ವಿಷಯಕ್ಕೆ ಹೋಗಿ

ಹಿತ್ತಲ ಬಳ್ಳಿಗೆ ಚಪ್ಪರ ಹಾಕಿದ ಖುಷಿ.....

ನಿನ್ನೆ ಬಂದ ಬೆನ್ನಿನ ನೋವು ಬೆಳಗಿನಿಂದ ಈ ಸಂಜೆಯವರೆಗೆ ಮತ್ತೆ ನೆನಪೇ ಆಗಿಲ್ಲ! ಕಸುವಿನ ಬಳ್ಳಿ ಜಜ್ಜಿ ಸೋಸಿ ಉಳಿದ ಜಗಟನ್ನು ಮತ್ತೆ ನೀರು ಹಾಕಿ ಕುದಿಸಿ ಹಾಲು ಸೇರಿಸಿ ಇಂದು ಬೆಳಿಗ್ಗೆ ಕೂಡಾ ಕುಡಿದಿದ್ದೆ. ಸುಮ್ಮನೆ ಹಾಳಾಗಬಾರದು ಎಂದು. ನರಗಳಿಗೆ ತುಂಬ ಶಕ್ತಿ ನೀಡುತ್ತದೆ ಈ ಕಸುವಿನ ಬಳ್ಳಿ. ಇವತ್ತು ಬೆಳಿಗ್ಗೆ ಗೋಧಿ ಹಿಟ್ಟು, ರವೆ ಸೇರಿಸಿ ದೋಸೆ - ಚಟ್ನಿಪುಡಿ-ಬೆಲ್ಲ-ತುಪ್ಪ. ಮಧ್ಯಾಹ್ನ ಅಲಸಂದೆ ಈರುಳ್ಳಿ ಜೊತೆ ಕೊಂಕಣಿಗರ ಕೊಳಂಬೊ ತರ ಸೂಪರ್ ಸಾಂಬಾರ್. (ರೆಸಿಪಿ ಕೊಟ್ಟಿದ್ದೇನೆ) ಹಾಗೆ ಸವತೆಕಾಯಿ ಹಸಿ ಮಾಡಿದ್ದೆ. ಆಸ್ಪತ್ರೆಯಲ್ಲಿರುವ ಲೀಲಚಿಕ್ಕಿಗೆ ಕಳೆದ ೧೭ ದಿನಗಳಿಂದ ಹೆಬ್ಬಾರರಿಂದ ತಿಂಡಿ, ಊಟ, ಬಟ್ಟೆ, ಕವಳ, ಔಷಧ ಉಪಚಾರದ ಸೇವೆ...... ನಡೆದೇ ಇದೆ. ಅವಳಿಗೆ ಊಟ ಕಳಿಸಿ ಮಗ ಚಿನ್ಮಯ, ನಾನು ಊಟ ಮಾಡಿದೆವು. ಹೆಬ್ಬಾರರು ಆಸ್ಪತ್ರೆಯಿಂದ ೩ಕ್ಕೆ ಬಂದು ಊಟ ಮಾಡಿದರು. ನಮ್ಮ ಮನೆಯ ಗಣಪಿ, ನಾನು ಸೇರಿ ಬಸಳೆ ಬಳ್ಳಿ ಹಾಗೇ ಸೋಣಿಗೆ ಬಳ್ಳಿಗೆ ಚಪ್ಪರ ಹಾಕಿದ್ದು ಇಂದಿನ ತುಂಬಾ ಖುಷಿಯ ವಿಷಯ. ಮಧ್ಯಾಹ್ನ ೧ ಗಂಟೆಯ ಹೊತ್ತಿಗೆ ಬಾಣಂತಿ, ಶಿಶು ಮೀಸಿ ನಮ್ಮ ಮನೆಗೆ ಬಂದ ಗಣಪಿ ಪಾತ್ರೆ ತೊಳೆದು, ನೆಲ ವರೆಸಿ ಮುಗಿಸಿ ಚಪ್ಪರದ ಕಂಬ ಹುಡುಕುವ ತಯಾರಿ ನಡೆಸಿದ್ದಳು. ನನಗೆ ಅಂಗಳ, ಹಿತ್ತಲು, ತೋಟ ಎಲ್ಲೇ ಕೆಲಸ ಮಾಡುವುದಿದ್ದರೂ ನನ್ನ ಜೊತೆಗಾತಿ ಅವಳು. ಅವಳಿದ್ದರೆ ಮಾತ್ರ ನನಗೆ ಆ ಕೆಲಸ ಖುಷಿ. ಭಾರ ಹೊರುವುದು, ಸಾಮಾನು ತರುವುದು, ವಯಸ್ಸಾದವರ ಸೇವೆ ಮಾಡುವುದು.... ಮನೆ ಕೆಲಸ, ತಿರುಗಾಟ.... ಹಂಚು ಹತ್ತಿ ಕಸ ಗುಡಿಸುವುದು..... ಹೀಗೇ ಗಣಪಿ ಮರ ಹತ್ತಲೂ ಸಿದ್ಧ ಸಂದರ್ಭ ಬಂದರೆ ಬಾವಿ ಇಳಿಯಲೂ ಸೈ.
