ಮಹಾಲಕ್ಷ್ಮಕ್ಕ ಅಂದರೆ ‘ಆಚೆಮ್ಮ’ ಆಗಾಗ ನೆನಪಾಗುತ್ತಲೇ ಇರುತ್ತಾಳೆ. ನಮ್ಮ ಪಕ್ಕದ ಮನೆಯಲ್ಲಿದ್ದ ಅಜ್ಜಿ ಆಚೆಮ್ಮ ದೈವ ಭಕ್ತಿ, ಗೋ ಸೇವೆ, ಆದರಾತಿಥ್ಯ ಎಲ್ಲದರಲ್ಲೂ ಮುಂದಿದ್ದವಳು. ಅವಳು ಅವರ ಮನೆಯಲ್ಲಿ ಏನಾದರೂ ಕಾರ್ಯಕ್ರಮ ಇದ್ದರೆ ಊಟಕ್ಕೆ ಬಾಳೆ ಹಾಕಿದ ತಕ್ಷಣ ಕಿಟಕಿಯ ಸಂದಿಯಿAದ ‘......ಬಾರೇ ಬಾರೇ, .......ಬಾರೋ ಬಾರೋ’ ಎಂದು ನಮ್ಮ ಹೆಸರ ಜೊತೆ ಕರೆಯುವ ರೀತಿ ಇನ್ನೂ ಹಸಿರು. ಮನೆ, ಕೊಟ್ಟಿಗೆ ಕೆಲಸಗಳನ್ನು ಮಾಡುತ್ತ ಸಂಜೆ ಹೊತ್ತು ಧಾರವಾಹಿ ನೋಡುತ್ತ ನೂರಾರು ವರ್ಷ ಹಳೆಯದಾದ ದೊಡ್ಡ ಮನೆಯಲ್ಲೇ ಓಡಾಡಿಕೊಂಡಿದ್ದಳು. ಅವಳು ಬೇರೆಲ್ಲೂ ಹೋಗುವುದು ತುಂಬಾ ಅಪರೂಪವಾಗಿತ್ತು. ಮಕ್ಕಳು ಆ ಹಳೆ ಮನೆ ತೆಗೆದು ಹೊಸ ಮನೆ ಕಟ್ಟುತ್ತಾರೆ ಎಂಬ ಸುದ್ದಿ ಕೇಳಿದಾಗಿನಿಂದ ಹಾಸಿಗೆ ಹಿಡಿದ ಆಚೆಮ್ಮ 15-20 ದಿನಗಳಲ್ಲೇ ಯಾವುದೇ ತೀವ್ರ ಕಾಯಿಲೆ ಇಲ್ಲದೇ ಇಲ್ಲವಾಗಿದ್ದಳು.
ಒಂದು ದಿನ ನನ್ನ ಯಜಮಾನರು ನಮ್ಮ ಮನೆಯ ಬೀದಿಯ ಬಳಿ ಕಾರು ತೊಳೆಯುತ್ತಿದ್ದರು. ಎಲ್ಲಾ ಮುಗಿದ ಮೇಲೆ ನೋಡಿದರೆ ಕಾರು ಕೀ ಕಾಣಲೇ ಇಲ್ಲ. ತುಂಬಾ ಹುಡುಕಿದೆವು. ಅವರು, ನಾನು, ಆಚೆಮ್ಮನ ಮಗಳು ಶಾರದಕ್ಕ, ಮಗ ಅಪ್ಪಣ್ಣ ಎಲ್ಲರೂ ಹುಡುಕಿದ್ದೇ ಹುಡುಕಿದ್ದು. ಒಂದು ತಾಸಾಯಿತು. ಇನ್ನೇನು ಮಾಡುವುದು ಎಂದು ನಾನು ತಿರುಗಿ ಮನೆ ಕಡೆ ಬಂದೆ. ಆಚೆಮ್ಮ ಒಳಗಿನಿಂದ ದೊಡ್ಡ ದನಿಯಲ್ಲಿ ‘ರೇಖಾ, ಬೆಂಕಿ ನಾಯ್ಕಂಗೆ ಕಾಯಿ ಒಡೆಸ್ತೆ ಹೇಳಕಳೆ. ಕೀಲಿ ಸಿಕ್ತು’ ಎಂದು ಹೇಳಿದಳು.
