ಅಂದು ಬೆಳಿಗ್ಗೆ ಆಫೀಸಿಗೆ ಹೋದಾಗಿಂದ ಹೊಟ್ಟೆಯಲ್ಲಿ ಏನೋ ಸಂಕಟ. ಚಿಕ್ಕವಳಿರುವಾಗ ಆಗಾಗ ಇದೇ ರೀತಿ ಆಗುತ್ತಿದ್ದುದು ನೆನಪಾಯಿತು. ಅತಿಯಾಗಿ ಪೆಪ್ಪರಮೆಂಟು, ಸಕ್ಕರೆ, ಬೆಲ್ಲದಂತ ಸಿಹಿ ತಿಂದು ಹೊಟ್ಟೆನೋವು ಎಂದಾಗ ಆಯಿ, ‘ಹೇಳಿದಮಾತ ಕೇಳದೆ ಸಿಹಿ ತುಂಬಾ ತಿಂದರೆ ಹೊಟ್ಟೆಯಲ್ಲಿ ಹುಳವಾಗಿ ಅದು ಹೀಂಗಾಗ್ತು. ‘ಹೊಟ್ಟೆಕಚ್ಚಣ’ ಬತ್ತು’ ಎಂದು ಹೇಳುತ್ತಿದ್ದಳು. ಅಂತೂ ಬಹಳ ವರ್ಷಗಳ ನಂತರ ಬಂದು; ಬಾಲ್ಯದ ದಿನಗಳನ್ನು ನೆನಪಿಸಿತ್ತು ಆ ‘ಹೊಟ್ಟೆ ಕಚ್ಚಣ’ !
ಮಧ್ಯಾಹ್ನವಾದಂತೆಲ್ಲ ಜಾಸ್ತಿಯೇ ಆಯಿತು. ಊಟ ಮಾಡಿದರೆ ಸರಿಹೋಗಬಹುದು ಎಂದು ಊಟ ಮಾಡಿದೆ. ಏನೂ ಪರಿಣಾಮವಿಲ್ಲ, ಅದರ ಪಾಡಿಗೆ ಅದು ಮುಂದುವರಿದಿತ್ತು.
ನಮ್ಮ ಪಕ್ಕದಮನೆ ಅಪ್ಪಚ್ಚಿ ಮಗಳು ಅರುಂಧತಿ ಗುಜರಾತಿನಿಂದ ಬಂದಿದ್ದಳು.
ಈ ಸಲ ಬಂದಾಗ ಅರುಂಧತಿಯನ್ನು ಮಾತಾಡಿಸಲು ಹೋದೆ. ‘ಬಾರೆ ಇಲ್ಲೇ ಕೂತ್ಕೊಳ್ಳೋಣ’ ಎಂದು ಮೆಟ್ಟಿಲಮೇಲೆ ಕುಳಿತೆ. ಆಕೆ ‘ನನಗೆ ಕೆಳಗೆ ಕೂರುದು ಕಷ್ಟ. ಸೊಂಟ ಹಿಡಿದಿದೆ, ನೋವು. ನೀನೇ ಇಲ್ಲಿ ಬಾ. ಮಂಚಕ್ಕೆ’ ಎಂದಳು. ಅಭ್ಯಾಸಬಲದಿಂದ ನಾನು, ‘ಕಸುವಿನ ಬಳ್ಳಿ ಕಷಾಯಮಾಡಿ ಕುಡಿ. ಜೀರಿಗೆ ನೀರು ಮಾಡಿ ಕುಡಿ’ ಎಂದು ಮಾತು ಮುಗಿಸುವ ಮುಂಚೆಯೇ ಅವಳು, ‘ಏ, ಬಿಡೆ. ಆ ನೋವ ಯಾರ ಕೇಳ್ತ ? ಅದರಪಾಡಿಗೆ ಅದು. ನನ್ನ ಪಾಡಿಗೆ ನಾನು. ನಾನು ಮೇಲೋ ಅದು ಮೇಲೋ ನೋಡೋಣ’ ಎಂದಳು ! ಅವಳು ಬಂದರೆ ನನಗೇನೋ ಸಂತಸ. ತುಂಬಾ ಚುರುಕು ಅವಳು. ಅವಳ ಮಗಳು ಅಕ್ಷತಾ ಕೂಡಾ ಅಷ್ಟೇ ಚೂಟಿ. ಕೆಲಸವನ್ನೆಲ್ಲ ಬೇಗ ಮುಗಿಸಿಬಿಡುವ ಅರುಂಧತಿಗೆ ಸುದ್ದಿ ಹರಡಿಕೊಂಡು ಕೂಡುವುದೆಂದರೆ ತುಂಬಾ ಖುಷಿ. ಅಡುಗೆ, ಆರೋಗ್ಯ, ತಿಂಡಿ, ಬಂಗಾರ, ಶಾಲೆ ; ಈಗಿನ ಕೆಲವು ಹುಡುಗಿಯರ ಅಸಭ್ಯಬಟ್ಟೆ, ಅದಕ್ಕೆ ಮರುಳಾಗುವ ಗಂಡುಮಕ್ಕಳು..... ಹೀಗೇ ನಮ್ಮಿಬ್ಬರ ಸುದ್ದಿ ಇಲ್ಲಿಂದ ದಿಲ್ಲಿಯವರೆಗೂ ನಡೆದಿರುತ್ತದೆ !
