ಆಗೆಲ್ಲ ಅಮ್ಮ ಫೋನ್ ಮಾಡಿದಾಗ ‘ಅಪ್ಪನಿಗೆ ಹೇಳು’ ಅಂತ ಅನಾಯಾಸವಾಗಿ ನಾಲಿಗೆಯ ತುದಿಗೆ ಬರುತ್ತಿತ್ತು. ಅಪ್ಪ ಇಲ್ಲದೆ 5-6 ವರ್ಷವಾಗುತ್ತ ಬಂತು. ಆದರೆ ಅಪ್ಪ ಇನ್ನೂ ನನ್ನ ನೆನಪಿನ ನಂದಾದೀಪ.
ತನಗೆ
ಯಾವುದೇ ಆಧುನಿಕ ಸೌಲಭ್ಯ ಬಯಸದ, ನಮ್ಮ ಸುಖ-ದುಃಖದಲ್ಲಿ ಸಹಭಾಗಿಯಗಿರುವ - ಸದಾ ಸೈಕಲ್
ಮೇಲೆ ತಿರುಗುವ, ಇಂದೂ ಅಂದಿನ ಅದೇ ಉತ್ಸಾಹ, ಚಟುವಟಿಕೆ ಉಳಿಸಿಕೊಂಡಿರುವ - ಶಿಸ್ತಿನ
ಸಿಫಾಯಿ - ಅಪ್ಪನ ಗೆಳೆಯ
ನಮ್ಮ‘ರಾಮಣ್ಣ’(ಸಂಕೊಳ್ಳಿ ರಾಂಭಟ್ಟ)
ಅಪ್ಪ ಎತ್ತಿನಗಾಡಿಯಲ್ಲಿ; ಅವನಿಗೆ ಸದಾ ಬೆಂಗಾವಲಾಗಿರುತ್ತಿದ್ದ, ಇಂದೂ ನಮ್ಮ ಮನೆಯ ಹಿತೈಷಿ ಸದಸ್ಯನಾಗಿ ಬರುವ ಅಪ್ಪನ ಗೆಳೆಯ, ಸಹಚರ, ಸಹೋದರನಂತಿದ್ದ ‘ಸಂಕೊಳ್ಳಿ ರಾಂಭಟ್ಟ’ ಹಾಗೂ ಇತರ ಗೆಳೆಯರೊಡನೆ ಸಪ್ಪು, ದೆರಕು ತರಲು ಬೆಟ್ಟಕ್ಕೆ ಹೋಗುತ್ತಿದ್ದ. ಸದಾ ತಿರುಗಾಟ, ಕೆಲಸಗಳಿಂದ ಸುಸ್ತಾಗಿರುತ್ತಿದ್ದ ಅಪ್ಪನ ಕೆಂಪು ಕಣ್ಣು ನಮಗೆ ಭಯ ಹುಟ್ಟಿಸುತ್ತಿತ್ತು. ಮುಂಗೋಪಿಯಾದರೂ ಅಪ್ಪ ಒಂದು ದಿನವೂ ಹೆಂಡತಿ, ಮಕ್ಕಳಿಗೆ ಬೈಯ್ದು, ಹೊಡೆದು ಮಾಡಿದ ನೆನಪು ನಮಗಿಲ್ಲ. ಅವನಿಗೆ ಸಿಟ್ಟು ಬಂದರೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಇಲ್ಲವೆಂದರೆ ಒಂದು ಸಿಗರೇಟ್ ಸುಟ್ಟುಬಿಡುತ್ತಿದ್ದ ! ತನಗೆ ಎಷ್ಟೇ ಕಷ್ಟವಾದರೂ ಸರಿ ಮಕ್ಕಳು ಕಲಿಯುತ್ತೇವೆಂದಾಗ ಅಪ್ಪ ಬೇಡವೆನ್ನದೆ, ಕೇಳಿದಾಗ ಹಣ ಕೊಟ್ಟು ಮಕ್ಕಳ ಆಸೆ ನೆರವೇರಿಸಿದ್ದ. ಬೆಳೆದ ಎಲ್ಲ ಬೆಳೆ ಇನ್ನೂ ಕೈಗೆ ಬಂದಿರಲಿಲ್ಲ. ಇದ್ದ ಫಸಲಿಗೆ ಸಿಕ್ಕದ್ದೇ ಬೆಲೆಯಾದರೂ ಮಕ್ಕಳಿಗೆ ಕಷ್ಟದ ನೆರಳು ಸೋಕದಂತೆ ಬೆಳೆಸುವ ಆಸೆ ಅವನದಾಗಿತ್ತು.
