ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ.....
ಕೊಂಚ ತಿಳಿದವರೂ ಇಂದು ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು.
ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್ಬುಕ್ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ.....
ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವುದು, ಮನೆಗೆ ಬೇಕಾದ ಸಾಮಾನು-ತರಕಾರಿ ತರುವುದು, ಹೀಗೇ ಏನೇ ಕೆಲಸ ಕಂಡರೂ ಮಾಡುವುದು..... ಸ್ನಾನ ಮಾಡಿ ಆಫೀಸ್ ಕಡೆ ಅರ್ಜೆಂಟ್ ಇದ್ದರೆ ಹೋಗುವುದು, ಅಲ್ಲಿ ಸ್ವಚ್ಛ ಮಾಡುವುದು, ಪೇಪರ್ ಓದುವುದು, ಪರಿಚಿತರ ಜೊತೆ ಮಾತನಾಡುವುದು, ತಪ್ಪು ಕಂಡಲ್ಲಿ ಖಂಡಿಸುವುದು, ಅಸಹಾಯಕರಿಗೆ ಸಹಾಯ ಮಾಡುವುದು.........
ಹೀಗೇ ಮತ್ತೆ ಮನೆಗೆ ಬಂದು ಪುಸ್ತಕ ಮನೆ ಹೊಕ್ಕರೆ ಅಲ್ಲಿ ಎಲ್ಲ ಪುಸ್ತಕ, ಪತ್ರಿಕೆ, ಬರೆಯುವ ಹಾಳೆ ಎಲ್ಲವನ್ನೂ ಹರವಿಕೊಂಡು ಓದುತ್ತಾ, ಬರೆಯತ್ತಾ, ಪತ್ರಿಕೆ ಕೆಲಸ ಮಾಡುತ್ತ, ಅದೇ ಪುಟ್ಟ ಮೊಬೈಲ್ನಲ್ಲಿ ಮಾತನಾಡುತ್ತ, ಮೇಸೇಜ್ ಮಾಡುತ್ತ, ಸಿನೆಮಾ ನೋಡುತ್ತಲೇ ಅದರಲ್ಲಿ ಫೈಟಿಂಗ್ ಇಲ್ಲದಿದ್ದರೆ..... ತನ್ನ ಪ್ರೀತಿಯ ನಿದ್ದೆಗೆ ಜಾರಿರುತ್ತಾರೆ. 

ಅವರ ವಾಟ್ಸಾಪ್, ಫೇಸ್ಬುಕ್, ಇ-ಮೇಲ್...... ಎಲ್ಲಾ ನನಗೇ ಮೀಸಲು. ಆಗಾಗ ಅವರಿಗೆ ಅದನ್ನೆಲ್ಲ ಓದಿಹೇಳಿ ಅವರಿಂದ ಉತ್ತರ ಪಡೆದು ಹಾಕುವ ಕೆಲಸ ನನ್ನದು. ಕಾರಣ ಅವರಿಗೆ ಅದರಲ್ಲಿ ಆಸಕ್ತಿ ಕಡಿಮೆ. ಎಂಡ್ರೊಯ್ಡಮೊಬೈಲ್ ಬೇಡವೇಬೇಡ ಎನ್ನುತ್ತಾರೆ. ಅವರ ಪುಟ್ಟ ಕೀಪ್ಯಾಡ್ ಫೋನ್ನಲ್ಲೇ ಮೇಸೇಜ್, ಮಾತು, ಸಿನೆಮಾ..... ಹೀಗೇ ಅದೇ ಅವರಿಗೆ ಇಷ್ಟ. ಅದರಲ್ಲೇ ಫೇಸ್ಬುಕ್ ಕೂಡಾ ತೆಗೆದು ಒಮ್ಮೊಮ್ಮೆ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಅಕ್ಷರ ಅಳಿಸಿ ಹೋಗುತ್ತಿರುವ ಕೀಪ್ಯಾಡ್ನಲ್ಲಿ ತಪ್ಪಾಗಿ ಮೂಡುವ ಅಕ್ಷರಗಳೇ ಹೆಚ್ಚು! ಅದಕ್ಕೆ ಮೊನ್ನೆ ಕಲಬುರ್ಗಿಯ ದೀದಿಗೆ ಫೇಸ್ಬುಕ್ನಲ್ಲಿ ಕೊಟ್ಟ ಪ್ರತಿಕ್ರಿಯೆಯೇ ಸಾಕ್ಷಿ !! ನನಗೂ ನೋಡಿ ನೋಡಿ ಸಾಕಾಯ್ತು. ನಾನು ಎಲ್ಲವನ್ನೂ ಎಲ್ಲರಿಗೂ ಹೇಳುತ್ತೇನೆ. ಫೇಸ್ಬುಕ್ಗೆ ಹಾಕುತ್ತೇನೆ ಎಂದರೆ ‘ಖಂಡಿತಾ ಹೇಳು. ಎಲ್ಲವನ್ನೂ ಹಾಕು. ನನಗೇನೂ ಬೇಸರವಿಲ್ಲ. ನಿನಗೆ ಬೇಕಾದ ಹಾಗೆ ಮಾಡಿಕೊ. ನನಗೆ ಸುಮ್ಮನೆ ಬಿಡು. ಆ ಮೊಬೈಲ್, ಫೇಸ್ಬುಕ್, ವಾಟ್ಸಾಪ್ ಅಂತಾ ನನಗೆ ಕಾಟ ಕೊಡಬೇಡ’ ಎನ್ನುತ್ತಾರೆ! ಕಳೆದ ವರ್ಷ ಕೋವಿಡ್ ಬಂದು ಹೋಮ್ಕ್ವಾರಂಟೈನ್ನಲ್ಲಿ ಇದ್ದಾಗ ಕೂಡ ಅವರಿಗೆ ಅದೇ ಮೊಬೈಲ್, ಮಾತು, ಪುಸ್ತಕ, ನಡಿಗೆ, ಪ್ರಾಣಾಯಾಮ, ವ್ಯಾಯಾಮ....... ಇವೇ ಅವರ ಸಂಗಾತಿಗಳು.
ನಾನು ಮದುವೆಯಾಗಿ ಬಂದಾಗ ಅವರ ಹಾಗೂ ಅವರ ಅಣ್ಣ-ತಮ್ಮಂದಿರ ಪ್ರತಿಭೆಗೆ ಸಂದ ಬಹುಮಾನಗಳ ಸರ್ಟಿಫಿಕೇಟ್, ಕಪ್, ಶೀಲ್ಡ್, ಸನ್ಮಾನಪತ್ರ, ಸ್ಮರಣಿಕೆಗಳೆಲ್ಲ ಮೇಲಿನ ಅಟ್ಟದ ಮೇಲೆ ಚೀಲದಲ್ಲಿ ತುಂಬಿಕೊಂಡಿತ್ತು. ನನಗೆ ಅಕಸ್ಮಾತ್ ಸಿಕ್ಕಾಗ ಆಶ್ಚರ್ಯ. ಅವರಾರಿಗೂ ಅದು ಹೇಳಿಕೊಳ್ಳುವ ವಿಷಯವೇ ಅಲ್ಲ!
ನಾನು ಕಿರಿಕಿರಿ ಮಾಡಿ ಮಾಡಿ ಈಗ ೭-೮ ವರ್ಷಗಳ ಈಚೆಗೆ ಒಂದು ಶೋಕೇಸ್ ಮಾಡಿಸಿ ಸಾಧ್ಯವಾದಷ್ಟು ಹಿಡಿಸಿದ್ದೇನೆ! ಅದು ಇನ್ನೂ ಗಾಜನ್ನು ಕಾಣದೇ ಹಾಗೇ ಉಳಿದಿದೆ !!