ನಿಜ. ಅರುಂಧತಿಯ ಅಂಬೋಣದAತೆ ಈ ಹೊಟ್ಟೆಯ ಬಗ್ಗೆ ತುಂಬಾ ಯೋಚಿಸುತ್ತಿದ್ದರೆ ಕೆಲಸವಾಗಲ್ಲ ಎಂದುಕೊAಡು ಮತ್ತೆ ಆಫೀಸ್ಗೆ ಹೋಗಲು ಅಣಿಯಾದೆ. ಅಡಿಗೆಮನೆ ಬಾಗಿಲು ಹಾಕಲು ಬಂದವಳು ಟೇಬಲ್ಮೇಲೆ ಬೆಲ್ಲದ ಡಬ್ಬಿ ಕಂಡೆ. ಅರೆ ! ಅಪ್ಪನ ನೆನಪಾಯಿತು. ಇಷ್ಟುಹೊತ್ತು ಹೊಳೆದೇ ಇಲ್ಲವಲ್ಲ ಅಂದುಕೊAಡೆ. ೨-೩ ಚಮಚ ಬೆಲ್ಲ ತಿಂದು ಹೋದೆ.
‘ಹೇ ನಿನ್ನ ! ಹೊಟ್ಟೆಕಚ್ಚಿದರೆ ಬೆಲ್ಲ ತಿಂತಾರಾ ?’ ಎಂದು ನನ್ನವರು ನಗುತ್ತಿದ್ದರು. ‘ನನ್ನಪ್ಪನ ಫಸ್ಟಕ್ಲಾಸ್ ಔಷಧ ಅದು’ ಎಂದೆ ಅಪ್ಪನ ಬಗ್ಗೆ ಹೆಮ್ಮೆಯಿಂದ.
ದಾರಿಯ ತುಂಬಾ ಅಪ್ಪನದೇ ನೆನಪು......
ನನ್ನ ಅಪ್ಪನಿಗೆ ಯಾವಾಗಲೂ ಸಿಹಿ ಇಷ್ಟ. ಆಯಿ ಸಿಹಿ ತಿನ್ನೋದೇ ಕಡಿಮೆ. ಆದರೂ ಹೊಟ್ಟೆಯಲ್ಲಿ ಹುಳ ಆದರೆ ಎಂಬ ಹೆದರಿಕೆಗೆ ವಾರಕ್ಕೊಮ್ಮೆ ಕಹಿ ಕಷಾಯ, ಕುಟಜಾರಿಷ್ಟ ಎಂಬ ಔಷಧ, ತಲೆಸುತ್ತಿದರೆ ನಿಂಬೆರಸ-ಉಪ್ಪು-ನೀರು; ಊಟಕ್ಕೆ ಮಾಚಿಪತ್ರೆ ತಂಬ್ಳಿ, ಗದುಗನ ಸೊಪ್ಪಿನ ತಂಬ್ಳಿ, ದಾಳಿಂಬೆಕುಡಿ ತಂಬ್ಳಿ, ಮಾವಿನಕೂಗ್ಲೆ ತಂಬ್ಳಿ...... ಹೀಗೇ ಏನಾದರೂ ಮಾಡುತ್ತಲೇ ಇರುತ್ತಿದ್ದಳು. ಕಹಿಕಷಾಯಕ್ಕೆ ಯರ್ಯಾರಿಂದಲೋ ಕೊಡಸಿಗನ ಚಕ್ಕೆ, ಹಾಲೆಚಕ್ಕೆ; ಪಿತ್ತಕ್ಕೆ ತಂಬ್ಳಿಗೆ ಬಡಗಣಿಚಕ್ಕೆ, ಉಪ್ಪಿನಭರಣಿಯಲ್ಲಿ ನಿಂಬೆಸೊಟ್ಟು.... ಎಲ್ಲ ಸಂಗ್ರಹಿಸಿಡುತ್ತಿದ್ದಳು. ಬೆಲ್ಲ, ಸಕ್ಕರೆ ಪ್ರಿಯನಾದ ಅಪ್ಪ ಇವೆಲ್ಲದರಿಂದ ದೂರ. ‘ನೀನು ಏನೇ ಮಾಡ್ಕೊ. ನಿನ್ನ ಮಕ್ಕಳಿಗೆ ಕೊಡು. ನನಗೆ ಹೊಟ್ಟೆಕಚ್ಚಿದರೆ ಬೆಲ್ಲ ತಿಂದ್ರೆ ಹೋಗ್ತು’ ಎನ್ನುತ್ತಿದ್ದ.