ಹೀಗೆ ಮನೆ ಕಟ್ಟಲು; ಕೊಟ್ಟಿಗೆ, ತೋಟದ ಖರ್ಚುಗಳೊಂದಿಗೆ ದಾನ-ಧರ್ಮವನ್ನೂ ಮಾಡುತ್ತಿದ್ದ ಅಪ್ಪ, ಅವುಗಳಿಗಾಗಿ ಸಾಲವನ್ನೂ ಮಾಡಿಕೊಂಡಿದ್ದ. ಕಷ್ಟದಲ್ಲಿ ಹಣ ಕೊಟ್ಟವರಿಗೆ ತಿರುಗಿ ಹಣ ನೀಡಲು ತಡವಾದರೂ ಅವರ ಕಣ್ತಪ್ಪಿಸಿ ಎಂದೂ ತಿರುಗುತ್ತಿರಲಿಲ್ಲ. ಬದಲಾಗಿ ಕಷ್ಟದಲ್ಲಿ ನೆರವಾದವರನ್ನು ನೆನೆದು ; ಅವರನ್ನು ಮನೆಗೆ ಕರೆದು, ಸತ್ಕರಿಸುತ್ತಿದ್ದುದು ಅಪ್ಪನ ವಿಶೇಷ ಗುಣವಾಗಿತ್ತು. ಕೈಯಲ್ಲಿ ಹಣವಿದ್ದಾಗ ಅವರ ಋಣ ತಿರಿಸುತ್ತಿದ್ದ.
ತನ್ನ ಸಹೋದರರ ಮಕ್ಕಳು, ಊರಿನಲ್ಲಿರುವ ಯುವಕರು ಹೀಗೆ ಒಳ್ಳೆಯ-ಕಷ್ಟಪಟ್ಟು ದುಡಿಯುವ ಯುವಕರನ್ನು ಕಂಡರೆ ಅಪ್ಪನಿಗೆ ಅಭಿಮಾನವಿತ್ತು. ಸದಾ ಇನ್ನೊಬ್ಬರ ಖುಷಿ, ಒಳಿತನ್ನು ಆಶಿಸುತ್ತಿದ್ದ ಅಪ್ಪನದು ದಾನ ಮಾಡುವುದರಲ್ಲಿ ಎತ್ತಿದ ಕೈಯಾಗಿತ್ತು. ಲೈನ್ಮೆನ್, ಕೆಲಸಿ, ಪೋಸ್ಟಮನ್, ಫಾರೆಸ್ಟ್ಗಾರ್ಡ ಹೀಗೆ ಯಾರೇ ಬಂದರೂ ಅವರಿಗೆ ಕವಳಕ್ಕೆ ಎಲೆ, ಅಡಿಕೆ, ಆಗಾಗ ತೆಂಗಿನಕಾಯಿ ಕೊಡದೇ ಕಳುಹಿಸುತ್ತಿರಲಿಲ್ಲ. ಬಂದವರಿಗೆಲ್ಲ ಚಹಾ ಕೊಡುವುದು, ಅವರ ಜೊತೆ ತಾನೂ ಒಂದು ಗುಟುಕು ಚಹಾ ಕುಡಿಯುವುದು ಅವನ ದಿನಚರಿಯಂತಾಗಿತ್ತು. ಯಾವುದೇ ಕೆಲಸವಾದರೂ ಬಾಯಿಂದ ಹೊರ ಬಂದ ಮೇಲೆ ಅದು ಎಷ್ಟೇ ಕಷ್ಟವಾದರೂ ಅದನ್ನು ಮಾಡಲೇಬೇಕಿತ್ತು. ‘ಅಪ್ಪ ನಿನ್ನ ಅಳಿಯನಿಗೆ ಜೇನುತುಪ್ಪ ಬೇಕಂತೆ’ ಎಂದು ಸ್ವಲ್ಪ ಸೂಗುಟ್ಟಿದರೂ ಸಾಕು, ಅದು ತನ್ನಲ್ಲಿಲ್ಲದಿದ್ದರೂ ತನ್ನ ಗೆಳೆಯ, ಬೀಗ, ಸಹೋದರ ಯಾರಿಗಾದರೂ ಫೋನ್ ಮಾಡಿ ತರಿಸುತ್ತಿದ್ದ. ಅವನು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿರುವಾಗಲೇ ತನ್ನ ತಮ್ಮನ ಮಗ ಸುಬ್ಬನಿಂದ ಜೇನುತುಪ್ಪ ತರಿಸಿ ಅಳಿಯನಿಗೆ ಕೊಡಿಸುವ ವ್ಯವಸ್ಥೆ ಮಾಡಿದ್ದ ! ಹಾಸುವ ಕಂಬಳಿಯಿAದ ಹಿಡಿದು ಸೀಯಾಳ, ಸಣ್ಣ ಮೆಣಸಿನ ಗಿಡ ಅಥವಾ ಯಾವುದೇ ಬಳ್ಳಿ, ಗಿಡ, ತರಕಾರಿ ಬೀಜ.... ಹೀಗೆ ಅಪ್ಪನಿಗೆ ನಮಗೇನಾದರೂ ಬೇಕೆಂದು ನಾವು ಅಮ್ಮನಿಗೆ ಹೇಳಿದ್ದು ಕೇಳಿದರೂ ಸಾಕು, ಆತ ಅದನ್ನು ಒದಗಿಸುವುದು ಶತಸ್ಸಿದ್ಧ !
‘ನಮ್ಮ ಮನೆಯಲ್ಲಿ ಪಪ್ಪಾಯಿಗಿಡ ಹೂಬಿಟ್ಟು ಕಾಯಿ ಬಿಡುತ್ತಿಲ್ಲ’ ಯಾಕೆಂದು ಅಪ್ಪನಿಗೆ ಕೇಳಿದಾಗ ಅದರ ಬುಡದ ಸುತ್ತ ಸ್ವಲ್ಪ ಬೂದಿ ಹಾಕಲು ಅಪ್ಪ ಹೇಳಿದ್ದ. ಆಕಳಿಗೆ ಛವಿ ರೋಗದಿಂದ ಕಿವಿ, ಕುತ್ತಿಗೆ ಸುತ್ತ ಕೂದಲು ಉದುರಿದಾಗ ನಮ್ಮ ಮನೆಯ ಪಾಗಾರದ ಮೇಲಿರುವ ‘ಮಳ್ಳಮಲ್ಲಿಗೆ ಸೊಪ್ಪ’ನ್ನು ಆಕಳಿಗೆ ದಾಣಿಯ ಜೊತೆ ಕೊಡಲು ಹೇಳಿದ್ದ. ಆಕಳಕರು ಸತ್ತಾಗ ಹಾಲಿದ್ದರೂ ಕೊಡದೇ ಇದ್ದಾಗ 4-5 ದಿನ ಸ್ವಲ್ಪ ತೊಗರಿಬೇಳೆ ನೆನಸಿ ರುಬ್ಬಿ ಕೊಡಲು ಹೇಳಿದ್ದ. ನಮಗೆ ಹೊಟ್ಟೆಕಚ್ಚಿದರೆ ತಕ್ಷಣ ಬೆಲ್ಲ ತಿನ್ನಲು ಹೇಳುತ್ತಿದ್ದ. ಅಪ್ಪನ ಮದ್ದಿನ ಫಲಶ್ರುತಿಯಾಗಿ ಪಪ್ಪಾಯಿ ಚೆನ್ನಾಗಿ ಫಲ ಕೊಟ್ಟಿತ್ತು. ಆಕಳಿಗೆ ಛವಿ ಹೋಗಿತ್ತು. ಕರುವಿಲ್ಲದೇ ಆಕಳು ಚೆನ್ನಾಗಿ ಹಾಲು ಕರೆದಿತ್ತು. ನಮಗೆ ಹೊಟ್ಟೆಕಚ್ಚುವುದು ನಿಂತಿತ್ತು.......... ಹೀಗೇ ಹೆಚ್ಚಿನ ಸಮಸ್ಯೆಗಳಿಗೆಲ್ಲ ಅಪ್ಪನಲ್ಲಿ ನೈಸರ್ಗಿಕವಾದ ಪರಿಹಾರವಿರುತ್ತಿತ್ತು.