ಇವತ್ತು ಮನೆ ರಿಪೇರಿ ಸಂದರ್ಭ ತೆಗೆದಿಟ್ಟ ಹಾಳಾದ ರೀಪು, ಬಿದಿರುಗಳನ್ನೆಲ್ಲ ಸೇರಿಸಿ ಇಬ್ಬರೂ ಸೇರಿ ಚಪ್ಪರ ಹಾಕಿದೆವು. ಬೀಜದಿಂದ ಹುಟ್ಟಿದ ಬಸಳೆ ಗಿಡ ತುರುರು ಅಂತ ಮೇಲೇಳದೇ ಕುಳಿತಿತ್ತು. ಸ್ವಲ್ಪ ಬುಡ ಬಿಡಿಸಿ ಹೊಂಗೆ ಹಿಂಡಿ ಹಾಕಿದಾಗ ಸ್ವಲ್ಪ ದಿನದಲ್ಲೇ ಸೊಕ್ಕಿನಿಂತ ಮೈಯೆತ್ತಿ ನಿಂತಿತ್ತು. ಹಾಗಾಗಿ ಅದಕ್ಕೆ ಹಬ್ಬಲು ಹಾಗೇ ಅಕ್ಕ ಗುಲ್ಬುರ್ಗಾದಿಂದ ತಂದುಕೊಟ್ಟು ಸೋಣಿಗೆ ಬಳ್ಳಿ ಎರಡಕ್ಕೂ ೩ ಗಂಟೆ ಹೊತ್ತಿಗೆ ಚಪ್ಪರ ಸಿದ್ಧವಾಗಿತ್ತು. ನಂತರ ಗಣಪಿ ಅವಲಕ್ಕಿ, ಚಕ್ಕುಲಿ ತಿಂದು ಚಹಾ ಕುಡಿದು ಸಂಘದ ಮೀಟಿಂಗ್ ಅಂತ ಮನೆ ಕಡೆ ಹೋದಳು. ನಾನು ಪತ್ರಿಕೆಯ ಕೆಲಸ ಆರಂಭಿಸಿದೆ. ಹಾಗೇ ಈಗ ಬರೆದು ಮುಗಿಸಿ ಮದ್ಗುಣಿ ಮಹಾಬಲ ಭಟ್ಟರ ಕವನ ಪಟ್ಟಿ ನೋಡಿ ಟೈಪ್ ಮಾಡುವ ಕೆಲಸ ಮುಂದೆ......
ಅಲಸAದೆ ಸಾಂಬಾರ್ : ಬೇಕಾಗುವ ಸಾಮಾನು- ಅಲಸಂದೆ ನೆನೆಸಿದ್ದು ಅಥವಾ ಮೊಳಕೆ ಬರಿಸಿದ್ದು ಅಥವಾ ಹಾಗೇ ಆದರೂ ಅಡ್ಡಿಯಿಲ್ಲ + ತೆಂಗಿನ ಕಾಯಿ + ಈರುಳ್ಳಿ ಹುರಿಯಲು- ಬಾಣಲಿಗೆ ಎಣ್ಣೆ ಹಾಕದೆ ಕೊತ್ತಂಬರಿ ೨ ಚಮಚ+ ಖಾರಕ್ಕೆ ಬೇಕಾದಷ್ಟು ಒಣಮೆಣಸು ಹಾಕಿ ಹುರಿಯಬೇಕು. ನಂತರ ಸ್ವಲ್ಪ ಅರಿಶಿನ ಹಾಕಿ ಕೈಯಾಡಿಸಿ. ವಿಧಾನ- ಅಲಸಂದೆ ಚೆನ್ನಾಗಿ ಬೇಯಿಸಿಡಿ. ತೆಂಗಿನಕಾಯಿ ಸ್ವಲ್ಪ ಜಾಸ್ತಿ ಬೇಕು. ಹುರಿದ ಮಸಾಲೆ ಜೊತೆ ಸ್ವಲ್ಪ ಹುಣಸೆ ಹಣ್ಣು ಹಾಕಿ ನುಣ್ಣಗೆ ರುಬ್ಬಿ. ೨-೩ ಈರುಳ್ಳಿ ಸ್ವಲ್ಪ ಬೇಯಿಸಿ ಬೇಯಿಸಿದ ಅಲಸಂದೆ + ರುಬ್ಬಿದ ಮಿಶ್ರಣ + ಉಪ್ಪು ಹಾಕಿ ಕುದಿಸಿ. ಒಗ್ಗರಣೆಗೆ- ಎಣ್ಣೆಗೆ ಸಾಸಿವೆ+ಕರಿಬೇವು+ಇಂಗು ಹಾಕಿ ಒಗ್ಗರಣೆ ಕೊಡಿ. ಸುಲಭವಾದ, ರುಚಿಕರವಾದ ಮಕ್ಕಳೂ ಇಷ್ಟಪಡುವ ಅಲಸಂದೆ ಸಾಂಬಾರ್ ಅನ್ನ, ಚಪಾತಿ, ದೋಸೆಯೊಂದಿಗೂ ಸವಿಯಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೆಬ್ಬಾರರು ಹೇಳಿಕೊಳ್ಳುವುದೇ ಇಲ್ಲ.......

     ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ.....  ಕೊಂಚ ತಿಳಿದವರೂ ಇಂದು ಫೇಸ್‌ಬುಕ್, ವಾಟ್ಸಾಪ್, ಯೂಟ್ಯೂಬ್‌ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್‌ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್‌ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್‌ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು.  ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್‌ಬುಕ್‌ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ  ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...

ಮತ್ತೆ ಮತ್ತೆ ನೆನಪಾಗುವ ಅತ್ತಿಗೆಯ ಆ ದೋಸೆ......

  ನನ್ನ ಅತ್ತಿಗೆ ವಿದ್ಯಾ ಯಾವಾಗಲೂ ಚುರುಕು. ಹಳ್ಳಿಮನೆಯಲ್ಲಿ ಉಳಿದು ಮನೆ-ಮಕ್ಕಳು, ಆಳು-ಕಾಳು, ಅಡುಗೆ, ಕೊಟ್ಟಿಗೆ, ತೋಟ, ದೇವರಕಾರ್ಯ....... ಹೀಗೆ ಕೈತುಂಬಾ ಕೆಲಸವಿದ್ದರೂ ಎಲ್ಲವನ್ನೂ ನಿಭಾಯಿಸಿ ಸಭೆ-ಸಮಾರಂಭ, ಜಾತ್ರೆ, ಬಂಧು-ಬಾoಧವರ ಮನೆಯ ಕಾರ್ಯ, ಮಕ್ಕಳ ಜೊತೆ ಆಟ-ಒಡನಾಟ ಎಲ್ಲದರಲ್ಲೂ ಸಮಯಕ್ಕೆ ಭಾಗವಹಿಸಿ ಸಂಭ್ರಮಪಡುತ್ತಾಳೆ. ಹುಟ್ಟಿನಿಂದ ಪಟ್ಟಣದಲ್ಲಿ ಬೆಳೆದರೂ ಹಳ್ಳಿ ಜನ, ಜೀವನ ಇಷ್ಟಪಡುವ ಅತ್ತಿಗೆ ಬಾಲ್ಯದಲ್ಲೇ ರಾಮಾಯಣ, ಮಹಾಭಾರತವನ್ನು ಓದಿ, ಅರಿತು ವಿವರಿಸುವ; ಹಿಂದಿ, ಕೊಂಕಣಿ ಭಾಷೆಗಳನ್ನೂ ಚೆನ್ನಾಗಿ ಮಾತನಾಡಬಲ್ಲ ನನ್ನ ಅತ್ತಿಗೆ; ಹಳ್ಳಿಮನೆಯನ್ನು, ಹಳ್ಳಿಯಲ್ಲಿರುವ ಗಂಡುಮಕ್ಕಳನ್ನು ತಿರಸ್ಕರಿಸುವ ಇಂದಿನ ಎಲ್ಲ ಹೆಣ್ಣುಮಕ್ಕಳಿಗೂ, ಪಾಲಕರಿಗೂ ಮಾದರಿ ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅಮ್ಮನ ಸೊಸೆಯಾಗಿ, ಅಣ್ಣನ ಮಡದಿಯಾಗಿ ಅವರ ಕಷ್ಟ-ಸುಖ ಅರಿತು ಮಕ್ಕಳ ಜೊತೆ ತುಂಬು ಜೀವನ ನಡೆಸುತ್ತಿರುವ ಅತ್ತಿಗೆ ನನಗೆ ಎಂದಿಗೂ ಅಚ್ಚುಮೆಚ್ಚು. ಆ ದಿನ ಅಮ್ಮನ ಮನೆಗೆ ಹೋದಾಗ ನಾವು ಮಾತನಾಡುತ್ತ ರಾತ್ರಿ ಮಲಗುವಾಗ ತಡವಾಗಿತ್ತು. ಆದರೂ ಬೆಳಿಗ್ಗೆ ಬೇಗ ಎದ್ದು ಆಕಳ ಹಾಲು ಕರೆದು ಪುಟ್ಟ ಕರುವಿಗೆ ಹಾಲುಕುಡಿಸಿ, ಬಿಸಿಲೇರುವ ಮುಂಚೆ ಅವನ್ನು ಮೇಯಲು ಬಿಟ್ಟು; ಕೊಟ್ಟಿಗೆ ಕೆಲಸ ಮುಗಿಸಿ ಮನೆಗೆ ಬಂದು ಶಾಲೆಗೆ ಹೋಗುವ ಮಕ್ಕಳನ್ನು ತಯಾರಿ ಮಾಡುವ ಕೆಲಸ. ಅಂದು ಗಡಿಬಿಡಿಯಲ್ಲಿ ಅತ್ತಿಗೆ ಉಳಿದ ದೋಸೆ ಹಿಟ್ಟಿಗೆ ಹಿತ್ತಲಲ್ಲಿ ಬೆಳೆದ...