ಬೆಳಿಗ್ಗೆ ಎದ್ದು ಮುಖತೊಳೆದು ದೇವರಿಗೆ ಕೈಮುಗಿದು ಬಂದು, ಒಳಕಲ್ಲ ಕಟ್ಟೆಯ ಮೇಲೆ ಕುಳಿತುಕೊಂಡು ಬೆಲ್ಲ ಬಾಯಿಗೆ ಹಾಕಿಕೊಂಡು ದೊಡ್ಡ ಕೌಳಿಗೆಯಲ್ಲಿ ಗಟಗಟನೆ ನೀರು ಕುಡಿಯುತ್ತಿದ್ದ ಅಪ್ಪನ ಆ ಚಿತ್ರ ಎಂದೂ ಮಾಸದು. ಊಟಕ್ಕೆ ಕುಳಿತಾಗ ಮೊದಲು ಉಪ್ಪು-ನೀರು ಸೇರಿಸಿ ೪-೫ ತುತ್ತು ಊಟ ಮಾಡಿದ ಎಂದರೆ ಅವನಿಗೆ ಪಿತ್ತವಾಗಿದೆ ಎಂದು ನಾವೇ ಅಂದುಕೊಳ್ಳಬೇಕಿತ್ತು ! ಅವನಿಗೆ ಅದೇ ದಿವ್ಯೌಷಧ !!
ಅಪ್ಪ ನಮ್ಮ ಮನೆಗೆ ಬಂದಾಗ ಕೇಳಿದ್ದೆ, ‘ಈ ಪಪ್ಪಾಯಿ ಮರ ತುಂಬಾ ಹೂ ಬಿಟ್ಟಿದೆ. ಒಂದೂ ನಿಲ್ಲೋಲ್ಲ, ಯಾಕೆ?’ ಎಂದೆ. ‘ಒಲೆಯಲ್ಲಿರೋ ಬೂದಿ ಹಾಕು’ ಎಂದು ಅಪ್ಪನ ಉತ್ತರ ಸಿದ್ಧವಾಗಿತ್ತು. ‘ಆಕಳ ಕರುವಿಗೆ ಕೂದಲು ಉದುರುತ್ತಿದೆ ?’ ಎಂದಾಗ ‘ಅದು ಛವಿ. ಈ ಮಳ್ಳಮಲ್ಲಿಗೆ ಸೊಪ್ಪನ್ನು ಸಣ್ಣದಾಗಿ ಕೊಚ್ಚಿ ಹಿಂಡಿಯಲ್ಲಿ ಬೆರೆಸಿ ಕೊಡು’ ಎಂದು ಅಲ್ಲೆ ಕಲ್ಲಿನ ಪಾಗಾರಕ್ಕೆ ಬೆಳೆದಿದ್ದ ಸೊಪ್ಪನ್ನು ತೋರಿಸಿದ್ದ ! ‘ಆಕಳಿಗೆ ಭೇದಿಯಾದರೆ ಈ ಸೊಪ್ಪನ್ನು ಹಾಕು’ ಎಂದು ಸಣ್ಣೆಲೆ ಸೊಪ್ಪಿನ ಗಿಡ ತೋರಿಸಿದ್ದ. ಅಪ್ಪನ ಔಷಧಗಳು ಎಲ್ಲಕ್ಕೂ ನಾಟಿದ್ದವು. ಬೂದಿ ಹಾಕಿದ ಮೇಲೆ ಪಪ್ಪಾಯಿ ಹೂಗಳು ಮತ್ತೆ ಉದುರಲಿಲ್ಲ, ಆಕಳಿಗೆ ೫-೬ ದಿನ ಮಳ್ಳಮಲ್ಲಿಗೆ ಸೊಪ್ಪು ಹಾಕಿದಾಗ ಛವಿ ಮಾಯವಾಗಿತ್ತು. ಆಕಳಿಗೆ ಬೇಧಿಯಾದಾಗಲೂ ಸಣ್ಣೆಲೆ ಸೊಪ್ಪಿನ ಪ್ರಯೋಗ ಫಲ ನೀಡಿತ್ತು.