ನಾನು ಕನ್ನಡಶಾಲೆಗೆ ಹೋಗುವಾಗ ಅವರ ಪೆಟ್ಟಿಗೆ ಎಲ್ಲರೂ ಹೆದರಿ ನಡುಗುತ್ತಿದ್ದ ಬರ್ಗಿಯ ದೇವಣ್ಣ ನಾಯ್ಕ ಮಾಸ್ತರರಿಗೆ ‘ನನ್ನ ಮಗಳಿಗೆ ಹೊಡೆಯಬೇಡಿ’ ಎಂದು ಹೇಳಿ ಹೋಗುತ್ತಿದ್ದ. ಶಾಲೆಗೆ ಇಂಜೆಕ್ಷನ್ ಕೊಡಲು ಬರುತ್ತಿದ್ದ ಡಾಕ್ಟರ್ ಬಳಿ ನಾಯ್ಕ ಮಾಸ್ತರರು ನನ್ನ ಪಾಳಿ ಬಂದಾಗ ‘ಇವಳು ಅಪ್ಪನ ಮುದ್ದಿ ಮಗಳು. ಇವಳಿಗೆ ನೋವು ಮಾಡದೇ ನಿಧಾನವಾಗಿ ಇಂಜೆಕ್ಷನ್ ಕೊಡಿ’ ಎನ್ನುತ್ತಿದ್ದರು. ಅಪ್ಪ ದಿನಾಲೂ ನಾಲ್ಕು ಬಾರಿ ಶಾಲೆಗೆ ನಡೆದು ಹೋಗಿ ಬರಬೇಕು ತುಂಬಾ ದೂರ ಎಂದು ಶಾಲೆಯ ಪಕ್ಕ ಬಾಡಿಗೆಗಿದ್ದ ನಮ್ಮ ಶಾಲೆಯ ಶಿಕ್ಷಕರಾಗಿದ್ದ ಪಿ.ಆಯ್. ಭಟ್ ಹಾಗೂ ಸೀತಕ್ಕೋರ ಮನೆಯಲ್ಲಿ ನನಗೆ ಮಧ್ಯಾಹ್ನ ಊಟಕ್ಕೆ ಹೋಗಲು ಅನುಕೂಲ ಮಾಡಿಕೊಟ್ಟಿದ್ದ. ಅವರು ತುಂಬಾ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಅಪ್ಪ ಅವರಿಗೆ ಆಗಾಗ ಮನೆಯಲ್ಲೇ ಮಾಡಿದ ತುಪ್ಪ, ಬೆಳೆದ ಬೇರಹಲಸು, ಹಲಸು, ಮಾವು ಹೀಗೆ ಏನನ್ನಾದರೂ ಕಳಿಸುತ್ತಿದ್ದ. ಶಾಲೆಯ ಎಲ್ಲ ಪ್ರವಾಸಕ್ಕೂ ಕಳಿಸುತ್ತಿದ್ದ. ಕೇಳಿದ್ದನ್ನು ಕೊಡಿಸುತ್ತಿದ್ದ. ಹಣ ಬೇಕೆಂದಾಗ ‘ಕಿಸೆಯಲ್ಲಿದೆ. ತೆಗೆದುಕೊಂಡು ಹೋಗು’ ಎನ್ನುತ್ತಿದ್ದ! ಅಪ್ಪನಿಗೆ ಅಷ್ಟು ನಂಬಿಕೆ ಮಕ್ಕಳ ಮೇಲೆ!! ಏನನ್ನಾದರೂ ಬೇರೆಯವರಿಗೆ ಕೊಡು ಎನ್ನುತ್ತಿದ್ದನೇ ವಿನಃ ಅಪ್ಪ ಯಾವತ್ತೂ ಬೇರೆಯವರ ವಸ್ತುವಿಗೆ ಆಸೆ ಪಡುವ ಸಂದರ್ಭ ತಂದಿರಲಿಲ್ಲ. ನಮ್ಮ ಗೆಳತಿಯರನ್ನು ಯಾವತ್ತು ಮನೆಗೆ ಕರೆತಂದರೂ ಒಮ್ಮೆಯೂ ಬೇಸರ ವ್ಯಕ್ತಪಡಿಸಿಲ್ಲ. ಎಲ್ಲರಿಗೂ ಸದಾ ಸ್ವಾಗತ, ಸತ್ಕಾರ ಇದ್ದೇ ಇರುತ್ತಿತ್ತು.
