ಬ್ಲಾಗ್ ಬರೆಯದೇ ಸುಮಾರು ದಿನವಾಯ್ತು. ಇವತ್ತು ಬೆನ್ನಿನಲ್ಲಿ ಒಂದೇ ಜಾಗದಲ್ಲಿ ಸಣ್ಣ ನೋವು. ಕಿರಿಕಿರಿ. ವಾಯುಮುದ್ರೆ ೧೦ ನಿಮಿಷ, ಜೊತೆಗೆ ಪ್ರಾಣ ಮುದ್ರೆ ೭ ನಿಮಿಷ ಮಾಡಿದೆ. ಸ್ವಲ್ಪ ಕಡಿಮೆ ಆದಂತೆ ಅನಿಸಿತ್ತು. ಅದೇ ಅಪಾನವಾಯು ಮುದ್ರೆ ೧೫ ನಿಮಿಷ ಮಾಡಿ ಮತ್ತೆ ವಾಯು ಮುದ್ರೆ ೧೫ ನಿಮಿಷ, ಅಪಾನ ಮುದ್ರೆ ೧೦ ನಿಮಿಷ ಮಾಡಿದರೆ ೧೦೦% ನೋವು ಕಡಿಮೆ ಆಗುವ ನಂಬಿಕೆ ನನಗಿದೆ. ಆದರೆ ಒಮ್ಮೆಗೇ ಅಷ್ಟು ಬಿಡುವು ಮಾಡಿಕೊಳ್ಳಲು ಯಾಕೋ ಆಗಿಲ್ಲ. ಅಥವಾ ಅದಕ್ಕೂ ಆಲಸ್ಯ!
ನನಗೆ ಮುದ್ರೆಯಲ್ಲಿ ತುಂಬಾ ನಂಬಿಕೆ. ಆ ಕುರಿತು ದೊಡ್ಡ ಕತೆಯನ್ನೇ ಹೇಳುವುದಿದೆ.
ನನಗೆ ಇವತ್ತು ಈ ಬೆನ್ನು ನೋವಿಗೆ ಕಾರಣ ನನಗೆ ಗೊತ್ತು. ಅದು ಕಡ್ಲೆ ಉಸುಳಿ, ಬೆಳಿಗ್ಗೆ ಚಹಾ ಜೊತೆ ತಿಂದೆ. ಮಧ್ಯಾಹ್ನ ಸ್ವಲ್ಪ ತಿಂದೆ. ಮತ್ತೆ ಈಗ ಅದನ್ನೇ ತಿಂದು ಬಂದೆ! ಆದರೆ ಭಯವಿಲ್ಲ. ಯಾಕೆಂದರೆ ಕಡ್ಲೆಗೆ ತುಂಬಾ ನೀರು ಹಾಕಿ ಬೇಯಿಸಿ ನೀರು ಸೋಸಿ ಮಾಡಿದ್ದೆ. ಹಾಗಾಗಿ ಅದರ ವಾಯುಗುಣ ಸಾಕಷ್ಟು ಕಡಿಮೆ ಆಗಿರುತ್ತದೆ. ಹಿಂದಿನಬಾರಿ ಕೂಡ ಹೀಗೇ ತಿಂದಿದ್ದು. ತುಂಬಾ ತಿಂದರೂ ಏನೂ ಅಡ್ಡ ಪರಿಣಾಮ ಆಗಿಲ್ಲ. ಹೆಚ್ಚಾಗಿ ಪ್ರತಿ ಚೌತಿಗೆ ಇವರ ಗೆಳೆಯ ನಾಗರಾಜರಿಂದ ಅವರ ದೇವಸ್ಥಾನಕ್ಕೆ ಪೂಜೆಗೆ ಬಂದ ನೆನೆಸಿದ ಕಡ್ಲೆಯ ಕೊಡುಗೆ ಇದ್ದೇ ಇದೆ. ಅದು ೨-೩ ಕೆ.ಜಿ. ಇರುವುದರಿಂದ ಎಲ್ಲರಿಗೂ ಕೊಟ್ಟ ಮೇಲೂ ಮತ್ತೆ ವಾರಗಳ ಕಾಲ ದಿನವೂ ಸ್ವಲ್ಪ ಸ್ವಲ್ಪ ನಾವು ತಿನ್ನುವುದು ಇದ್ದಿದ್ದೇ. ಯಾಕೆಂದರೆ ಅದರ ಉಸುಳಿ, ಚೆನ್ನಾ ಮಸಾಲಾ, ಸಾರು, ದೋಸೆ ಎಲ್ಲ ತುಂಬಾ ರುಚಿಕರ. ಬೇಯಿಸಿ ನೀರು ತೆಗೆಯದೇ ತಿಂದಾಗ ನಮಗೆ ತುಂಬಾ ವಾಯು ಉಪದ್ರ ಆಗುತ್ತಿದ್ದ ಕಾರಣ ಬೇಯಿಸಿ ನೀರು ತೆಗೆದು ಉಪಯೋಗಿಸುವ ಈ ಉಪಾಯ ಕಂಡುಕೊAಡೆ.
