
ಸುಮಾರು ಎರಡು ವಾರಗಳ ಹಿಂದಿನಿಂದ ಜುಟ್ಟವಿರುವ ಸುಂದರವಾದ ಜೋಡಿ ಹಕ್ಕಿಗಳು ಹಾರಿ ಬಂದು ನಮ್ಮ ಮನೆಯ ಅಂಗಳದ ಮೇಲೆ ಹಾದು ಹೋದ ಕೇಬಲ್ ಮೇಲೆ ಕುಂತು ಮಾತುಕತೆ ನಡೆಸುತ್ತಿದ್ದವು. ಹೊಳ್ಳಿಯ ಮೇಲೆ ಕುಂತಿದ್ದ ನಮ್ಮನ್ನು ಗಮನಿಸುತ್ತಾ ಇವರಿಂದ ಏನಾದರೂ ಅಪಾಯವಿದೆಯೇ ಎಂದು ಬಹುಶಃ ಮಾತನಾಡಿಕೊಳ್ಳುತ್ತಿದ್ದರು. ಕೆಳಗೆ ಗಿಡಗಳನ್ನು ನೋಡುತ್ತ ಸುತ್ತಲೂ ಓಡಾಡುತ್ತ ಏನೋ ಚರ್ಚೆ ನಡೆಸುತ್ತಿದ್ದವು.
ಈಗ 5-6 ದಿನಗಳ ಹಿಂದೆ ಒಂದು ಹಕ್ಕಿ ಚುಂಚಿನಲ್ಲಿ ಎಲೆ ಕಚ್ಚಿಕೊಂಡು ಬಂತು. ಅದರ ಹಿಂದೆ ಇನ್ನೊಂದು ಹಕ್ಕಿ ಹಾರಿ ಬಂದು ಕೇಬಲ್ ಮೇಲೆ ಕುಳಿತು ನೋಡುತ್ತಿತ್ತು. ಇದು ಪೊದೆಯಂತೆ ಬೆಳೆದಿರುವ ಮಲ್ಲಿಗೆ ಬಳ್ಳಿಯ ಒಳಗೆ ಹೋಗಿ ಗೂಡು ಕಟ್ಟುವ ಕಾರ್ಯ ಶುರು ಮಾಡಿತ್ತು. ಇಬ್ಬರೂ ಪುರ್ರನೆ ಹಾರಿ ಬಂದು ಕಿಚಿಪಿಚಿ ಮಾಡುತ್ತ ಒಬ್ಬರು ಕಟ್ಟುವವರು, ಇನ್ನೊಬ್ಬರು ಕಾಯುವ ಕಾರ್ಯ ನಡೆದೇ ಇತ್ತು. ಅದು ಗೂಡು ಕಟ್ಟಲು ಪ್ರಾರಂಭಿಸಿದ ಮೇಲೆ ಒಂದು ದಿನವೂ ರಾತ್ರಿ ಅಥವಾ ಬೆಳ್ಳಂಬೆಳಗ್ಗೆ ಅಲ್ಲಿ ಇರುತ್ತಿರಲಿಲ್ಲ. ತಡವಾಗಿ ಗೂಡಿಗೆ ಬರುತ್ತಿತ್ತು.
ಆ ಕುರಿತು ನಾನು youtube shorts ಕೂಡಾ ಹಾಕಿದ್ದೆ.