ಮಕ್ಕಳಿಗೆ ಓದಲಿಕ್ಕೆ ಹಾಗೂ ಮನೆಗೆ ಬಂದವರಿಗೆ ಬೇಸರ ಬರದಿರಲೆಂದು ಓದಲು ಅಪ್ಪ ಬೇರೆ ಬೇರೆ ದಿನಪತ್ರಿಕೆ, ವಾರ ಪತ್ರಿಕೆ, ಪಾಕ್ಷಿಕ, ಮಾಸಿಕ ಪತ್ರಿಕೆಗಳನ್ನು ತರಿಸುತ್ತಿದ್ದ. ಆಗ ಮನೆಯಲ್ಲಿ ಟಿ.ವಿ. ಇರಲಿಲ್ಲ. ಇಂದು ಟಿ.ವಿ. ಬಂದಿದೆ. ‘ನಮಗೆ ಓದಲು ಸಮಯ ಇಲ್ಲ, ಹಣ ಕೊಡುವುದೂ ಕಷ್ಟವಾಗುತ್ತದೆ. ಎಲ್ಲ ಪತ್ರಿಕೆ ನಿಲ್ಲಿಸಿಬಿಡು’ ಎಂದು 10-12 ವರ್ಷಗಳ ಹಿಂದಯೇ ನಾವೆಷ್ಟು ಹೇಳಿದರೂ ಅಪ್ಪ ‘ಕಸ್ತೂರಿ’ ಪತ್ರಿಕೆ ಮಾತ್ರ ನಿಲ್ಲಿಸಿರಲಿಲ್ಲ. ಬಹುಶಃ ‘ಕಸ್ತೂರಿ’ ಮೊದಲು ಪೋಸ್ಟನಲ್ಲಿ ತರಿಸುತ್ತಿದ್ದ ನೆನಪು. ಆದರೆ ಇಂದು ನವಿಲಗೋಣ ಪೇಪರ್ ಏಜೆಂಟ್ ರಾಮಣ್ಣನಿಂದ ‘ಕಸ್ತೂರಿ’ ಸಂಚಿಕೆ ಮನೆಗೆ ತರಿಸುತ್ತಿದ್ದ. ಅಂದಿನಿAದಲೇ ಓದುವ ಹವ್ಯಾಸವಿದ್ದ ನಾನು ಹಳೆಯ(10-15 ವರ್ಷ ಹಿಂದಿನ) ಕಸ್ತೂರಿಗಳನ್ನೆಲ್ಲ ಎಸೆಯಲು ಮನಸ್ಸಾಗದೇ ನನಗೆ ಬೇಕಾದ ಬರಹ, ಪುಸ್ತಕ ವಿಭಾಗಗಳನ್ನೆಲ್ಲ ಕತ್ತರಿಸಿಟ್ಟಿದ್ದನ್ನು ಇತ್ತೀಚೆಗೆ ನನ್ನ ಸಂಗ್ರಹದಲ್ಲೇಲ್ಲೋ ಕಂಡಿದ್ದೆ ! ಅಪ್ಪ ತೀರಿಕೊಂಡಾಗ ತವರಿನಲ್ಲಿ 8-10 ದಿನ ಉಳಿದಿದ್ದ ನಾನು ಅಲ್ಲಿಗೆ ಬರುವ ‘ಕಸ್ತೂರಿ’ ಓದಿದ್ದೆ. ಇನ್ನೂ ಹೆಚ್ಚೆಚ್ಚು ಸಂಗ್ರಹಯೋಗ್ಯ ಅಂಕಣ, ಬರಹಗಳಿಂದ ತುಂಬಿರುವ ಕಸ್ತೂರಿ ನೋಡಿ ಅಪ್ಪನ ನಿರ್ಧಾರ ಸಾರ್ಥಕ ಎನಿಸಿತ್ತು.
ಅಪ್ಪನ ನೆನಪು ಬರೆಯುತ್ತ ಹೋದರೆ ತುಂಬಾ ಇದೆ......