ಈಗ ಬ್ಲಾಗ್ ಬರೆಯಲು ಮತ್ತೆ ನೆನೆಪಾದ ಕಾರಣವೆಂದರೆ ಕಸುವಿನ ಬಳ್ಳಿ. ‘ಕಸುವಿನ ಬಳ್ಳಿಗೆ ಕೈಮುಗಿದೆ’ ಅಂತ ಒಂದು ವಿಷಯ ಬರೆದಿದ್ದೆ. ಹೌದು ಕಡ್ಲೆ ಉಸುಳಿಯ ಜೊತೆ ನಮ್ಮ ಮನೆಯ ಹಿತ್ತಿಲ ಕಂಪೌAಡ್ ಗೋಡೆಯ ಮೇಲೆ ಸೊಂಪಾಗಿ ಬೆಳೆದ ಕಸುವಿನ ಬಳ್ಳಿ ಕಂಡೆ. ಅದನ್ನು ತಂದು ತೊಳೆದು ಜೀರಿಗೆ ಜೊತೆ ಜಜ್ಜಿ ನೀರುಹಾಕಿ ಕಿವುಚಿ ಸೋಸಿ ಕುಡಿದೆ. ಪರಿಣಾಮ ಮತ್ತೆ ಹೇಳುತ್ತೇನೆ.
ನಿನ್ನೆ ನನ್ನ ಹುಟ್ಟಿದ ದಿನ. ಆ ನೆನಪಿಗೆ ನಮ್ಮ ಮನೆಯ ಗುಡ್ಡದ ಜಾಗದಲ್ಲಿ ೪೦-೫೦ ಹೊಂಗೆ ಗಿಡಗಳನ್ನು ಮಗನ ನೆರವಿನೊಂದಿಗೆ ನೆಟ್ಟು ಬಂದೆ.
ನಮ್ಮ ಮನೆಯ ಅಂಗಳದಲ್ಲಿ ಹೆಬ್ಬಾರರು ರಸ್ತೆ ಬದಿಯಿಂದ ಕಿತ್ತು ತಂದು ನೆಟ್ಟ ಹೊಂಗೆ ಮರ ಬೆಳೆದು ನಿಂತು ಸಾವಿರಾರು ಗಿಡಗಳನ್ನು ಕೊಟ್ಟಿದೆ. ಹೆಬ್ಬಾವಿನಂತೆ ಕಾಣುವ ಕಾಂಡ ಹೊತ್ತ, ಕಡಿದಷ್ಟೂ ಅಲ್ಲೆಲ್ಲ ಮತ್ತೆ ಚಿಗುರೊಡೆಯುವ ಆ ಮರವನ್ನು ನೋಡುವುದೇ ಒಂದು ಹಬ್ಬ.....
ಇಂದಿನ ಇನ್ನೊಂದು ವಿಶೇಷ ಅಂದರೆ ಸಂಪಿಗೆ ಟೊಂಗೆ ಕಸಿ ಮಾಡಿದೆ. ಹಾಗೇ ಲಿಂಬೆ ಗಿಡದ ಕೊಂಬೆಯಿAದಲೂ ಕಸಿ ಮಾಡಿದೆ. ಅದು ಇನ್ನೆರಡು ತಿಂಗಳ ನಂತರ ಪರಿಣಾಮ ತಿಳಿಯುವುದು.
ಸಂಜೆ ಕಪ್ಪೆಕೆರೆ ಮಹಾಬಲೇಶ್ವರ ಹೆಗಡೆ ದಂಪತಿಗಳು ನಮ್ಮ ಮನೆಗೆ ಬಂದಿದ್ದರು. ಆಹಾರ, ಆರೋಗ್ಯ, ಆಚಾರ, ವಿಚಾರಗಳ ಚರ್ಚೆ ಮಾಡಿ ಖುಷಿಯಾಯ್ತು.........
೧೭-೯-೨೦೨೨
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್ಬುಕ್ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...




ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