ಒಟ್ಟಿನಲ್ಲಿ ಅಪ್ಪ ನಿಸರ್ಗಪ್ರಿಯನಾಗಿದ್ದ. ಆಸಕ್ತರಿಗೆ ನಮ್ಮ ಪರಿಸರದಲ್ಲೆ ಸಿಗುವ ಬಹಳಷ್ಟು ಮದ್ದುಗಳ ಬಗ್ಗೆ ಮಾರ್ಗದರ್ಶಕನಾಗಿದ್ದ. ನಾವು ಚಿಕ್ಕವರಿದ್ದಾಗ ಫೋನು, ಮೊಬೈಲ್, ಟಿ.ವಿ. ಯಾವುದೂ ಇಲ್ಲದೇ ನಿಜಕ್ಕೂ ನಾವು ಪುಣ್ಯವಂತರಾಗಿದ್ದೆವು ! ಶಾಲೆಯಿಂದ ಬಂದ ಮೇಲೆ - ರಜಾ ದಿನಗಳಲ್ಲಿ ; ಅಪ್ಪನ ಜೊತೆ, ಕೆಲಸದವರ ಜೊತೆ ತೋಟ, ಕೊಟ್ಟಿಗೆ, ಕಬ್ಬಿನ ಗದ್ದೆ, ಭತ್ತದ ಗದ್ದೆ, ಗೇರುಬೆಟ್ಟ ತಿರುಗುವುದು ; ಹಾಳೆಯಲ್ಲಿ ನೀರುತೋಯುವಾಗ ನೀರವಳೆಯಲ್ಲಿ ಆಡುವುದು ; ಕರೆಂಟ್, ಮಿಶನ್ ರಿಪೇರಿ ಮಾಡುವಾಗ ಕುತೂಹಲದಿಂದ ನೋಡುವುದು....... ಹೀಗೆ ಎಲ್ಲೆಂದರಲ್ಲಿ ತಿರುಗುತ್ತ ಅವರು ಚರ್ಚಿಸುತ್ತಿದ್ದ ಎಲ್ಲ ಗಿಡ, ಮರ, ಪಕ್ಷಿ, ಪ್ರಾಣಿ, ಅವುಗಳ ಚಲನವಲನಗಳ ಎಷ್ಟೋ ವಿಷಯ ಕಿವಿಗೆ ಬೀಳುತ್ತಿತ್ತು. ಅಲ್ಲಿ ಅನಾಯಾಸವಾಗಿ ಎಷ್ಟೋ ಮಾಹಿತಿಗಳು ನಮಗೆ ಬಳುವಳಿಯಾಗಿ ಬಂದಿತ್ತು - ಇಂದಿನ ಇಂಟರ್ನೆಟ್, ಮೊಬೈಲ್ ಗೇಮ್, ಫೇಸ್ಬುಕ್, ಟ್ವಿಟ್ಟರ್, ವ್ಯಾಟ್ಸಪ್ಗಳಂತೆ...........
ನಿಜ, ಯಾವುದೇ ಔಷಧ-ಉಪಚಾರಗಳಿಲ್ಲದೆ ಸೇರಿದ್ದನ್ನು ತಿಂದು ಕೆಲಸ ಮಾಡಿ ಜೀರ್ಣಿಸಿಕೊಳ್ಳುತ್ತದ್ದ ಅಪ್ಪನಿಗೆ ಇರುವ ೭೫ ವರ್ಷಗಳ ಕಾಲ ಶುಗರ್, ಬಿ.ಪಿ. ಯಾವುದೂ ಹತ್ತಿರ ಸುಳಿದಿರಲಿಲ್ಲ. ‘ಎತ್ತಿನಗಾಡಿ ತೆಗದುಕೊಂಡು ಬೆಟ್ಟಕ್ಕೆ ಸಪ್ಪು, ದೆರಕು ತರಲು ಹೋದಾಗ ಒಂದು ಸಲ ಮರದಿಂದು ಬಿದ್ದು ಬೆನ್ನು, ಸೊಂಟ ಎಲ್ಲ ನೋವಾಗಿತ್ತು. ಆ ನೋವು ಈಗ ಆಗಾಗ ಕೆಣಕ್ತು’ ಎಂದು ಆಯಿ ಹೇಳುತ್ತಿದ್ದಳು. ಅಪ್ಪ ಎಷ್ಟೇ ನೋವಾದರೂ ಮುಸುಕುಹಾಕಿ ಮಲಗಿಬಿಡುತ್ತಿದ್ದ. ಏನೇ ಕೇಳಿದರೂ ಹೇಳುತ್ತಿರಲಿಲ್ಲ. ನಿರಾಹಾರನಾಗಿರುತ್ತಿದ್ದ. ಒಂದು