ಆಯಿ ಶಶಿಕಲಾ, ಹಿರಿಮಗಳು ಸರಸ್ವತಿ ಕೊನೆಯವರೆಗೂ ಅವನ ಪಕ್ಕದಲ್ಲಿದ್ದು ಸೇವೆ ಮಾಡಿದ್ದರು. ಹಿರಿಮಗ ದತ್ತಾತ್ರಯ ಮನೆ, ತೋಟದ ಕೆಲಸದೊಂದಿಗೆ ಸದಾ ಅಪ್ಪನ ಸೇವೆಗೆ ಸಿದ್ಧನಿರುತ್ತಿದ್ದ. ಸದಾ ಪಾದರಸದಂತೆ ಓಡಾಡುತ್ತಿರುವ ಸೊಸೆ ವಿದ್ಯಾ ; ಮಾವ ಆಸ್ಪತ್ರೆಯಲ್ಲಿದ್ದಾಗ ಮನೆಯಲ್ಲಿ ಒಬ್ಬಳೇ ಇದ್ದು ಕೊಟ್ಟಿಗೆ, ಮನೆ, ತೋಟ; ಮಕ್ಕಳಾದ ಹರ್ಷ-ಹರಿಣಿ, ಅವರ ಶಾಲೆ, ಆರೋಗ್ಯ ಎಲ್ಲ ಕೆಲಸಗಳನ್ನೂ ನಿಭಾಯಿಸುತ್ತ ಇಂದಿಗೂ ಗಂಡನಿಗೆ ಸಹಕಾರಿಯಾಗಿರುವ ಸದ್ಗೃಹಿಣಿ. ಸದಾ ಅಪ್ಪ - ಆಯಿಯ ಬಗ್ಗೆ ಯೋಚಿಸುತ್ತಿರುವ ಇನ್ನೊಬ್ಬ ಮಗ ರವಿ ಬೆಂಗಳೂರಿನಿAದ ಪದೇ ಪದೇ ಬಂದು ಅಪ್ಪನ ಆರೋಗ್ಯ ವಿಚಾರಿಸುತ್ತ ಒಂದೆರಡು ದಿನ ಉಳಿದಿದ್ದ. ಒಮ್ಮೆ ಹೆಂಡತಿ ಕಲಾ, ಮಗಳು ರಮ್ಯಳೊಟ್ಟಿಗೂ ಬಂದು ಉಳಿದು ಅಪ್ಪನ ಸೇವೆ ಮಾಡಿ ಮತ್ತೆ ಕೆಲಸಕ್ಕೆ ಹಿಂದಿರುಗಿದ್ದ.
ಹೀಗೇ ಅಪ್ಪನಿಗೆ ಸುತ್ತಲೂ ಸೇವೆ ಮಾಡಲು ಜನರಿದ್ದರೂ ಆತ ಯಾರಿಂದಲೂ ಸೇವೆ ಮಾಡಿಸಿಕೊಳ್ಳಲು ಬಯಸಿರಲಿಲ್ಲ. ಎಂದೂ ತನ್ನಿಂದಾಗಿ ಬೇರೆಯವರಿಗೆ ತೊಂದರೆಯಾಗಬಾರದೆAಬುದು ಅವನ ಬಯಕೆಯಾಗಿತ್ತು. ನಮಗೆ ಇನ್ನೂ ಸೇವೆ ಮಾಡಬೇಕೆಂಬ ಹಂಬಲವಿರುವಾಗ ನಮ್ಮ ಹಂಬಲವನ್ನು ಎಂದು ನಿರೀಕ್ಷಿಸದ - ಯಾರಿಗೂ ಕಷ್ಟ ಕೊಡಲು ಆಶಿಸದ ನಮ್ಮ ಪ್ರೀತಿಯ ಅಪ್ಪ ; ತಾನು ಪ್ರೀತಿಸಿದ ಭೂಮಿ ತಾಯಿಯ ಮಡಿಲು ಸೇರಿ ನಮ್ಮ ಪಾಲಿಗೆ ಇನ್ನಿಲ್ಲವಾಗಿ ವರ್ಷಗಳು ಉರುಳಿತು......