ತಪ್ಪು ಕಂಡರೆ ತಿದ್ದಿ...... ಒಪ್ಪು ಅನಿಸಿದರೆ ಹರಸಿ......

ಆತ್ಮೀಯರೇ,  ನಮಸ್ತೆ.  ನಾನು ಬಹುದಿನಗಳಿಂದ ನನ್ನ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಬೇಕು ಅಂದುಕೊಂಡಿದ್ದೆ. ಕೆಲಸದ ಒತ್ತಡ, ಸಮಯದ ಅಭಾವ, ಅನಾರೋಗ್ಯ, ಆಲಸ್ಯದಿಂದ ದಿನ ದೂಡುತ್ತಲೇ ಇದ್ದೆ. ಆದರೆ ಇಂದು ಮತ್ತೆ ಪ್ರಾರಂಭ ಮಾಡಬೇಕೆಂಬ ನಿರ್ಧಾರ ಮಾಡಿ ಬೆಳಗಿನ ತಿಂಡಿ ಮಾಡುತ್ತ ನಾನು 3-4 ತಿಂಗಳುಗಳಿಂದ ನೋಡುತ್ತಿರುವ Indiamoney.com  ತೆಗೆದೆ. ಅರೆ! ಹೊಸ ಕೋರ್ಸ್. ಬಹಳ ಖುಷಿಯಾಯ್ತು. ಅಲ್ಲಿ ಯುಟ್ಯೂಬ್ ಚಾನೆಲ್ ಪ್ರಾರಂಭಿಸುವ ಕುರಿತು ತುಂಬಾ ಸರಳವಾಗಿ, ಸರಾಗವಾಗಿ, ಸುಂದರವಾಗಿ ವಿವರಣೆ ನೀಡಿದ್ದರು. ಸಂಭ್ರಮದಿಂದ ನಾನು ಅಂದೇ ಯುಟ್ಯೂಬ್ ಚಾನೆಲ್ ಶುರು ಮಾಡುವ ಹುಮ್ಮಸ್ಸಿನಲ್ಲಿದ್ದೆ. ಆದರೆ ಆಗಾಗ ಬಿಡುವು ಮಾಡಿಕೊಂಡು ಕೆಲಸ ಮುಗಿಸಿ ಅವರ ಎಲ್ಲ ವೀಡಿಯೋ ಮುಗಿಸುವುದರೊಳಗೆ ಸಂಜೇ ಆಗಿತ್ತು. ನನಗೂ ಕೆಲಸ ಮಾಡಿ ಸುಸ್ತು.......  ಮತ್ತೆ ಮುಂದೂಡಿದೆ.  2-3 ದಿನಗಳೇ ಕಳೆಯಿತು.. ಯೂಟ್ಯೂಬ್ ಗೆ ಸರಿಯಾಗಿ ವೀಡಿಯೋ ಮಾಡಲು ಕ್ಯಾಮೆರಾ ಎದುರು ತುಂಬಾ ಪ್ರಯೋಗ ಮಾಡಿ ಕಲಿಯಬೇಕು. ತುಂಬಾ ಸಮಯ ಬೇಕು ಎಂದು ಯೋಚಿಸಿ ಸದ್ಯ ಬ್ಲಾಗ್ ಮಾಡುವ ನಿರ್ಧಾರಕ್ಕೆ ಬಂದು ಇದೀಗ Rekha Hebbar's ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ.......... ನಾನು ಗೃಹಿಣಿ. ಮದುವೆಯಾಾಗಿ  26 ವರ್ಷ ಕಳೆಯಿತು. ಹಿಂದೆ ತವರು ಮನೆಯಲ್ಲಿ ಕಳೆದ ದಿನಗಳಲ್ಲಿ ಕಿವಿಗೆ ರೇಡಿಯೋ ಹಿಡಿದು ಅದರಲ್ಲಿ ...