ಇಡೀದಿವಸ ಮಲಗಿದರೆ ಅದರಿಂದಲೇ ಅವನಿಗೆ ಸಾಕಷ್ಟುಸಲ ಆರಾಮಾಗುತ್ತಿತ್ತು. ಪದೇಪದೇ ಹೀಗಾದಾಗ ಒತ್ತಾಯದಿಂದ ಹುಬ್ಬಳ್ಳಿಗೆ ಹೋಗಿ ಸ್ಕಾನಿಂಗ್ ಮಾಡಿಸಿದರು. ಅಪ್ಪನಿಗೆ ಕಿಡ್ನಿ ಸಮಸ್ಯೆ ಇರುವದು ಗೊತ್ತಾಗಿತ್ತು. ಆಗ
ಮಿಲಿಟರಿಯಲ್ಲಿದ್ದ ಅಪ್ಪನ ತಮ್ಮ ಹೇಳಿದ್ದ, ‘ಗಪ್ಪು, ದಿನಾಲೂ ಬೆಳಿಗ್ಗೆ ಖಾಲಿಹೊಟ್ಟೆಗೆ ಚೆನ್ನಾಗಿ ಕುದಿಸಿ ಬತ್ತಿಸಿದ ಚಹಾ ಡಿಕಾಕ್ಷನ್ ೧-೨ ಚಮಚ ಕುಡಿ. ಕಿಡ್ನಿ ತೊಂದರೆ ಕಡಿಮೆಯಾಗುತ್ತೆ’ ಎಂದಿದ್ದ. ಅದರಂತೆ ಮಾಡಿದ ಅಪ್ಪ ಎಷ್ಟೋ ದಿನ ಆರಾಮಾಗಿದ್ದ. ಡಾಕ್ಟರ್ರಿಂದ ಎಷ್ಟೇ ಔಷಧ ತಂದರೂ
ತನ್ನದೇ ಔಷಧ ನೆಚ್ಚಿಕೊಂಡಿದ್ದ ಅಪ್ಪ ಯಾರು ಹೇಳಿದರೂ ಕೇಳುತ್ತಿರಲಿಲ್ಲ. ಅವನೇ ಅವನಿಗೆ ವೈದ್ಯನಾಗಿದ್ದ.
ಅಪ್ಪನ ಹಠ ನೋಡಿದಾಗ ಅಜ್ಜಿ ಹೇಳಿದ್ದು ನೆನಪಾಗುತ್ತಿತ್ತು, ‘ನಿನ್ನಪ್ಪ ಪ್ರಾಯದಲ್ಲಿದ್ದಾಗ ಎಲ್ಲೋ ಮದುವೆಗೆ ಹೋಗಿದ್ದ. ಬಹಳಷ್ಟು ಜನ ಸೇರಿದ್ದ ಅಲ್ಲಿ ಗುಂಡುಗುAಡಗೆ ಬೆಳ್ಳಗಿದ್ದ ದೊಡ್ಡ ಕುಂಕುಮದ ನಿನ್ನ ಆಯಿಯನ್ನು ನೋಡಿ, ಅವಳು ಯಾರು ಎಂದು ತಿಳಿದುಕೊಂಡು ; ಅರ್ಜೆಂಟಾಗಿ ಜಾತಕ ತರಿಸಿಕೊಂಡು ಮದುವೆಯಾದ ಹಠಮಾರಿ’ ಎಂದಿದ್ದಳು. ಹೀಗೇ ಮಕ್ಕಳಮೇಲಿನ ಪ್ರೀತಿ, ನಂಬಿಕೆ; ತಪ್ಪು ಕಂಡಲ್ಲಿ ಖಂಡಿಸುವ ರೀತಿ; ಆದರಾತಿಥ್ಯಗಳಿಂದ, ತನ್ನ ನಡತೆಯಿಂದ ದಿನನಿತ್ಯದ ಬದುಕಿಂದಲೇ ನಮಗೆ ಶಿಕ್ಷಕನಾಗಿದ್ದ ಅಪ್ಪ ‘ಶಿಕ್ಷಕರ ದಿನ’ವಾದ ಸೆ.೫ರಂದೇ ನಮ್ಮನ್ನಗಲಿದ್ದ.......
ಅಂದು ಸಂಜೆ ಮನೆಗೆ ಬರುವ ಹೊತ್ತಿಗೆ ಹೊಟ್ಟೆಕಚ್ಚುವುದು ಕಡಿಮೆಯಾಗಿತ್ತು ! ಅಪ್ಪನ ಮದ್ದು ನನಗೂ ನಾಟಿತ್ತು !! ಎಂದೂ ಮರೆಯಲಾಗದ ಮರೆಯಾಗದ ಅಮೃತವಾದ ಅಪ್ಪನ ನೆನಪಿಗೆ ಕೈಮುಗಿದೆ......