ಅರೆ! ‘ಬೆಂಕಿನಾಯ್ಕ’ ಯಾರು ಇಂವ? ನನಗೆ ಯೋಚನೆಯಾಯ್ತು. ನಾನು ಪ್ರಥಮ ಬಾರಿ ಇವನ ಹೆಸರು ಕೇಳಿದ್ದು. ಹರಕೆ, ದೇವಸ್ಥಾನ, ಪೂಜೆ, ಪುನಸ್ಕಾರ ಎಂದೆಲ್ಲಾ ಹೇಳಿದರೆ ಖಂಡಿತ ನನ್ನ ಯಜಮಾನರಿಗೆ ಸಿಟ್ಟು ಬರುತ್ತದೆ. ಏನು ಮಾಡಲಿ? ಬೆಂಕಿನಾಯ್ಕ ಎಲ್ಲಾದರೂ ದೂರದಲ್ಲಿದ್ದರೆ ನಾನು ಖಂಡಿತಾ ಬೈಸಿಕೊಳ್ಳೋದೇ. ಅದೂ ಹರಕೆ ಬೇರೆ ಎಂದುಕೊಂಡೆ. ಆದರೂ ಧೈರ್ಯ ಮಾಡಿ ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿಕೊಂಡೆ. ಅದಾದ 5-10 ನಿಮಿಷದ ಒಳಗೆ ಅವರು ‘ಕೀಲಿ ಸಿಕ್ತೇ’ ಎಂದು ಹೇಳುತ್ತಾ ಖುಷಿಯಲ್ಲಿ ಬಂದರು.
ನನಗೆ ಒಂದೆಡೆ ಖುಷಿ. ಇನ್ನೊಂದೆಡೆ ಎದೆಯಲ್ಲಿ ಢವ ಢವ. ನಿಧಾನವಾಗಿ ಅಂಗಳದ ಬದಿಯಲ್ಲಿ ನಿಂತು ಆಚೆಮ್ಮನಿಗೆ ಕೇಳಿದೆ ‘ಆಚೆಮ್ಮ, ಕೀಲಿ ಸಿಕ್ತೇ. ಬೆಂಕಿ ನಾಯ್ಕ ಅಂದ್ರೆ ಯಾರು? ಎಲ್ಲಿ ಕಾಯಿ ಒಡೆಸ?’ ಕೇಳಿದೆ. ಆಚೆಮ್ಮ ‘ಅಂವ ನಿಮ್ಮನೆಲೇ ಇದ್ನೆ. ಮನೆ ದೇವರ ಪೂಜೆ ಮಾಡಕಾದ್ರೆ ಕಾಯಿ ಒಡೆದರಾತು. ಅವ್ನೇ ಬೆಂಕಿನಾಯ್ಕ. ಮತ್ಯಾರೂ ಅಲ್ಲ’ ಎಂದಳು! ‘ಉಸ್ಸಪ್ಪಾ ನಾನು ಬಚಾವಾದೆ’ ಎಂದಕೊಂಡು ನಿಟ್ಟುಸಿರುಬಿಟ್ಟೆ. ಅವರಿಗೆ ಹೇಳಿ ಪೂಜೆ ಮಾಡುವಾಗ ಕಾಯಿ ಒಡೆಸಿದ್ದೂ ಆಯಿತು. ಆವತ್ತಿನಿಂದ ನನಗೆ ಬೆಂಕಿನಾಯ್ಕ ಅಂದ್ರೆ ಕುತೂಹಲ.