'ಕಸುವಿನ ಬಳ್ಳಿ'ಗೆ ಕೈಮುಗಿದೆ....

ಅಂದು ತುಂಬಾ ಸೊಂಟ ನೋವು. ಕೂತಲ್ಲಿಂದ ಎದ್ದರೆ ನೋವು. ಎಲುಬಿಗೇನಾಗಿದೆಯೇನೋ ಅಂತ ಹೆದರಿದ್ದೆ. ಮೈಕೈ ಕೂಡಾ ಅಲ್ಲಲ್ಲಿ ನೋವು.  ಆಯಿಯ ಫೋನ್ ಬಂದಿತ್ತು. ಸೊಂಟನೋವು ಅಂದೆ. ‘ಕಸುವಿನ ಬಳ್ಳಿ ಕುಡಿ’ ಅಂದಳು. ‘ಅಯ್ಯೋ ಬೇಸರ’ ಅಂದೆ. ‘ಆರಾಮ ಆಗ ಅಂದ್ರೆ ಕುಡ್ಯ’ ಅಂದಳು. ಹಿತ್ತಲಿಂದ ಅದನ್ನು ತಂದು ಸೊಂಯ್ಸಿ ತೊಳೆದು ಜಜ್ಜಿ ಅಥವಾ ಕತ್ತರಿಸಿ ರುಬ್ಬಿ........ ಇದೆಲ್ಲಾ ರಗಳೆ ಕೆಲ್ಸ ನನಗಾಗಿ ಮಾಡಕೊಳ್ಳಲಿಕ್ಕೆ ಬೇಜಾರು ಅನ್ನಿಸ್ತು. ಆದರೂ ಆಯಿಗೆ ಬೇಜಾರಾಗಬಾರದೆಂದು ಕಸುವಿನಬಳ್ಳಿ ತಂದು ಕತ್ತರಿಸಿ ಸ್ವಲ್ಪ ಜೀರಿಗೆ ಜೊತೆ ಮಿಕ್ಸರ್‌ಗೆ ಹಾಕಿ ತಿರುಗಿಸಿ ನೀರು ಹಾಕಿ ಸೋಸಿ ಕುಡಿದೆ. ಅದಕ್ಕೆ ಮತ್ತೆ ನೀರು ಹಾಕಿಟ್ಟು ಚೆನ್ನಾಗಿ ಕಿವುಚಿ ಮತ್ತೆ ೨-೩ ಬಾರಿ ಕುಡಿದೆ. ಕೆಳಗೆ ಕೂರಲು, ಸ್ವಲ್ಪವೂ ಬಗ್ಗಲು ಆಗದೆ ಭಯಗೊಂಡಿದ್ದೆ.  ಮರುದಿನ ಬೆಳಿಗ್ಗೆ ಎದ್ದಾಗ ೧೦% ನಷ್ಟು ಕಡಿಮೆಯಾಗಿತ್ತು. ಪೂರ್ತಿ ಕಡಿಮೆ ಆಗುವ ಹಾಗೆ ತೋರಲಿಲ್ಲ. ಮತ್ತೆ ಆಯಿ ಮಧ್ಯಾಹ್ನ ಫೋನ್ ಮಾಡಿ ವಿಚಾರಿಸಿದಳು. ‘ಹೇಂಗಿದ್ಯೆ? ಕಸುವಿನ ಬಳ್ಳಿ ಮಾಡ್ಕಂಡ್ಯಾ?’ ಎಂದು ಕೇಳಿದಳು. ‘ನಿನ್ನೆ ಕುಡಿದಿದ್ದೆ. ಇವತ್ತು ಮತ್ತೆ ಮಾಡುದಾ?’ ಕೇಳಿದೆ. ‘ಕಡಿಮೆ ಆಗಿಲ್ಲ ಅಂದ್ರೆ ಇವತ್ತೊಂದಿನ ಕುಡಿ’ ಅಂದಳು. ಮತ್ತೆ ಮಾಡಿ ಕುಡಿದೆ. ಡಾಕ್ಟರ್ ಹತ್ರ ಹೋಗೋಣ ಅಂದ್ರೂ ದಬ್ಬೆ ಕಟ್ಟಿಕೊಂಡಂತೆ ಸೊಂಟ ದಕ್ಕಾಗಿತ್ತು.  ಸಂಜೆ ಆಗುವಾಗ ನನಗೇ ಆಶ್ಚರ್ಯ. ಅರೆ ಸೊಂಟನೋವು ಮರೆತೇ ಹ...