https://youtube.com/shorts/WdCtQIiKAQA?si=H9X3E1iToXN-gF8u
ಮೊನ್ನೆ ಬಹುಶಃ ಗೂಡು ಮುಗಿದಿತ್ತು. ಮೌನವಾಗಿ ಬಂದು ಹೋಗಿ ಮಾಡುತ್ತಿತ್ತು. ನಾನು ನಿನ್ನೆ ಬೆಳಿಗ್ಗೆ ಹೂವು ಕೊಯ್ಯಲು ಹೋದಾಗ ಅರೆ ! ಗೂಡಿನಲ್ಲಿ ಹಕ್ಕಿ ಮೌನವಾಗಿ ಕುಳಿತಿತ್ತು. ನನ್ನನ್ನು ಇಣುಕಿ ನೋಡಿತು. ನಾನು ನಿಧಾನವಾಗಿ ದೂರ ಬಂದು ಬೇರೆ ಕಡೆ ಹೂವು ಕೊಯ್ದು ಒಳಗೆ ಬಂದೆ. ಬಹುಶಃ ೩,೪ ತಾಸಿನ ನಂತರ ಅದು ಹಾರಿ ಹೋಗಿತ್ತು. ಮತ್ತೆ ಒಂದೆರಡು ತಾಸು ಬಂದು ಕುಳಿತು ಹೋಗಿತ್ತು. ನಾನು ಸಂಜೆ ೬ ಗಂಟೆಯ ಹೊತ್ತಿಗೆ ಹೊರಗೆ ಹೋದವಳು ನೋಡಿದಾಗ ಅಲ್ಲಿ ಹಕ್ಕಿ ಇರಲಿಲ್ಲ. ಪಕ್ಕದಿಂದ ಒಳಗೆ ಏನೂ ಕಾಣುತ್ತಿರಲಿಲ್ಲ. ನಾನು ಹತ್ತಿರಕ್ಕೆ ಹೋಗಿ ಮೇಲಿನಿಂದ ಫೋಟೋ ಹೊಡೆದು ನೋಡಿದೆ. ಅರೇ, ಎರಡು ಬಣ್ಣದ ಮೊಟ್ಟೆಗಳು !! ಖುಷಿಯಾಗಿ ಕುಣಿದೆ. ಹಾಗೇ ಮಗನಿಗೆ ಹೇಳಿದೆ. ಅಲ್ಲಿ ಹಾವು ಬರಬಾರದೆಂದು ಕೆಳಗೆ ನೆಲದಲ್ಲಿ ಸ್ನೇಕ್ ಪ್ಲಾಂಟ್ ಇಟ್ಟೆ, 'ಯಾರಿಗೂ ಹೇಳಬಾರದು..... ನೋಡುವವರು ಹೆಚ್ಚಾದರೆ ಪುಟ್ಟ ಮರಿಗೆ ಅಪಾಯ' ಎಂದೆಲ್ಲ ಮನದಲ್ಲೇ ಸಂಭ್ರಮಿಸುತ್ತ ಒಳನಡೆದೆ. ಪುಟ್ಟ ಮರಿಯನ್ನು ನೋಡುವ ಕೌತುಕದಿಂದ ರಾತ್ರಿ ಮಲಗಿದ್ದೆ.....
ಇಂದು ಬೆಳಿಗ್ಗೆ ಬೆಳಕು ಹರಿದಾಗ ಹಕ್ಕಿಗಳ ಗದ್ದಲ ಕೇಳಿತು. ಹೊರಗೆ ಹೋಗಿ ನೋಡಿದರೆ ಆ ಪುಟ್ಟ ಹಕ್ಕಿ ಗೂಡಿನ ಬಳಿ ಬಂದು ಕುಳಿತು ಬಗ್ಗಿ ಬಗ್ಗಿ ನೋಡುತ್ತಿತ್ತು. ನಾನು ಹೊರಗೆ ಹೋದೆ. ಹಾರಿ ಹೋಯ್ತು. ನನಗೆ ಅನುಮಾನ ಬಂದು ಹತ್ತಿರ ಹೋಗಿ ನೋಡಿದೆ. ಗೂಡಿನಲ್ಲಿ ಮೊಟ್ಟೆಯೇ ಇಲ್ಲ! ಹೊಟ್ಟೆಯಲ್ಲಿ ಸಂಕಟ ಶುರುವಾಯ್ತು. ಕೆಳಗೆಲ್ಲ ಹುಡುಕಿದೆ. ಎಲ್ಲೂ ಇಲ್ಲ. ಮನಸ್ಸಿಗೆ ತುಂಬ ಕಸಿವಿಸಿ......
ಚಿಲಿಪಿಲಿಗುಟ್ಟುತ್ತ ಅಮ್ಮನ ಗುಟುಕು ಪಡೆದು ನಮ್ಮ ಕಣ್ಮುಂದೆ ಬೆಳೆದು; ಹಾರಿಹೋಗುವ ಕನಸು ಕಂಡಿದ್ದೆ.... ಆ ಪುಟ್ಟ ಮರಿಗಳು ಯಾರ ಹೊಟ್ಟೆ ಸೇರಿದವೋ...... ಹೇಳಲಾಗದ ತಳಮಳ. ಬೇಸರವಾಯ್ತು......