ಮದುವೆಯಾಗಿ ಇಲ್ಲಿಗೆ ಬಂದಮೇಲೂ ಅಷ್ಟೆ. ಬೆಳಿಗ್ಗೆ ಉರಿಗೆ ಎಲೆ/ಗಡ್ಡೆ ಕಷಾಯ, ಜೀರಿಗೆ-ಕೊತ್ತಂಬರಿ ಕಷಾಯ; ಮಧ್ಯಾಹ್ನ ಕಡೆದ ಮಜ್ಜಿಗೆ, ಮೊಗೆಬೀಜ ಬೀಸಿದ್ದು, ಉದ್ದು ಹುರಿದು ರುಬ್ಬಿದ್ದು; ಮಧ್ಯಾಹ್ನ ಹಸಿ, ಹುಳಿ, ತಂಬ್ಳಿ ಜೊತೆ ಊಟವಾದಮೇಲೆ ಕುಡಿಯಲು ದಿನಕ್ಕೊಂದುತರದ ಆರೋಗ್ಯಕರವಾದ ತಂಬಳಿ, ರಾತ್ರೆ ದಾಸವಾಳ ಹೂವಿನ ಕಷಾಯ.......... ಹೀಗೇ ಅತ್ತೆಯ ಸ್ಪೆಷಲ್ ಇದ್ದೇ ಇರುತ್ತಿತ್ತು. ಮನೆಯಲ್ಲೇ ಬೆಳೆದ ಭತ್ತದ ಅಕ್ಕಿ, ಅವಲಕ್ಕಿ, ಶೇಂಗಾ, ಉದ್ದು ಹೀಗೇ ಎಲ್ಲದರಲ್ಲೂ ವಿಶೇಷತೆಯಿತ್ತು. ೧೦-೧೨ ಡಬ್ಬಿ ಬೆಲ್ಲ ಒಂದೇಸಲ ತರುತ್ತಿದ್ದರು. ಎಲ್ಲದಕ್ಕೂ ಬೆಲ್ಲ ಉಪಯೋಗಿಸುತ್ತದ್ದ ಮಾವ, ‘ತಂಗಿ, ಬೆಲ್ಲ ತಿಂದ್ರೆ ಮುರಿದ ಎಲುಬೂ ಕೂಡ್ತು’ ಎನ್ನುತ್ತಿದ್ದ. ಖಾರ ಕೂಡ ಅಷ್ಟೇ ತಿನ್ನುತ್ತಿದ್ದ. ‘ಕಡಿಮೆ ದರದ ಬಟ್ಟೆ, ಹೆಚ್ಚಿನ ದರದ ಊಟ’ ಎಂಬುದು ಆತನ ಆರೋಗ್ಯದ ಗುಟ್ಟಾಗಿತ್ತು ! ೧೬-೧೮ ಜನರಿರುತ್ತಿದ್ದ ಕೃಷಿ ಕುಟುಂಬದಲ್ಲಿ ಯಾವುದೇ ಯಂತ್ರಗಳಿಲ್ಲದೇ ಮನೆಕೆಲಸ, ಗದ್ದೆ, ಕೊಟ್ಟಿಗೆ ಕೆಲಸ ಮಾಡುತ್ತ ಎಲ್ಲರ ಜವಾಬ್ದಾರಿ ಹೊತ್ತಿದ್ದ ಅತ್ತೆಗೆ ಕೊನೆಯವರೆಗೂ ಮಂಡಿನೋವು, ಸೊಂಟನೋವು ಬಳಿಬಂದಿರಲಿಲ್ಲ. ಒಂದು ದಿನವೂ ‘ತನ್ನ ಕೈಲಾಗದು’ ಎಂದು ಸೋತು ಕುಳಿತಿರಲಿಲ್ಲ. ಪ್ರತಿದಿನ ಸ್ನಾನಮಾಡಿ ಕತ್ತರಿಉಡುಗೆ ಉಟ್ಟು ಬಂದು ಕನ್ನಡಿ ಹಿಡಿದು; ಸ್ನೋ, ಪೌಡರ್, ಕಾಡಿಗೆ ಹಚ್ಚಿಕೊಳ್ಳುತ್ತಿದ್ದ ಅತ್ತೆಯ ರೀತಿ ನಮಗಿಂದೂ ಜೀವನಕ್ಕೆ ಸ್ಪೂರ್ತಿ. ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಜೊತೆ ಬಂದ ಉಚಿತ ಪುಸ್ತಿಕೆಯಲ್ಲಿ ‘ಮನೆಗೆಲಸವೆಂಬ ಉತ್ತಮ ವ್ಯಾಯಾಮ’ ಎಂಬ ತಲೆಬರಹ ನೋಡಿದಾಗಲೇ ಅತ್ತೆಯ ನೆನಪು ತುಂಬಾ ಆಗಿತ್ತು. ಅವಳು ಬಂಗಾರದಬಣ್ಣದ ಸೀರೆ ಉಟ್ಟು ರಮಣಿಯಾಗಿ ತವರಿಗೆ ಹೋದಾಗ, ‘ಸರಸ್ವತಿ ಇನ್ನೂ ೧೮ ವರ್ಷ ಪ್ರಾಯದ ಹುಡುಗಿಯಂತೆ ಕಾಣುತ್ತಾಳೆ’ ಎಂದು ಯಾರೋ ಹೇಳಿದ್ದನ್ನು ಮನೆಗೆ ಬಂದು ಹೇಳಿಕೊಳ್ಳುತ್ತಾ ತುಂಬಾ ನಾಚಿದ್ದಳು!