ಹೆಬ್ಬಾರರ ಕಾಲೇಜು ದಿನಗಳ ಸರ್ಟಿಫಿಕೇಟ್ ನೋಡುತ್ತಿದ್ದರೆ ಎಲ್ಲವೂ ಪ್ರಥಮ, ಪ್ರಥಮ, ಪ್ರಥಮ...... ಸಿಕ್ಕಷ್ಟು ಸಂಗ್ರಹಿಸಿ ಕಾದಿಡುವ ಕೆಲಸ ಮಾಡುತ್ತಿದ್ದೇನೆ. ಆ ಕ್ಷಣದಲ್ಲಿ; ಹೊಗಳಿದರೆ ಉಬ್ಬುವ ತೆಗಳಿದರೆ ಸಿಟ್ಟಾಗುವ ಮಗುಮನದ ಹೆಬ್ಬಾರರು ಮುಂಗೋಪಿ. ಊಟ, ತಿಂಡಿ, ಔಷಧ..... ಹೀಗೆ ಅಗತ್ಯವಿರುವ ವಸ್ತುಗಳನ್ನು ಬಿಟ್ಟರೆ ಬೇರೆ ಖರ್ಚಿನ ವಿಷಯ ಹೇಳಿದರೆ ಸಿಟ್ಟು ಸಿಡಿಯುತ್ತದೆ. ಯಾಕೆಂದರೆ ಅವರ ಬಳಿ ಹೇಗೆಂದರೆ ಹಾಗೆ ಹಣ ಮಾಡಲು ಸಾಧ್ಯವಿಲ್ಲ ! ‘ಪುಟ್ಟ ಪತ್ರಿಕೆ. ಮರ್ಯಾದೆಯಿಂದ ಊಟ ಮಾಡಿಕೊಂಡು ಹೋದರೆ ಸಾಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಇಲ್ಲವಾದರೆ ಕಾಲಿದ್ದಷ್ಟೇ ಹಾಸಿಗೆ ಮಾಡಿಕೊಳ್ಳಬೇಕು. ಉತ್ಪಾದಕ ಕೆಲಸ ಮಾಡಬೇಕು’ ಎನ್ನುತ್ತಿರುತ್ತಾರೆ.

ಪರಿಸರ ದಿನವಾದ ಇಂದು ನಾನು ತುಂಬ ಹೆಮ್ಮೆಪಡುವ ಹೆಬ್ಬಾರರ ಕೆಲಸ ಅಂದರೆ ನಮ್ಮ ಮನೆಯಂಗಳದ ಹೊಂಗೆ ಮರ. ಹೊನ್ನಾವರದ ಬಳಿ ರಸ್ತೆಪಕ್ಕದಲ್ಲಿದ್ದು ಈಗ ನಡೆಯುತ್ತಿರುವ ಹೆದ್ದಾರಿ ಕೆಲಸಕ್ಕೆ ಬಲಿಯಾಗಲಿದ್ದ ಸುಮಾರು ೨-೩ ಆಳೆತ್ತರದ ೨ ಹೊಂಗೆಮರವನ್ನು ೪-೫ ಜನರನ್ನು ಕರೆದುಕೊಂಡು ಹೋಗಿ ಕೀಳಿಸಿ ತಂದು ಮನೆಯಂಗಳದಲ್ಲಿ ನೆಟ್ಟಿದ್ದರು. ಕಡಿದಷ್ಟೂ ಚಿಗುರುವ ಒಮ್ಮೇಲೆ ಎಲ್ಲ ಎಲೆಗಳನ್ನು ಉದುರಿಸಿಕೊಂಡು ಬೋಳಾಗಿ ಮತ್ತೆ ಒಮ್ಮೇಲೆ ಚಿಗುರುವುದು, ಇನ್ನೂ ಹಳೆಯ ಕಾಯಿ ಹಣ್ಣಾಗಿ ಉದುರುವ ಮೊದಲು ಹೂವು, ಕಾಯಿಗಳೊಂದಿಗೆ ಮತ್ತೆ ನಳನಳಿಸುವ ಹೊಂಗೆ ಮರವನ್ನು ನೋಡುವುದೇ ನಮಗೆ ಪ್ರತಿದಿನದ ಅಚ್ಚರಿ. ವಿಶೇಷವೆಂದರೆ ಅದರ ಎಲೆಗಳು ಉದುರುವುದು ವರ್ಷಕ್ಕೊಮ್ಮೆ ಮಾತ್ರ!