ಪತ್ರಿಕಾ ಕಛೇರಿಯಾಗಿರುವ, ಮುದ್ರಣದ ಕೆಲಸ ಮಾಡುವ ನಮ್ಮ ಮನೆಯಲ್ಲಿ ಪೇಪರ್, ಪುಸ್ತಕ, ಆಮಂತ್ರಣ, ಮುದ್ರಣ ಕೆಲಸದ ಸಾಮಾನು, ಜೊತೆಗೆ ಮಕ್ಕಳು, ಮನೆ ಸಾಮಾನು...... ಹೀಗೇ ಪ್ರತಿದಿನ ಸರಂಜಾಮುಗಳ ಸಂಗ್ರಹ ಹೆಚ್ಚುತ್ತಲೇ ಹೋಗುತ್ತದೆ. ಅದರಲ್ಲಿ ಕಾಣೆಯಾಗುವ ಸಂದರ್ಭ ತುಂಬಾ ಇದೆ. ಮನೆಯವರ ಚಿಕ್ಕಿ ಇರುವಾಗ; ಅವರು ಎಲ್ಲೆಲ್ಲೋ ಇಟ್ಟು ಏನೇ ಕಳೆದುಕೊಂಡರೂ ಕಂಡಾಗ ಸುಮ್ಮನೆ ಎತ್ತಿಟ್ಟು ಹುಡುಕುವಾಗ ಕೊಟ್ಟು ಕಣ್ಣು ಬಿಡುತ್ತಿದ್ದಳು. ಪ್ರೀತಿಯಿಂದ ಬೈಯುತ್ತಿದ್ದಳು. ಈಗ ಅವಳಿಲ್ಲ.
ಈಗೀಗ ಯಾರ ವಸ್ತು ಏನೇ ಕಾಣೆಯಾದರೂ ನಾನೇ ಹುಡುಕಿಕೊಡಬೇಕು. ನಾನೂ ಅದರಲ್ಲಿ ಸಿದ್ಧಹಸ್ತಳಾಗಿದ್ದೇನೆ. ನನಗೂ ಕೆಲಸ ಜಾಸ್ತಿಯಾದಾಗ ಹುಡುಕಲು ಸಮಯ ಸಿಗುವುದು ಕಷ್ಟವಾಗುತ್ತಿತ್ತು. ನನ್ನ ಅಕ್ಕ ನಮ್ಮ ಮನೆಗೆ ಬಂದಾಗ ಏನೇ ವಸ್ತು ಕಳೆದರೂ ಈ ಶ್ಲೋಕ ಹೇಳುತ್ತಾ ಹುಡುಕು ಸಿಗುತ್ತದೆ ಎಂದಿದ್ದಳು. ಚಿಕ್ಕಪುಟ್ಟ ವಸ್ತು ಕಳೆದಾಗಲೆಲ್ಲ ಇದು ತುಂಬಾ ಉಪಯೋಗಕ್ಕೆ ಬರುತ್ತಿದೆ. ಅದು ಹೀಗಿದೆ-
“ಓಂ ಕಾರ್ತಿವೀರ್ಯಾರ್ಜುನೋ ನಾಮ ರಾಜಾಬಾಹು ಸಹಸ್ರವಾನ್ |
ತಸ್ಯ ಸ್ಮರಣ ಮಾತ್ರೇಣ ಗತಂ ನಷ್ಟಂ ಚ ಲಭ್ಯತೆ” ||
ನನಗೆ ಎಲ್ಲ ವಸ್ತುಗಳಿಗೂ ಬೆಂಕಿನಾಯ್ಕನ ಮೊರೆ ಹೋಗಲು ಭಯ. ಯಾಕೆಂದರೆ ಚಿಕ್ಕಪುಟ್ಟ ವಸ್ತುಗಳಿಗೆಲ್ಲ; ನಾವು ಹುಡುಕುವ ಪ್ರಯತ್ನ ಮಾಡದೇ ಅವನ ಮೊರೆ ಹೋದರೆ, ಅವನು ತೀರಾ ಸಸಾರದವನಾಗಿ ಅವನಿಗೆ ಕೋಪ ಬರಬಹುದು ಎಂದು ನಾನು ಕಾಣೆಯಾದ ಅತೀ ಅಗತ್ಯವಾದ, ಅನಿವಾರ್ಯವಾದ ವಸ್ತುಗಳಿಗೆ ಮಾತ್ರ ಆತನ ಮೊರೆ ಹೋಗುತ್ತೇನೆ !