ಹೀಗೇ ಹಿರಿಯರ ಜೊತೆಗಿನ ಜೀವನವೇ ನಮಗೊಂದು ಪಾಠಶಾಲೆಯಂತಿತ್ತು.
ಕೊನೆಯಲ್ಲಿ ನಿಮ್ಮೊಂದಿಗೆ ಹೇಳಿಕೊಳ್ಳಲೇಬೇಕಾದ ಒಂದು ಮನೆಮದ್ದು(?) ಮರೆಯದೇ ಮತ್ತೆ ಮತ್ತೆ ನೆನಪಿಗೆ ಬರುತ್ತದೆ. ನಾನು ಸುಮಾರು ೨-೩ನೇ ತರಗತಿಯಲ್ಲಿದ್ದೆ. ಆಯಿಯ ಅಕ್ಕನ ಮನೆ ಅಂದರೆ ನನ್ನ ದೊಡ್ಡಾಯಿ ಮನೆಗೆ ಹೋಗಿದ್ದೆ. ದೊಡ್ಡಪ್ಪ ಏನಾದರೂ ತಮಾಷೆ ಮಾಡುತ್ತಿರುತ್ತಿದ್ದ. ನಾನು ಬಹಳಷ್ಟು ದಿನ ಅಲ್ಲಿ ಉಳಿಯುತ್ತಿದ್ದೆ. ಅಂಗಳದ ತುದಿಗೆ ತೋಟ, ತೋಟದ ತುದಿಗೆ ಈಜಾಡುವಂತ ಹಳ್ಳ, ಮನೆಯ ಹಿಂದೆ ಮೇಲ್ಗಡೆ ಗುಡ್ಡ...... ಅವರ ಮನೆಯಲ್ಲಿ ಉಳಿಯವುದೇ ಖುಷಿಯಾಗಿತ್ತು. ಒಂದು ದಿನ ನನ್ನ ಕಾಲಿನ ಅಡಿ ಭಾಗದ ಒಂದು ಜಾಗದಲ್ಲಿ ತುಂಬಾ ನೋವಾಗುತ್ತಿತ್ತು. ಅದಕ್ಕೆ ‘ಮೀನಕಣ್ಣು’ ‘ಕಲ್ಲೊತ್ತು’ ಎಂದೇನೋ ಹೇಳುತ್ತಿದ್ದರು. ಸಂಜೆ ಎಲ್ಲರೂ ಹೊಳ್ಳಿಯಲ್ಲಿ ಕುಳಿತು ಹರಟೆಹೊಡೆಯುತ್ತಿದ್ದರು. ಆಗ ನಾನು ಕಾಲಿಗೆ ನೋವಾದ ಸುದ್ದಿ ಹೇಳಿದೆ. ಆಗ ದೊಡ್ಡಪ್ಪ ಹೇಳಿದ, ‘ತಂಗಿ, ನೀ ಅದ್ಕೆ ಎಂತದು ಮಾಡಡ. ನಾ ಹೇಳ್ತೆ ಕೇಳು. ಬೆಳಿಗ್ಗೆಎದ್ದು ಗುಡ್ಡೆಗೆ(ಮಲವಿಸರ್ಜನೆಗೆ) ಹೋದಾಗ ; ಮಾಡಾದಕೂಡ್ಲೆ ಅದು ಬಿಸಿಬಿಸಿ ಹೊಗೆ ಹರ್ತೆ ಇರ್ತು. ಅದರಮೇಲೆ ನೋವಿದ್ದ ಜಾಗ ಇಟ್ಟು ಶಾಖ ಕೊಡು’ ಎಂದಿದ್ದ !