ನಮ್ಮ ಮನೆಯಲ್ಲಿ ಹಂಡಾಹುಂಡಿ ಜಗಳ!

ಮೊನ್ನೆ ನಮ್ಮ ಮನೆಯಲ್ಲಿ ಅಪ್ಪ - ಮಗನಿಗೆ ಹಂಡಾಹುಂಡಿ ಜಗಳ. ಮುನಿಸು. ಸಿಟ್ಟು. ಕೋಪ....  ಯಾಕೆ ಗೊತ್ತಾ? ವಿಷಯ ಕೇಳಿದರೆ ನಿಮಗೆ ದಂಗಾಗಬಹುದು. ಯಾಕೆ ಹೇಳಿ?  ಯಾಕೆಂದ್ರೆ ಕಾರಣ ಇಷ್ಟೇ 'ಗಿಡಗಳಿಗೆ ನಾನು ನೀರು ಹಾಕ್ತೇನೆ.... ಇಲ್ಲ ನಾನು.... ಇಲ್ಲ ನಾನು..... ಇಲ್ಲಾ ನಾನೇ.....' ಹೀಗೆ ಕಂಡಾಪಟ್ಟೆ ಜಗಳ. ನೀನು ನೀರು ಹಾಕು ಅಂತಲ್ಲ ಅಥವಾ ನೀನು ಕೆಲಸ ಮಾಡು ಅಂತಲ್ಲ, 'ನಾನು ಮಾಡ್ತೀನಿ, ನಾನು ಮಾಡ್ತೀನಿ' ಅಂತ ಜಗಳವೇ ಜಗಳ!!   ಹೌದು, ಮಗನ ಹಠಕ್ಕೆ ಮಣಿದು ಅವನದೇ ಖರ್ಚಿನಲ್ಲಿ ಕಳೆದ ಜುಲೈ ತಿಂಗಳಲ್ಲಿ 300ಕ್ಕೂ ಹೆಚ್ಚು ಗಿಡ ಅರಣ್ಯ ಇಲಾಖೆ ನರ್ಸರಿಯಿಂದ ತಂದು ಗುಡ್ಡದ ಜಾಗದಲ್ಲಿ ನೆಟ್ಟಿದ್ದೆವು. ಅದರಲ್ಲಿ 150 ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಕಾಡು ಜಾತಿಯ ಗಿಡವಾದರೂ ಅದು ಪುಟ್ಟದಾಗಿರುವುದರಿಂದ ಈ ಬಾರಿ ಅದಕ್ಕೆ ನೀರು ಬೇಕು. ಹಾಗಾಗಿ ಅಲ್ಲೊಂದು ನೀರಿನ ಟ್ಯಾಂಕ್ ತಂದಿಟ್ಟು; ಅದರಲ್ಲಿ ಹಣ ಕೊಟ್ಟು ನೀರು ಸಪ್ಲೈ ಮಾಡುವವರಿಂದ ನೀರು ತುಂಬಿಸಿ ಬಕೆಟ್ ನಲ್ಲಿ ಹಿಡಿದು ಗಿಡಗಳಿಗೆ ಹಾಕುವ ಕೆಲಸ. ಇದು ಇಬ್ಬರಿಗೆ ಸುಮಾರು 2 ತಾಸಿನ ಕೆಲಸ.  ಮಗನಿಗೆ ವರ್ಕ್ ಫ್ರಮ್ ಹೋಮ್. ಹಾಗಾಗಿ ತನಗೆ ಕೆಲಸ ಇದ್ದಾಗ ಅಪ್ಪ ಒಬ್ಬರೇ ಹೋಗುತ್ತಾರೆ ಎಂಬ ಚಿಂತೆ ಮಗನಿಗೆ. ಮಗನಿಗೆ ಕಷ್ಟ ಆಗಬಾರದು ಎಂದು ಅಪ್ಪನಿಗೆ. ಹೀಗೆ ಇಬ್ಬರ ಕಾಳಜಿಯ ಜಗಳ ! ನನಗೆ ಮನದಲ್ಲೇ ನಗು. ಹೆಮ್ಮೆ.....  ಕೊನೆಗೂ ಮಗ ಅಪ್ಪನ ಕಣ್ತ...