ಈ ಬೆಂಕಿನಾಯ್ಕ ನನ್ನಿಂದಾಗಿ ಈಗ ನನ್ನ ಅಕ್ಕ, ಅಮ್ಮನ ಮನೆ, ಅಣ್ಣ.... ಹೀಗೆ ತುಂಬಾ ಫೇಮಸ್ ಆಗಿದ್ದಾನೆ. ನನ್ನ ಪಾಲಿಗಂತೂ ಅವನದು ಸಕ್ಸಸ್ ಸ್ಟೋರಿ. ಯಾವುದೇ ಕೆಲಸಕ್ಕಾದರೂ ನಿಜವಾದ ಭಕ್ತಿ, ಶ್ರದ್ಧೆ ಇರಬೇಕು ಎನ್ನುವುದು ನನ್ನ ನಂಬಿಕೆ. ಮಡಿ, ಮೈಲಿಗೆ, ಅತಿಯಾದ ಆಚಾರ, ದೇವರಲ್ಲಿ ಭಯ ಇದಾವುದೂ ನನಗಿಲ್ಲ. ನನಗೆ ನನ್ನ ಮನೆದೇವರಲ್ಲಿ ತುಂಬಾ ಪ್ರೀತಿ. ಅವನ ಮೇಲಿಟ್ಟಿರುವ ಆ ಪ್ರೀತಿ, ನಂಬಿಕೆಯಿಂದ ಅವನು ಈವರೆಗೆ ನನಗೆ ಎಲ್ಲೂ ಮೋಸ ಮಾಡಿಲ್ಲ. ಅತಿಯಾಸೆ ಪಡದ ನನ್ನ ಇಷ್ಟಾರ್ಥ ಅವನು ಈಡೇರಿಸುತ್ತಲೇ ಬಂದಿದ್ದಾನೆ.
ಘಟನೆ 1.
ಅವರ ಕಾರಿಗೆ ಸಹಜವಾಗಿ 2 ಕೀ ಇದೆ. ಒಮ್ಮೆ ಒಂದು ಕೀ ಕಾಣೆಯಾಗಿ 15 ದಿನಗಳಾದರೂ ಸಿಕ್ಕಿರಲಿಲ್ಲ. ಮೊದಲು 4-5 ದಿನ ಸುಮಾರಾಗಿ ಹುಡುಕಿ ಸಿಗದೇ ಸುಮ್ಮನಿದ್ದು ನಾನು ಆಮೇಲೆ ಬೆಂಕಿನಾಯ್ಕನ ಮೊರೆ ಹೋದೆ. 15 ದಿನಗಳ ನಂತರ ನಮ್ಮ ಮನೆಗೆ ಅಪರೂಪಕ್ಕೆ ಕೆಲಸದ ತಿಮ್ಮಣ್ಣ ಬಂದಿದ್ದ. ಅವನ ಬಳಿ ರದ್ದಿ ಪೇಪರ್ ಚೂರುಗಳನ್ನು ಒಲೆಯಲ್ಲಿ ಹಾಕು ಎಂದು ಅವರು ಒಂದು ಪೇಪರ್ ಚೂರಿನ ಗಂಟು ಕೊಟ್ಟಿದ್ದರು. ಅವನು ಚಳಿ ಕಾಸುತ್ತ ಒಲೆಗೆ ಹಾಕುತ್ತಿರುವಾಗ ‘ಇದೆಂತ ಬೀಗದ ಕೈಯಿ?’ ಅಂದ. ನೋಡಿದರೆ ಕಾರ್ ಕೀ ! ತಿಮ್ಮಣ್ಣ ಬರದೇ ಇದ್ದರೆ ಆ ಪೇಪರ್ ಪೀಸ್ ಗೊಬ್ಬರದ ಗುಂಡಿಗೆ ಹೋಗುವ ತಯಾರಿಯಲ್ಲಿತ್ತು !! ಅಲ್ಲಿಗೆ ಬೆಂಕಿ ನಾಯ್ಕನಿಗೆ ಕಾಯಿ ಒಡೆದು ಕೈಮುಗಿದೆ.