ಹೌದು. ಹೆಬ್ಬಾರರು ಹೇಳಿಕೊಳ್ಳುವುದು, ಹೇಳಿಕೊಡುವುದು ತುಂಬಾ ಇದೆ. ಅದು ಹಲವರಿಗೆ ಸ್ಫೂರ್ತಿಯಾಗಲಿದೆ. ಪಾಠವಾಗಲಿದೆ ಎಂಬುದು ಅವರೊಂದಿಗಿನ ಒಡನಾಟದ ನನ್ನ ಅನುಭವ.
ಈಗ ೨ ವರ್ಷಗಳ ಹಿಂದೆ; ಹಿರಿಯ ಪತ್ರಕರ್ತ ಜಿ.ಯು. ಭಟ್ ಅವರು ಹೇಳಿದ್ದಾರೆಂದು ಬಂದ ಕಾರವಾರ ಆಕಾಶವಾಣಿಕೇಂದ್ರದ ಫ್ಲೋರಿನ್ ರೋಶ್ ಅವರು ‘ನೀವು ಚೆನ್ನಾಗಿ ಕವಿತೆ ಬರೆಯುತ್ತೀರಂತೆ. ನಿಮ್ಮ ಕವನದ ಪುಸ್ತಕ ಕೊಡಿ. ಆಕಾಶವಾಣಿಯಲ್ಲಿ ‘ಕವಿ-ಕವಿಮನ’ ಕಾರ್ಯಕ್ರಮದಲ್ಲಿ ನಿಮ್ಮ ಸಂದರ್ಶನ ಮಾಡುತ್ತೇವೆ’ ಎಂದರು. ಅದಕ್ಕೆ ಇವರು ‘ನನ್ನದು ಒಂದೇ ಕವನಸಂಕಲನ. ಅದು ತುಂಬಾ ಹಳೆಯದು. ನಾನೇನೂ ತುಂಬಾ ಕವಿತೆ ಬರೆದಿಲ್ಲ. ನನ್ನದು ಪುಟ್ಟ ಪತ್ರಿಕೆ. ನಿಮ್ಮ ಸಂದರ್ಶನಕ್ಕೆ ನಾನು ಯೋಗ್ಯನಲ್ಲ.....’ ಎಂದೆಲ್ಲ ತುಂಬಾ ವಿರೋಧ ವ್ಯಕ್ತಪಡಿಸಿದರು. ನಾನು ಒಳಗಿನಿಂದ ಸನ್ನೆ ಮಾಡಿ ಮುದ್ರಣಕ್ಕೆ ಸಿದ್ಧವಾಗಿದ್ದ ‘ಕವಿಯಲ್ಲದವನ ಕವಿತೆಗಳು’ ಪುಸ್ತಕ ತೋರಿಸಿದೆ. ಅಂತೂ ಅಸಮಾಧಾನದಿಂದಲೇ ಅದನ್ನು ಅವರ ಕೈಗಿತ್ತರು. ೫-೧೦ ನಿಮಿಷಗಳಲ್ಲಿ ಪುಸ್ತಕ ತಿರುವಿ ಹಾಕಿದ ಪ್ಲೋರಿನ್ ಅವರು ಪಟ್ಟುಬಿಡದೇ ಪ್ರಶ್ನೆ ಕೇಳಲು ಶುರುಮಾಡಿದರು. ಮೊದಲು ಆಲಸ್ಯ ಮಾಡಿದ್ದ ಹೆಬ್ಬಾರರು, ನಂತರ ಅವರು ಪ್ರಶ್ನೆ ಕೇಳಿ ಮುಗಿಯುವ ಮೊದಲೇ ಬಿಡದೇ ಉತ್ತರಿಸತೊಡಗಿದ್ದರು...... ತಾಸುಗಟ್ಟಲೇ ಅವರ ಸಂದರ್ಶನ ನಿರರ್ಗಳವಾಗಿ ನಡೆದಿತ್ತು ! ಆಕಸ್ಮಿಕ ಭೇಟಿ ಕೊಟ್ಟು ನಮಗೂ ಅಪರೂಪದ ಸಂದರ್ಶನ ಕೇಳುವ ಭಾಗ್ಯ ಒದಗಿಸಿದ ಪ್ಲೋರಿನ್ ಅವರಿಗೆ ಮನದುಂಬಿ ವಂದಿಸಿದ್ದೆ.......