ದೂರದ ಗುಲ್ಬುರ್ಗಾದಲ್ಲಿ ‘ಸಂಗಮೇಶ್ವರ ಮಹಿಳಾ ಮಂಡಳದ’ ವತಿಯಿಂದ ‘ಸಾಹಿತಿಯೊಂದಿಗೆ ಸಂಜೆ’ ಕಾರ್ಯಕ್ರಮ ಏರ್ಪಾಡಾಗಿತ್ತು. ಅಲ್ಲಿ ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರ ಅತಿಥಿಯಾಗಿ ಆಮಂತ್ರಿತರಾಗಿದ್ದರು. ‘ಅವಿಭಕ್ತ ಕುಟುಂಬ’ದ ಕುರಿತು ಚರ್ಚೆ ನಡೆದಿತ್ತು. ಕೊನೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಅಪೂರ್ವ ಸಾಹಿತಿ, ನಿವೃತ್ತ ಪ್ರಾಂಶುಪಾಲ ಸ್ವಾಮಿರಾವ್ ಕುಲಕರ್ಣಿ ಮಾತನಾಡುತ್ತ ನಮ್ಮೂರಿಗೆ ಬಂದ ವಿಷಯ ನೆನಪಿಸಿಕೊಂಡರು. ಅವರು ನನ್ನ ತಂದೆಯ ಬಳಿ - ‘ನಿಮ್ಮೂರು, ನಿಮ್ಮ ಮನೆ ಪರಿಸರ ತುಂಬ ಚೆನ್ನಾಗಿದೆ. ನಮ್ಮಂತಹ ಸಾಹಿತಿಗಳಿಗೆ ಕುಂತು ಬರೆಯಲು ಅದ್ಭುತ ತಾಣ’ ಎಂದು ಹೇಳಿದರಂತೆ. ಆಗ ಅಪ್ಪ ‘ಏನೂ ತೊಂದ್ರೆ ಇಲ್ಲ. ನಮ್ಮ ಮನೆಯಲ್ಲಿ ಒಂದು ವಾರ ಆರಾಂ ಉಳಿದು ಹೋಗ್ರಿ’ ಎಂದರು. ‘ಅವರಲ್ಲಿ ಸ್ವಲ್ಪವೂ ನಾಟಕೀಯತೆ, ತೋರಿಕೆ ಇರಲಿಲ್ಲ, ಸಾದಾ ಸೀದಾ ಮನುಷ್ಯ ಅನಿಸಿತು’ ಎಂದು ಸ್ವಾಮಿರಾವ್ ಕುಲಕರ್ಣಿಯವರು ಸಮಾರಂಭದಲ್ಲಿ ನನ್ನ ಅಪ್ಪನನ್ನು ತುಂಬ ನೆನಪಿಸಿಕೊಂಡರು. ಅಪ್ಪನ ಬಗ್ಗೆ ತುಂಬ ಹೆಮ್ಮೆ ಎನಿಸಿತು.
| ಅಪ್ಪನ ಸುಂದರ ಸಂಸಾರ..... |
ಹೀಗೇ ಹಳ್ಳಿಯ ಮೂಲೆಯಲ್ಲಿ ಉಳಿದು ; ಕಷ್ಟಪಟ್ಟು ದುಡಿದು, ನೆಮ್ಮದಿಯ ಬದುಕು ಸಾಗಿಸುತ್ತ ಕೊನೆಯವರೆಗೂ ಹತ್ತಿರ ಬಂದವರೆಲ್ಲರ ನೆನಪಾಗಿ ಉಳಿದು ; ಹೆಂಡತಿ - ಮಕ್ಕಳ, ಮನೆ ಮಂದಿಯ, ಎಲ್ಲ ಬಂಧುಗಳ ಪ್ರೀತಿ ; ಮೊಮ್ಮಕ್ಕಳ ಅಕ್ಕರೆಯ ಸವಿಯುಂಡು ಇಂದಿಗೂ, ಎಂದೆAದಿಗೂ ನೆನಪಿನ ‘ನಂದಾದೀಪ’ವಾದ ಪ್ರೀತಿಯ ಅಪ್ಪನಿಗೆ ನನ್ನ ಪುಟ್ಟ ನುಡಿನಮನ........
- ಶ್ರೀಮತಿ ರೇಖಾ ಕೆ. ಹೆಬ್ಬಾರ, ಕರ್ಕಿ, ಹೊನ್ನಾವರ

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