ಘಟನೆ 2.
ಒಮ್ಮೆ ಇವರ ಮೊಬೈಲ್ ಮೆಮೊರಿ ಕಾರ್ಡ ರೀಡ್ ಮಾಡಲು ಕೊಟ್ಟಿದ್ದರು. ಅದರಲ್ಲಿ ತುಂಬಾ ವಿಷಯ, ಫೋಟೊ, ಆಡಿಯೋ ರೆಕಾರ್ಡ ಎಲ್ಲಾ ಇತ್ತು. ಅದು ಎಲ್ಲೋ ಕೈತಪ್ಪಿ ಬಿದ್ದು ಹೋಗಿದ್ದು ಮಣ್ಣಿನ ಅಂಗಳ ಸೇರಿತ್ತು. ಮನೆ ತುಂಬಾ ಹುಡುಕಿ ಸಾಕಾಗಿ ಮತ್ತೆ ಬೆಂಕಿನಾಯ್ಕನ ಮೊರೆ ಹೊಕ್ಕಾಗಿತ್ತು. ಮತ್ತೆರಡು ದಿನಗಳಲ್ಲಿ ಚಪ್ಪರದ ಮಡ್ಲು ತೆಗೆದು ಅಂಗಳ ಗುಡಿಸುವಾಗ ಅವರಿಗೇ ಮೆಮೊರಿ ಕಾರ್ಡ ಸಿಕ್ಕಿತ್ತು!
ಘಟನೆ 3.
ಸಿನೆಮಾಕ್ಕೆ ಹೋದ ಮಗನಿಗೆ ಪರ್ಸ ಕಾಣೆಯಾಗಿ ಎಲ್ಲಿ ಬಿಟ್ಟೆ ಎಲ್ಲಿ ಹೋಯ್ತು ಎಂಬ ಅರಿವಿಲ್ಲದೆ ಪರಿತಪಿಸುತ್ತಿದ್ದ. ಅದರಲ್ಲಿ ಎಟಿಎಂ ಕಾರ್ಡ ಕೂಡಾ ಇತ್ತು. ಥಿಯೇಟರ್ ನೌಕರರೊಬ್ಬರ ಪರಿಚಯ ಮಾಡಿಕೊಂಡು ಅವರ ಫೋನ್ ನಂಬರ್ ತೆಗೆದುಕೊಂಡು ಬಂದಿದ್ದ. ಫೋನ್ ಮಾಡಿ ನನಗೆ ತಿಳಿಸಿದ. ನಾನು ಸಿಗುತ್ತೆ ಬಿಡು ತಲೆಬಿಸಿ ಬೇಡ ಎಂದೆ. ಮರುದಿನ ಮಗ ಅವರಿಗೆ ಮತ್ತೆ ಫೋನ್ ಮಾಡಿ, ‘ನನಗೆ ಪರ್ಸಲ್ಲಿ ಇರುವ ಹಣ ತೊಂದರೆ ಇಲ್ಲ. ಎಟಿಎಂ ಕಾರ್ಡ ಇತ್ತು. ಸಿಕ್ಕರೆ ತಿಳಿಸಿ’ ಎಂದು ಅವರಿಗೆ ಹೇಳಿದ್ದ. ಅವರು ಸ್ವಲ್ಪ ಸಮಯದ ನಂತರ ಫೋನ್ ಮಾಡಿ ‘ಅಲ್ಲೇ ಒಂದು ಖುರ್ಚಿಯ ಮೇಲಿತ್ತು. ಟಾಕೀಜ್ ಕ್ಲೀನ್ ಮಾಡುವಾಗ ಸಿಕ್ಕಿದೆ’ ಎಂದು ತಿಳಿಸಿದಾಗ ಖುಷಿಯಾಗಿ ಅಲ್ಲಿ ಹೋಗಿ ಪರ್ಸ ತಂದಿದ್ದ. ಇಟ್ಟ ಹಣ ಇರಲಿಲ್ಲ. ಆದರೆ ಎಟಿಎಂ ಕಾರ್ಡ ಸಿಕ್ಕಿತ್ತು. ಒಟ್ಟಿನಲ್ಲಿ ನಾನು ನನ್ನ ಬೆಂಕಿನಾಯ್ಕನೇ ಪರ್ಸ ವಾಪಸ್ ಸಿಗಲು ಕಾರಣ ಎಂದು ಮಗನಿಗೆ ತಿಳಿಸಿ ಖುಷಿಪಟ್ಟಿದ್ದೆ.
ಘಟನೆ 4.
2-3 ತಿಂಗಳ ಹಿಂದೆ ಒಂದು ಪುಸ್ತಕದ ಕೆಲಸಕ್ಕೆಂದು ಒಬ್ಬರು ಕೈಬರೆಹ ಪ್ರತಿ ಕೊಟ್ಟು ಹೋಗಿದ್ದರು. ಒರಿಜಿನಲ್ ಮೇಟರ್ ಆಗಿತ್ತು. ತುಂಬಾ ತಲೆಬಿಸಿ ಮಾಡಿಕೊಂಡಿದ್ದೆ. ಎಲ್ಲೋ ಫೈಲ್ ಮಧ್ಯೆ ಕಾಣೆಯಾಗಿ ಹುಡುಕಿ ಹುಡುಕಿ ಸುಸ್ತಾಗಿ ಕಡೆಗೆ ಮತ್ತೆ ಬೆಂಕಿನಾಯ್ಕನಿಗೆ ಮನವಿ ಹೋಗಿತ್ತು. ಸಂಜೆಯ ಒಳಗೆ ಮೇಟರ್ ಕವರ್ ಸಿಕ್ಕಿತ್ತು !
ಮನೆಗೆ ಬಂದಾಗ ಎಟಿಎಂ ಕಾರ್ಡ ಸಹಿತ ಭಾವನ ಹಣದ ಕವರ್, ಅಕ್ಕನ ಚಿನ್ನ..... ಹೀಗೇ ಅತೀ ಅಮೂಲ್ಯವಾದ ವಸ್ತುಗಳೆಲ್ಲ ನೂರಕ್ಕೆ 98 ಬಾರಿ(98%) ಬೆಂಕಿನಾಯ್ಕನಿಗೆ ಹೇಳಿಕೊಂಡ ಹರಕೆಯಿಂದ ಸಿಕ್ಕಿವೆ. ಚಿಕ್ಕಪುಟ್ಟ ವಸ್ತುಗಳೆಲ್ಲ ಕಾರ್ತಿವೀರ್ಯಾರ್ಜುನ ಸ್ತೋತ್ರ ಹೇಳಿ ಮುಗಿಸುವುದರೊಳಗೆ ತುಂಬಾ ಸಲ ಸಿಕ್ಕಿವೆ.
ಒಟ್ಟಿನಲ್ಲಿ ‘ವೃತವೂ ಆಯ್ತು, ಸುಖವೂ ಆಯ್ತು’ ಎಂಬಂತೆ ಎರಡೂ ಆದ ಖುಷಿ. ದೇವರ ನಾಮಸ್ಮರಣೆಯೂ ಆಗುತ್ತಿದೆ. ಕಳೆದದ್ದೂ ಸಿಗುತ್ತಿದೆ. ಈ ನೆಮ್ಮದಿಗೆ ಕಾರಣರಾದ ಆಚೆಮ್ಮ ಹಾಗೂ ಅಕ್ಕನಿಗೆ ಈ ಮೂಲಕ ಧನ್ಯವಾದ ಹೇಳುತ್ತ; ಅಪಾಯಕಾರಿಯಂತೂ ಖಂಡಿತ ಅಲ್ಲದ ಈ ಉಪಾಯವನ್ನು ಈ ಮೂಲಕ ಮುಂದಿನವರಿಗೆ ಕಾದಿಡುವ ಯತ್ನ ಮಾಡುತ್ತಿದ್ದೇನೆ............
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್‌ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್‌ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್‌ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್‌ಬುಕ್‌ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