ಮರೆಯದಿರೋಣ ಈ ‘ಮೃಗಶಿರ ಮಳೆ’ಯ......

     ನನ್ನತ್ತೆ ಮಾತುಮಾತಿಗೆ ಗಾದೆ ಹೇಳುತ್ತಿದ್ದುದು ಆಗಾಗ ನೆನಪಿಗೆ ಬರುತ್ತಿರುತ್ತದೆ. ಮಳೆಗಾಲದ ಆರಂಭದಲ್ಲಿ ಆಗಾಗ ಬರುವ  ಬಿಸಿಲಿಗೆ ಒದ್ದೆಬಟ್ಟೆ, ಇನ್ನೂ ಒಣಗದ ಮಾವಿಹಣ್ಣಿನ ಹಪ್ಪಳ ಅಥವಾ ಇನ್ನೇನೋ ಸಾಮಾನುಗಳನ್ನು ಅಂಗಳದಲ್ಲಿ ಹಾಕಲು ಹೋಗಿ ತಿರುಗಿ ಒಳಗೆ ಬರುವಷ್ಟರಲ್ಲಿ ಮಳೆ ಬರುತ್ತಿತ್ತು. ಆಗೆಲ್ಲ ಅತ್ತೆ ಮಾವನ ಮುಂದೆ ಹೇಳಿ ಮಾವನನ್ನು ಚುಡಾಯಿಸುತ್ತಿದ್ದ ಮಳೆಗಾಲದ ಮುಖ್ಯ ಗಾದೆ ‘ಮಳೆಗಾಲದ ಬಿಸಿಲು ನಂಬುಲಿಲ್ಲೆ, ಮನೆಲಿ ಗಂಡನ ನಗೆ ನಂಬುಲಿಲ್ಲೆ’ ! ಆಗ ಆತ, ‘ಅದು ಹಾಗಲ್ಲ- ಮಳೆಗಾಲದ ಬಿಸಿಲು ನಂಬುಲಿಲ್ಲೆ, ಮನೆ ಹೆಂಡ್ತಿ ನಗೆ ನಂಬುಲಿಲ್ಲೆ’ ಅಂತ ತಿರುಗಿಸಿ ಹೇಳುತ್ತ ತಮಾಷೆ ಮಾಡುತ್ತಿದ್ದ !! ಆದರೆ ಯಾವುದು ಸತ್ಯವೋ ನನಗಂತೂ ಗೊತ್ತಿಲ್ಲ. ‘ಮೃಗಶಿರೆ ಮಳೆಯಲ್ಲಿ ಮೃಗದ ಕೊಂಬೂ ಚಿಗುರುತ್ತದೆ’ ಎಂದು ಪ್ರತಿವರ್ಷ ಈ ಸಮಯದಲ್ಲಿ ಅತ್ತೆ ಹೇಳುವ ಮಾತಿದು. ನಿಜ. ಅತ್ತೆ - ಮಾವ ಮನೆಯಂಗಳದಲ್ಲಿ ಬೆಂಡೆ ಬೀಜ, ಪಡವಲ ಬೀಜ, ಹೀರೇಬೀಜ ಬಿತ್ತಿ ಅದಕ್ಕೆ ಮಣ್ಣು, ಗೊಬ್ಬರ ಹಾಕಿ ಆರೈಕೆ ಮಾಡುತ್ತಿದ್ದ ಕಾಲವದು. ಬೇಕಾಬಿಟ್ಟಿ ಬೆಳೆದ ಗಿಡದ ಟೊಂಗೆಗಳನ್ನೆಲ್ಲ ಕಡಿದು, ಬೇಕಾದಲ್ಲಿ ನೆಟ್ಟು - ಬೇಕಾದವರಿಗೆ ಕೊಟ್ಟು, ಬೇಕಾಗಿದ್ದು ಅವರಿಂದ ತರುವ ಕಾಲ......  ೭೮ ವರ್ಷ ದಾಟಿದ ಆಚೆಮನೆ ಅಪ್ಪಚ್ಚಿ - ಚಿಕ್ಕಿ ಪ್ರತಿವರ್ಷ ಅಂಗಳದಲ್ಲಿ ಬೆಂಡೆ, ಹೀರೆ, ಪಡುವಲ, ಹಾಗಲ.... ಅಂತ ಬೀಜ ಬಿತ್ತಿ; ಬರುವ ಗಿಡದ ಆರೈಕೆ ಮಾಡು...

ಮೈಂಡ್ ಫ್ರೆಶ್ ಮಾಡಿದ ನನ್ನ ತವರು... ಹರಿಣಿ.... ಚಿಪ್ಸು... ಇತ್ಯಾದಿ

ಆ ದಿನ ಆಯಿಯ ಮನೆಗೆ ಹೋಗಿದ್ದೆ. ಅತ್ತಿಗೆ ಹಲಸಿನ ಕಾಯಿ ಚಿಪ್ಸ್ ಮಾಡಲು ತಯಾರಿ ನಡೆಸಿದ್ದಳು.  ಅಲ್ಲಿ ತೋಟ, ಗದ್ದೆಯ ಕೆಲಸಕ್ಕೆ ಬರುವ ಹಾಣಿ, ತುಳ್ಸು, ವೆಂಕಟೇಶ ಹೀಗೇ ಯಾರಾದರೂ ಮರ ಹತ್ತಿ ಹಲಸಿನ ಕಾಯಿ ಕೊಯ್ದು ಕೊಡುವವರು. ಕೆಲವೊಮ್ಮೆ ಅಣ್ಣನೇ ಏಣಿ ಹತ್ತಿ ಕೊಕ್ಕೆಯಿಂದ ಕೊಯ್ದು ಬೀಳಿಸುತ್ತಾನೆ.      ಆ ದಿನ ಅಲ್ಲೇ ಹತ್ತಿರ ಇರುವ ಚಿಕ್ಕಪ್ಪನ ಮನೆಯಿಂದ ತಂದ ಹಲಸಿನ ಕಾಯಿ ಅದು. ಅದನ್ನು ಅಲ್ಲಿಗೆ ಪ್ರತಿದಿನ ಬರುವ ದುರ್ಗಿ ಕೊಡಲಿಯಿಂದ ಭಾಗ ಮಾಡಿ ಕೊಟ್ಟಿದ್ದಳು. ಅದನ್ನು ಮೆಟ್ಗತ್ತಿಯಿಂದ ಅತ್ತಿಗೆ ಚಿಕ್ಕ ಪೀಸ್ ಮಾಡಿ ಅದರ ಸಾರೆ, ಗುಂಜು ತೆಗೆದು ಕತ್ತರಿಸಿ ಹಾಕುತ್ತಿದ್ದಳು. ಆಯಿ ಅದರ ಸೊಳೆ ಬಿಡಿಸಿ ಮುಟ್ಟಿಗೆ ಹಾಕುತ್ತಿದ್ದಳು. ನಂತರ ಅದನ್ನು ತಂದು ಹೊಳ್ಳಿಯ ಮೇಲೆ ಇಟ್ಟು ನಾನು, ಅಣ್ಣನ ಮಗಳು ಹರಿಣಿ, ಆಯಿ ಸೇರಿ ಬೇಳೆ ತೆಗೆದು ಬಿಡಿಸಿ ಪಾತ್ರೆಗೆ ಹಾಕಿದೆವು. ನಂತರ ಅತ್ತಿಗೆ ಎಣ್ಣೆ ಬಂಡಿ ಒಲೆಯ ಮೇಲಿಟ್ಟು ಒಲೆಯ  ಮುಂದೆ ಅಲ್ಲೇ ಮೆಟ್ಗತ್ತಿ ಹಾಕಿ ಕುಳಿತುಕೊಂಡು ಸೊಳೆ ಶಿಗಿದು ಬಟ್ಟಲಲ್ಲಿ ಹಾಕುತ್ತಾ ಕಾದ ಎಣ್ಣೆಯಲ್ಲಿ 2-3 ತಾಸು ಕರಿದಳು. ನಾನು, ಆಯಿ ಕೂಡಾ ಸ್ವಲ್ಪ ಶಿಗಿದು ಕೊಟ್ಟೆವು. ಶಿಗಿದ ಸೊಳೆಯನ್ನು ಎಣ್ಣೆಗೆ ಹಾಕಿ ಅದಕ್ಕೆ ಸ್ವಲ್ಪ ಉಪ್ಪುನೀರು ಹಾಕಿ ಗರಿಗರಿಯಾದ ಮೇಲೆ ತೆಗೆದ ನಂತರ ಅದಕ್ಕೆ ಖಾರ ಪುಡಿ ಉದುರಿಸಿ ಮತ್ತೆ ತಣಿಸಿ ಡಬ್ಬಿಯಲ್ಲಿ ತುಂಬುವವರೆಗೆ......  ಅಬ್ಬಬ್ಬಾ ಚಿಪ್ಸೇ.....