ನಿನ್ನೆ ಅದು ಗೂಡಿನಲ್ಲಿದ್ದಾಗ ನನ್ನನ್ನು ನೋಡಿತ್ತು. ಇಂದು ಅದು ನನ್ನನ್ನು ನೋಡಿ ಹಾರಿಹೋದಾಗ "ನಿಮ್ಮ ಬಲವನು ನಂಬಿ ಗೂಡ ಕಟ್ಟಿ ಮೊಟ್ಟೆಯನಿಟ್ಟು ನಾವು ಕೆಟ್ಟೆವು...." ಎಂದಂತಾಯ್ತು.
ಛೆ, ಇಷ್ಟು ಹತ್ತಿರದಲ್ಲಿದ್ದೂ ಏನೂ ಮಾಡಲಾಗದೆ ಹೋಯ್ತು. ರಾತ್ರೆ ಬಹುಶಃ ಹಾವು ಅಥವಾ ಇನ್ನೇನು ಬಂದು ಕಚ್ಚಿಕೊಂಡು ಹೋಯ್ತೋ ಗೊತ್ತಿಲ್ಲ.
ಹಿಂದೊಮ್ಮೆ ನಮ್ಮ ಮನೆಯ ಹಿಂದೆ ಇದೇ ಹಕ್ಕಿ ಗೂಡು ಕಟ್ಟಿದಾಗ ಹಗಲಿಗೇ ಹಾವು ಬಂದು ನಾವು ಓಡಿಸಿದ್ದೆವು. ಮೊಟ್ಟೆ ಕೆಳಗೆ ಬಿದ್ದು ಹಕ್ಕಿ ಗಲಿಬಿಲಿ ಆದಾಗ ನಾವೇ ಮತ್ತೆ ಗೂಡಿನಲ್ಲಿಟ್ಟು ಕೊಟ್ಟಿದ್ದೆವು. ಹಕ್ಕಿ ಖುಷಿಯಿಂದ ಒಪ್ಪಿಕೊಂಡಿತ್ತು. ಆದರೆ ಪಟ್ಟನೆ ನೆಲದ ಕೆಳಗೆ ಬಿಲ ಸೇರಿಕೊಂಡಿದ್ದ ಹಾವು ಬಿಡದೇ ನಮ್ಮ ಕಣ್ತಪ್ಪಿಸಿ ಬಂದು ಮೊಟ್ಟೆ ಖಾಲಿ ಮಾಡಿತ್ತು! ನಾವು ಇಲ್ಲೇ ಇದ್ದರೂ ಏನೂ ಮಾಡಲಾಗದೇ ಹೋಯ್ತಲ್ಲ ಎಂದು ತುಂಬಾ ಬೇಸರವಾಗಿತ್ತು. ಬೇಸರದಿಂದ ಚಡಪಡಿಸಿದ ಮಗ ಸೂರ್ಯ online ಮೂಲಕ 4 ಹೊಸ ಗೂಡುಗಳನ್ನು ಕೂಡಾ ತಂದು ಅಲ್ಲಲ್ಲಿ ಇಟ್ಟಿದ್ದ.....
ಬಹುಶಃ ಈಗಲೂ ಪುಟ್ಟ ಮೊಟ್ಟೆ ಹಾವಿನ ಹೊಟ್ಟೆ ಸೇರಿರಬಹುದೇನೋ ಎಂಬ ಅನುಮಾನ ಕಾಡುತ್ತಿದೆ......
ಹೇಗೆಲ್ಲ ಚಿಂತಿಸಿದರೂ ಯೋಚಿಸಿದರೂ ಉತ್ತರ ಕಾಣದು..... ಕಾಣದ ಕೈಗಳ ಕೈವಾಡ ನಡೆದೇ ಹೋಗಿದೆ..... ಆ ಪುಟ್ಟ ಪಕ್ಷಿಗಳು ಭದ್ರವಾದ ಜಾಗವೆಂದು ಹುಡುಕಿ ಕಷ್ಟಪಟ್ಟು ತೊಟ್ಟಿಲಿನಂತೆ ಕಟ್ಟಿಕೊಂಡ ಪುಟ್ಟ ಗೂಡು ಬಿಕೋ ಎನ್ನುತ್ತಿದೆ....
ಮನಸ್ಸು ತುಂಬ ಭಾರವಾಗಿದೆ....
ಮತ್ತೆ ಅದೇ ಬೇಸರ.....


😭😭😭
ಪ್ರತ್ಯುತ್ತರಅಳಿಸಿ