‘ಇಶ್ಶೀ....’ ಎಂದು ಎಲ್ಲರೂ ಗೊಳ್ಳನೆ ನಕ್ಕಿದ್ದರು.
ನನ್ನಿಂದ ಎಂದೂ ಮಾಡಲಿಕ್ಕೆ ಸಾಧ್ಯವಾಗದ, ಆದರೆ ಇಂದೂ-ಎAದೂ ಮರೆಯಲಾಗದ ದೊಡ್ಡಪ್ಪನ ಆ ಮನೆ(ಹಿತ್ತಲ)ಮದ್ದನ್ನು ಯಾರು ಪ್ರಯೋಗ ಮಾಡಿ ನೋಡಿದ್ದಾರೋ ಅವನೇ ಬಲ್ಲ !!
ನಿಜ. ನನ್ನ ಯಜಮಾನರಾದ ಕೃಷ್ಣಮೂರ್ತಿ ಹೆಬ್ಬಾರರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ. ಯಾರಾದರೂ ಅವರನ್ನು ಕೇಳಿದರೆ ಬಿಡದೇ ಹೇಳುತ್ತಿರುತ್ತಾರೆ! ಓದು, ಅನುಭವ, ಅಭಿನಯ, ಆಟ, ಪಾಠ, ನಾಟಕ, ಕತೆ, ಕವಿತೆ, ಭಾಷಣ, ಭಾಷಾಂತರ, ಬರಹ, ಬದುಕು........ ಹೀಗೇ ಅವರ ಬಳಿ ಹೇಳಿಕೊಳ್ಳಲು ಬಹಳಷ್ಟಿದೆ. ಕೇಳಿದರೆ, ಕರೆದರೆ, ಅವರ ಜೊತೆ ಒಡನಾಡಿದರೆ ಕಲಿಯುವುದು, ತಿಳಿದುಕೊಳ್ಳುವುದು ಬೆಟ್ಟದಷ್ಟಿದೆ. ತಾನಾಗಿ ಅವರು ಏನನ್ನೂ ಹೇಳಿಕೊಳ್ಳುವುದೇ ಇಲ್ಲ..... ಕೊಂಚ ತಿಳಿದವರೂ ಇಂದು ಫೇಸ್ಬುಕ್, ವಾಟ್ಸಾಪ್, ಯೂಟ್ಯೂಬ್ಗಳಂತಹ ಅಂತರ್ಜಾಲ ಮಾಧ್ಯಮ ಅರಿತು ಅಲ್ಲಿ ತಮ್ಮ ಪ್ರತಿಭೆ ತೋರಿಸಿಕೊಳ್ಳುತ್ತಿದ್ದಾರೆ. ಈವರೆಗೂ ಹೆಬ್ಬಾರರು ಒಂದೇ ಒಂದು ಫೇಸ್ಬುಕ್ ಪೋಸ್ಟ್, ಯೂಟ್ಯೂಬ್ ವಿಡಿಯೋ ಅಪ್ಲೋಡ್ ಕೂಡಾ ಮಾಡಿಲ್ಲ ! ಅವರ ವಾಟ್ಸಾಪ್, ಫೇಸ್ಬುಕ್ ಎಕೌಂಟ್, ಯೂಟ್ಯೂಬ್ ಚಾನೆಲ್ ಕೂಡಾ ಮಕ್ಕಳೇ ಮಾಡಿದ್ದು. ಹಲವು ವರ್ಷಗಳ ಹಿಂದೆಮಾಡಿದ ಅವರ ಟಿವಿ ಸಂದರ್ಶನದ ಪ್ರೊಮೋ ಕಂಪ್ಯೂಟರ್ ಕಡತದಲ್ಲಿ ಸಿಕ್ಕಿದ್ದನ್ನು ನಾವು ಫೇಸ್ಬುಕ್ಗೆ ಮೊನ್ನೆ ಪೋಸ್ಟ್ ಮಾಡಿದಾಗ ಬಂದ ಪ್ರತಿಕ್ರಿಯೆ, ಶುಭಹಾರೈಕೆಗಳನ್ನು ನೋಡಿ ಖುಷಿಯಿಂದ ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ..... ಬೆಳಿಗ್ಗೆ ಎದ್ದಾಗಿನಿಂದ ವ್ಯಾಯಾಮ-ವಾಕಿಂಗ್ ಎಂದು ಒಂದೂವರೆ ತಾಸು, ಮತ್ತೆ ಮನೆ-ಅಂಗಳ ಕಸ ಗುಡಿಸುವುದು, ತೋಟದ ಕೆಲಸ, ಬಟ್ಟೆತೊಳೆಯುವುದು, ನೀರು ತರುವ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