ಪುನಹ ಹಿಂತಿರುಗು ಬರುವಾಗ ಕೂಡ ಹುಡುಕಿ ನೋಡಿದ್ದೆ. ಅದೇ ಗಿಡ ನನ್ನನ್ನು ಕಾಡುತ್ತಿತ್ತು.....
ಸ್ವಲ್ಪ ದಿನಗಳ ನಂತರ ಅಮ್ಮನ ಮನೆಗೆ ಹೋದಾಗ ಅಲ್ಲಿ ಪಕ್ಕದ ಮನೆಯ ತಂಗಿ ಶೋಭಾ ಬಂದಿದ್ದಳು. ಅವಳೊಂದಿಗೆ ಮಾತನಾಡುತ್ತಾ ಈ ಗಿಡದ ವಿಷಯ ಹೇಳಿದೆ. ಅವಳು ಇದು ನಮ್ಮನೆಯಲ್ಲಿ ತುಂಬಾ ಇದೆ. ಕಡಿದಷ್ಟೂ ಚಿಗುರುತ್ತಲೆ, ಹುಟ್ಟುತ್ತಲೇ ಇರುತ್ತದೆ ಅಂದಳು. ಇದರ ಹೆಸರೇನು ಕೇಳಿದೆ. 'ಹಿಡಿಕುಂಟೆ ಗಿಡ ' ಎಂದಳು. ಇದು ಒಂದು ಗಿಡ ನೆಟ್ಟರೆ ಆಗಬಹುದಾ ಎಂದು ಕೇಳಿದೆ. ಆಗುತ್ತದೆ ನಾನು ಮುಂದಿನ ಬಾರಿ ಬರುವಾಗ ನಿನಗೆ ತಂದು ಕೊಡುವೆ ಎಂದಳು. ನಾನು ಖುಷಿಯಾಗಿ ಕುತೂಹಲದಿಂದ ಕಾಯುತ್ತಲೆ ಇದ್ದೆ.
ಇನ್ನೊಮ್ಮೆ ನಾನು ತವರಿಗೆ ಹೋದಾಗ ಅವಳು ಮರೆಯದೆ ಗಿಡ ತಂದು ಕೊಟ್ಟಿದ್ದಳು. ನಾನು ಸಂಭ್ರಮದಿಂದ ಮನೆಗೆ ತಂದು ಒಳ್ಳೆಯ ಬಿಸಿಲು ಬರುವ ಜಾಗದಲ್ಲಿ ಕಾಳಜಿಯಿಂದ ಅದನ್ನು ನೆಟ್ಟೆ. ಎರಡು ಮೂರು ವರ್ಷಗಳಲ್ಲಿ ಅದಕ್ಕೆ ತೆನೆ ಬರಲು ಪ್ರಾರಂಭವಾಯಿತು. ಗಿಡ ಹಿಂಡು ಹಿಂಡಾಗಿ ಬೆಳೆದಿತ್ತು. ಮೊದಲ ಬಾರಿ ಬಂದ 15, 20 ತೆನೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಅದನ್ನು ಚೆನ್ನಾಗಿ ನೆಲದ ಮೇಲೆ ಬಡಿದು ಅದರ ಕಡ್ಡಿಗೆ ಅಂಟಿಕೊಂಡಂತಹ ಸಣ್ಣ ಪುಡಿಯಂತಹ ಹೂವನ್ನು ಉದುರಿಸಿದೆ. ಪ್ಲಾಸ್ಟಿಕ್ ಕಸಬರಿಗೆ ಕೋಲಿಗೆ ಅದನ್ನು ಜೋಡಿಸಿ ಗುಡಿಸಿ ಬಂದವರಿಗೆಲ್ಲ ತೋರಿಸಿದೆ. ಪ್ಲಾಸ್ಟಿಕ್ ಬದಲಿಗೆ ಸಿಕ್ಕ ಈ ನಿರುಪದ್ರವಿ ಗಿಡಕ್ಕೆ ಹಾಗೆ ನನಗೆ ತಂದುಕೊಟ್ಟ ತಂಗಿ ಶೋಭಾಳಿಗೆ ಸದಾ ಕೃತಜ್ಞನಾಗಿದ್ದೇನೆ....
ನನ್ನ ಅತ್ತಿಗೆಯ ಸೊಸೆ ಕೀರ್ತಿ ಬಂದಾಗ ತೋರಿಸಿ ಈ ಪರಿಸರಸ್ನೇಹಿ ಗಿಡದ ಬಗ್ಗೆ ಹೆಮ್ಮೆಯಿಂದ ಹೇಳಿದೆ. ಅವಳ ಗೆಳತಿಯ ಮನೆಯಲ್ಲಿ ಬೆಳೆಯುತ್ತಾರೆ. ಅವಳು ತನಗೂ ಕೊಟ್ಟಿದ್ದಳು ಎಂದು ವಾಪಸ್ ಬೆಂಗಳೂರಿಗೆ ಹೋದವಳು ಅಚ್ಚುಕಟ್ಟಾಗಿ ಕಟ್ಟಿದ ಕಸಬರಿಗೆಯ ಪೋಟೋ ಕಳಿಸಿದ್ದಳು! ನನಗೆ ಅದನ್ನು ನೋಡಿ ಹಾಗೇ ನಾನು ನೆಟ್ಟ ಗಿಡದ ಸಾರ್ಥಕತೆ ನೋಡಿ ಇನ್ನಷ್ಟು ಖುಷಿಯಾಯ್ತು.
ಇಂತಹ ಪರಿಸರಸ್ನೇಹಿ ಗಿಡಗಳನ್ನು ಎಲ್ಲರೂ ನೆಟ್ಟು ಆರಾಮಾಗಿ ಬೆಳೆಸಬಹುದು. ತುಂಬಾ ಸುಲಭ.
ಹಾಗೇ ದನಕರುಗಳಿಗೆ ಮೇವಾಗಿ ಕೂಡ ಇದನ್ನು ಬೆಳೆಸುತ್ತಾರೆಂದು ನೋಡಿದೆ. ಹಸಿರು ತುಂಬಿಕೊಂಡು ಒತ್ತತ್ತಾಗಿ ಬೆಳೆಯುವ, ಹಗುರವಾದ ಕಸಬರಿಗೆ ನೀಡುವ ಈ ಗಿಡ ನನಗಂತೂ ತುಂಬಾ ಇಷ್ಟವಾಯಿತು. ಇನ್ನೊಂದಿಷ್ಟು ಕಡೆಗೆಲ್ಲ ಅದರ ಮರಿಯನ್ನು ನೆಟ್ಟೆ.
ಈ ಬಾರಿ 3 ಕಸಬರಿಗೆ ಮಾಡುವಷ್ಟು ತೆನೆ ಸಿಕ್ಕಿದೆ!
ನೆಟ್ಟ ಗಿಡ ಫಲ ಕೊಟ್ಟಾಗ ಉಪಯೋಗವಾದಾಗ ಅದಕ್ಕಿಂತ ಹೆಚ್ಚು ಖುಷಿ ಇನ್ನೇನಿದೆ ಅಲ್ವಾ?
ಗಿಡ ಕಂಡೆ
ಕುತೂಹಲಪಟ್ಟೆ
ಹುಡುಕಿ ತಂದು ನೆಟ್ಟೆ
ಫಲ ಕೊಟ್ಟಾಗ ಖುಷಿಪಟ್ಟೆ....



ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