(ಅವರ ಆಕಾಶವಾಣಿ ಸಂದರ್ಶನದ ಆಡಿಯೋ ಫೇಸ್ಬುಕ್ ನಲ್ಲಿ ಹಂಚಿಕೊಳ್ಳುತ್ತಿದ್ದೇನೆ.......)
ಇವೆಲ್ಲವನ್ನೂ ಇಲ್ಲಿ ಬರೆದು, ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ; ಇನ್ನೂ ಪುಸ್ತಕ ಮಾಡಲಾಗದ, ಕಾದಿಡಲೇಬೇಕಾದ ಹೆಬ್ಬಾರರ ಹಲವು ಲೇಖನ, ಕವನ, ಕಥೆ, ಪತ್ರ, ಫೋಟೊಗಳನ್ನೆಲ್ಲ ಬಿಡುವಾದಾಗ ಸಂಗ್ರಹಿಸಿ ಅಂತರ್ಜಾಲದಲ್ಲಿ ಕಾದಿಡುವ ಪುಟ್ಟ ಪ್ರಯತ್ನ ಮಾಡುತ್ತೇನೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ, ಶುಭ ಹಾರೈಕೆಗಳಿರಲಿ...........
- ರೇಖಾ ಕೃಷ್ಣಮೂರ್ತಿ ಹೆಬ್ಬಾರ್, ಕರ್ಕಿ



ಖರೇ ಹೌದು. ಅವ ' ಹೇಳಿಕೊಳ್ಳದವ' ನನ್ನ ತಮ್ಮ.
ಪ್ರತ್ಯುತ್ತರಅಳಿಸಿತಮ್ಮ ಅಭಿಮಾನಕ್ಕೆ ನಾವು ಕೃತಜ್ಞರು 🙏🙏
ಅಳಿಸಿರೇಖಾ ಹೆಬ್ಬಾರ್ ಅವರ... ಹೆಬ್ಬಾರರು ಹೇಳಿಕೊಳ್ಳುವುದಿಲ್ಲ., ಲೇಖನಕ್ಕೆ ಪ್ರತಿಕ್ರಿಯೆ... ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಕರ್ಕಿ ಅವರ ಧರ್ಮಪತ್ನಿ ರೇಖಾ ಹೆಬ್ಬಾರ್ ಬರೆದ ಲೇಖನ ತುಂಬಾ ಮೆಚ್ಚುಗೆಯಾಯಿತು ಅವರು ಹೇಳಿದ ಪ್ರತಿಯೊಂದು ನೂರಕ್ಕೆ ನೂರು ಸತ್ಯ ಮಗಳಂತಿರುವ ರೇಖಾಳ ನಾನು ನೋಡಿಲ್ಲ ಆದರೆ ಹಬ್ಬ ಹುಣ್ಣಿಮೆಗಳಲ್ಲಿ ಕೃಷ್ಣಮೂರ್ತಿಯವರ ಜಯಂತಿಯ ದಿನ ಅವರಿಗೆ ಶುಭಕೋರಿ ಆಶೀರ್ವದಿಸಿ ದ್ಧೇನೆ ಆದರೆ ಕೃಷ್ಣಮೂರ್ತಿ ಅವರು ಹೇಳುತ್ತಿದ್ದರು.. ಆಫೀಸಿನ ಎಲ್ಲಾ ಜವಾಬ್ದಾರಿಯನ್ನು ರೇಖಾಗೆ ನೋಡಿಕೊಳ್ಳುತ್ತಾಳೆ ಎಂದು ಈ ಲೇಖನ ಓದಿದಾಗ ಅವಳು ಒಬ್ಬಳು ಉತ್ತಮ ಬರಹಗಾರ್ತಿ ಸಾಹಿತ್ಯಾಸಕ್ತಿ ಉಳ್ಳವಳು ಎಂದು ತಿಳಿಯಿತು ಎಲ್ಲವನ್ನೂ ನಿರ್ಭಿಡೆಯಿಂದ ನೇರವಾಗಿ ಸತ್ಯವಾಗಿ ಹೇಳುವ ಈ ಗುಣ ಪತಿಯಿಂದಲೇ ಬಂದಿರಬೇಕು ಕೃಷ್ಣಮೂರ್ತಿಯವರ ಬಗ್ಗೆ ಬರೆದ ಲೇಖನ ಓದಿದಾಗ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಆಸೆಯಾಗುತ್ತದೆ ಇನ್ನು ಓದಬೇಕೆನಿಸುತ್ತದೆ
ಪ್ರತ್ಯುತ್ತರಅಳಿಸಿಕೃಷ್ಣಮೂರ್ತಿಯವರು ತಂದೆಯವರು ನಾರಾಯಣ ಹೆಬ್ಬಾರ್ ದಿವಂಗತರು ಉತ್ತಮರು ನಿಷ್ಕಪಟ ನಿಸ್ವಾರ್ಥಿ ಹೃದಯ ನನ್ನ ಸ್ನೇಹಿತರಾಗಿದ್ದರು ಊರಿಗೆ ಬೇಕಾದ ಸದ್ಗೃಹಸ್ಥರು ಮತ್ತು ಅವರಾಗಿದ್ದರು
ಕೃಷ್ಣಮೂರ್ತಿ ಹೆಬ್ಬಾರರು ಏನನ್ನು ಹೇಳುವುದಿಲ್ಲ ಹೇಳಿದರೆ ಎಲ್ಲವನ್ನು ವಿವರವಾಗಿ ಹೇಳುತ್ತಾರೆ ಎಂಬ ಮಾತು ನಿಜ ಅವರದು ಬಹುಮುಖ ವ್ಯಕ್ತಿತ್ವ ಓದಿನ ಅನುಭವ ಅಭಿನಯ ಆಟ-ಪಾಠ ಕಥೆ ಕವಿತೆ ವಿಮರ್ಶೆ ಬರಹ ಬದುಕು ಬಹಳಷ್ಟಿದೆ ಜ್ಞಾನಕೋಶ ಅವರ ಮನೆಯೊಂದು ಗ್ರಂಥಾಲಯ ಉತ್ತಮ ಭಾಷಣಕಾರ ಅನಾಥ ಬಂಧು ಸತ್ಯಕ್ಕಾಗಿ ಹೋರಾಟ ಮಾಡುವ ಹೋರಾಟಗಾರ ಬಡವರು ದೀನರು ದಲಿತರು ನಿರ್ಗತಿಕರು ಅಂದರೆ ಅವರಿಗೆ ಕನಿಕರ ಅವರಿಗೆ ಇವರದು ಸಹಾಯಹಸ್ತ ಸಹಾಯಹಸ್ತ ಇಂಗ್ಲಿಷ್ ಕನ್ನಡ ಕವಿಗಳ ಕವಿತೆಗಳು ಅವರಿಗೆ ಬಾಯಿಪಾಠ ಅವರು ನಿಸರ್ಗ ಪ್ರೇಮಿ ಹಚ್ಚಹಸುರಿನ ಹುಲ್ಲು ಗದ್ದೆ ಇಚ್ಚೆಯಲಿ ಹಾಡುತ್ತ ಹಕ್ಕಿಗಳ ಸ್ವರ ಸೌಂದರ್ಯ ಸೂರ್ಯ ಯಾಗಿರುವ ಸೂರ್ಯಾಸ್ತ ಸೂರ್ಯೋದಯ ಅವರ ಪ್ರಿಯ ವಸ್ತು ತಪ್ಪನ್ನು ಅಸತ್ಯವನ್ನು ಡಂಭಾಚಾರ ವನ್ನು ಕಂಡರೆ ಅವರು ಸಿಡಿಮಿಡಿಗೊಳ್ಳುತ್ತತ್ತಾರೆ ಸ್ವಲ್ಪ ಮುಂಗೋಪಿ ಆದರೆ ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ ಎನ್ನುವ ಮಾತು ಅವರಿಗೆ ಅನ್ವಯಿಸುತ್ತದೆ ಅವರ ದಿನಚರಿಯನ್ನು ಪ್ರತ್ಯಕ್ಷ ನೋಡಿ ರೆಖಾಳು ಸುಂದರವಾಗಿ ವ್ಯಕ್ತಿತ್ವ ಚಿತ್ರಿಸಿದ್ದಾಳೆ ಅವಳೊಬ ಆದರ್ಶ ಸತಿ ಪತಿಗೆ ತಕ್ಕ ಸತಿ ಸ್ತ್ರೀ ಭಾಗ್ಯ ಪುರುಷನ ಪುಣ್ಯ ಎಂಬುದು ನಿಜ ಹೊಂಗೆಮರ ಬೆಳೆಸಿದ್ದು ಅವರ ನಿಸರ್ಗ ಪ್ರೇಮಕ್ಕೆ ಸಾಕ್ಷಿ ದೇವರು ದಂಪತಿಗಳಿಗೆ ನೂರು ವರ್ಷ ಸುಖ ದಾಂಪತ್ಯವನ್ನು ಕೊಡಲೆಂದು ಪ್ರಾರ್ಥಿಸುವೆ ಇಚ್ಚೆಯನರಿವ ಸತಿ ಯಾಗು ಎಂದು ಅವಳನ್ನು ಹರಸತ್ತೇನೆ ಕೃಷ್ಣಮೂರ್ತಿಯವರ ಸಂಸಾರ ಸುಖ ಮಯವಾಗಲಿ ಉಪಕಾರಿಯಾಗಿ ಕನ್ನಡ ಸಾಹಿತ್ಯ ಸೇವೆ ನಿರಂತರ ಸಾಗಲಿ ಊರಿಗಾಗಿ ದೇಶಕ್ಕಾಗಿ ಕನ್ನಡ ಸಾಹಿತ್ಯ ಅಭಿವೃದ್ಧಿಗಾಗಿ ಅವರ ಜೀವನ ಸಾಗಲಿ ಎಂದು ಆಶೀರ್ವದಿಸುವೆ ಸಿರಿಗನ್ನಡಂ ಗೆಲ್ಗೆ. ಸರಿಗನ್ನಡಮ ಗೆಲ್ಗೆ
ರೇಖಾಳಿಗೂ ಕೃಷ್ಣಮೂರ್ತಿ ಅವರಿಗೂ ನನ್ನ ಧನ್ಯವಾದಗಳು ಶುಭವಾಗಲಿ ನಾರಾಯಣ ಎಸ್ ಭಟ್ ಗಾಬ್ರಿ ಕರ್ಕಿ
M .A M Ed ೮೭ ವರುಷ ವಯೊಮಾನ
ಹಿರಿಯರಿಗೆ ನೂರು ನೂರು ನಮನಗಳು 🙏🙏
ಅಳಿಸಿನನಗೆ ನನ್ನ ಮಾವನೇ ಬಂದು ಶುಭ ಆಶೀರ್ವಾದ ಮಾಡಿದಂತೆ ಅನಿಸಿತು. ಧನ್ಯನಾದೆ ಸರ್ 🙏🙏
ಅಕ್ಕಾ... ಕಡೆಗೂ ಇಂಥದ್ದೊಂದು ಧೈರ್ಯ ಮಾಡಿದ್ರಿ ನೀವು...
ಪ್ರತ್ಯುತ್ತರಅಳಿಸಿಬಹಳ ಆಪ್ತವೆನಿಸಿತು ನಿಮ್ಮ ಬರಹ. ರವಿ ಭಟ್ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದನ್ನು ನೋಡಿ ಈ ಕ್ಷಣವೇ ಓದಿದೆ. ಪ್ರತಿಕ್ರಿಯಿಸಬೇಕು ಅನಿಸಿತು.
ಕೃಷ್ಣಮೂರ್ತಿ ಹೆಬ್ಬಾರರು ಒಂದು ಅಧ್ಬುತ ಶಕ್ತಿ. ನಿಸ್ಕಲ್ಮಶ ಮನಸ್ಸಿನ ಅಪರೂಪದ ಪತ್ರಕರ್ತ. ಅವರ ನಿತ್ಯದ ಕಾಯಕ ಬರವಣಿಗೆಯಷ್ಟೇ ಅಲ್ಲ, ಮತ್ತಿನ್ನೇನೇನೆಲ್ಲಾ ಇವೆ ಎನ್ನುವುದನ್ನು ಚೆಂದವಾಗಿ ತಿಳಿಸಿದ್ದೀರಿ. ನಿಷ್ಪಕ್ಷಪಾತವಾದ, ನಿಷ್ಠುರವಾದ, ತಪ್ಪನ್ನು ಖಂಡಿಸುವ ಹೆಬ್ಬಾರರಂಥ ಪತ್ರಕರ್ತರ ಗುಣ ಮನೆಮಂದಿಗೆ ಅನೇಕ ಸಂದರ್ಭಗಳಲ್ಲಿ ಸವಾಲಾಗಿರುತ್ತದೆ. ಆದರೆ ನೀವು ಅದನ್ನು ಹೇಗೆ ಸಹಿಸಿಕೊಂಡು, ನಿಭಾಯಿಸಿದಿರಿ ಎನ್ನುವುದನ್ನು ನನ್ನ ಗಮನ ಸೆಳೆಯಿತು. ಅವರ ಅದೆಷ್ಟೋ ಯಶಸ್ಸಿನ ಹಿಂದೆ ನೀವಿದ್ದೀರಿ ಅಕ್ಕಾ. ಓದಿ ಖುಷಿಪಟ್ಟೆ.
ಕೃಷ್ಣಮೂರ್ತಿ ಹೆಬ್ಬಾರರಿಗೆ, ನಿಮಗೆ ನನ್ನದೊಂದು ಉದ್ದಂಡ ನಮಸ್ಕಾರ.
ಪ್ರಶಾಂತೋ, ಧನ್ಯವಾದ.
ಅಳಿಸಿಬಂಧುವಾದರೂ ಬಹಳ ವರ್ಷಗಳ ನಂತರದ ಭೇಟಿ. ನಿನ್ನ ಮಾತು ಕೇಳಿ ಖುಷಿಯಾಯ್ತು. ಬಿಡುವಿರದ ಕೆಲಸದ ಮಧ್ಯೆ ನಿನಗೆ ಉತ್ತರಿಸಲು ತಡವಾಯಿತು. ಸಹನೆಯೊಂದಿಗೆ ಏನನ್ನೂ ನಿಭಾಯಿಸುವ ಗುಣ ಬಹುಶಃ ನಮಗೆ ರಕ್ತಗತ! ದೇವರು ನಮಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ಪ್ರಾರ್ಥಿಸೋಣ.
ಹೆಬ್ಬಾರರಿಗೆ ನಿನ್ನ ಹಾಗೂ ನಿನ್ನ ಕುಟುಂಬದ ಕಲೆ, ಅಚ್ಚುಕಟ್ಟುತನದ ಬಗ್ಗೆ ಸದಾ ಅಕ್ಕರೆ. ಅಭಿಮಾನ.
ನಿನ್ನ ಪ್ರೀತಿ, ಅಭಿಮಾನಕ್ಕೆ ಶರಣು
Congrats to my friend, college & cricket mate, #murthy💜💜..As I know him closely, he is very sharp, knowledgeable, friendly & above all has the talent to excel in any field, he enters!
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್.
ಅಳಿಸಿನಿಮ್ಮ ಗೆಳೆಯ ಹೆಬ್ಬಾರರಿಗೆ ಹೇಳಿದ್ದೇನೆ.
ನೀವು ಯಾರೆಂದು ತಿಳಿಯಲಿಲ್ಲ.
ನಮ್ಮ ಮನೆಗೆ ಸದಾ ಸ್ವಾಗತ