ನಿಜ. ನನ್ನ ಮಾವ, ಅವನ ತಮ್ಮಂದಿರು ಸೇರಿ ಅಂದು ಅಚ್ಚುಕಟ್ಟಾಗಿ ಕಟ್ಟಿದ; ಇಂದೂ ನಾವು ನೆಮ್ಮದಿಯಾಗಿ ನೆಲೆಸಿರುವ ‘ನಮ್ಮ ಮನೆ’ ನನಗೆ ತುಂಬಾ ಇಷ್ಟ.....
ಹೊರಗಿನಿಂದ ನೋಡಲು ಪುಟ್ಟದಾಗಿ ಕಂಡರೂ ಒಳಗೆ ವಿಶಾಲವಾಗಿರುವ ಗಟ್ಟಿಮುಟ್ಟಾದ ನಮ್ಮ ಮನೆ ನನಗಿಷ್ಟ.
ಬೇಸಿಗೆಯ ಸೆಖೆಯಲ್ಲಿ ಬಿಟ್ಟರೆ ಮಳೆಗಾಲ, ಚಳಿಗಾಲದಲ್ಲಿ ಬೆಚ್ಚಗೆ ಕುಳಿತು ಪಟ್ಟಾಂಗ ಹೊಡೆಯಬಹುದಾದ ನಮ್ಮ ಮನೆಯ ಅಟ್ಟದ ಬಗ್ಗೆ ನನಗೆ ಇನ್ನೂ ಖುಷಿಯಿದೆ..... ಬಹುಶಃ ಕೆಳಮನೆಯ ಕೆಲಸಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿದರೂ; ಹಳೆಯಕಾಲದ ಹೆಚ್ಚಿನ ಮನೆಗಳಲ್ಲಿ ಅಟ್ಟದ ಕೆಲಸ ಅಷ್ಟಕ್ಕಷ್ಟೇ. ಆದರೆ ನಮ್ಮ ಮನೆಗೆ ಅಟ್ಟಕ್ಕೂ ಭದ್ರವಾದ ಅಂಕಣ.... ಅದರ ಮೇಲೆ ಮತ್ತೆ ಅಟ್ಟ!
ಜೂನ್ 18, 1965 ರಲ್ಲಿ ಪ್ರವೇಶ ಮಾಡಿದ ನಮ್ಮ ಮನೆಗೆ 56 ವರ್ಷ ಕಳೆದು 57ನೇ ವರ್ಷ. ಅಂತಹ ಕಷ್ಟದ ಕಾಲದಲ್ಲೂ ಎಲ್ಲೂ ಕೆಲಸ ಬಾಕಿಯಿಡದೆ ಪರಿಪೂರ್ಣವಾಗಿ ಮುಗಿಸಿಟ್ಟ ಗಟ್ಟಿಯಾದ ಗೋಡೆ - ಬಾಗಿಲು, ನೆಲ, ಕಿಟಕಿ..... ಎಲ್ಲ ಹೊಂದಿದ; ಇಂದೂ ಶಿಸ್ತಿನಿಂದ ಸಿಂಗರಿಸಿದರೆ ಹೊಸ ಮದುಮಗಳಂತೆ ಕಾಣುವ ನಮ್ಮ ಮನೆ ನನಗಿಷ್ಟ!
ಮನೆಗೆ ಬೆಂಕಿ ಬಿದ್ದು ಒಂದು ಹುಲ್ಲುಕಡ್ಡಿಯೂ ಇಲ್ಲದಂತೆ ಎಲ್ಲವೂ ಸುಟ್ಟು ಕರಕಲಾದರೂ ಹೆದರದೆ; ಛಲದಿಂದ, ಸಹೋದರರ ಜೊತೆ ಸೇರಿಕೊಂಡು ಕೇವಲ 18 ಸಾವಿರ ರೂಪಾಯಿ ವೆಚ್ಚದಲ್ಲಿ ಕಡಿಮೆ ಸಮಯದಲ್ಲಿ(3 ತಿಂಗಳು ಹೇಳಿದ ನೆನಪು) ಕಟ್ಟಿ ನಿಲ್ಲಿಸಿದೆ ಎಂದು ಮಾವ ಇರುವಾಗ ಆಗಾಗ ನೆನಪಿಸಿಕೊಳ್ಳುತ್ತಿದ್ದ, ಅವರು ಕಾಟಾಚಾರಕ್ಕೆ ಕಟ್ಟದ ಗಟ್ಟಿಮುಟ್ಟಾದ ನಮ್ಮ ಮನೆ; ನಿಜಕ್ಕೂ ಅವರ ನೆನಪಲ್ಲಿ ಕಾದಿಡಬೇಕಾದ ಅವಿಭಕ್ತ ಕುಟುಂಬದ ಅಮೂಲ್ಯ ಆಸ್ತಿ.
ಕೈತುಂಬಾ ಕಾಸಿಲ್ಲದಿದ್ದರೂ, ಕೈಯಲ್ಲಿ ಶಕ್ತಿ ಇರುವವರೆಗೆ ಕಾಲಕಾಲಕ್ಕೆ ಮನೆಯ ಭದ್ರತೆಗೆ ಅಗತ್ಯವಿರುವ ಕೆಲಸ ಮಾಡಿಸುತ್ತ ಅಥವಾ ತಾವೇ ಮಾಡುತ್ತ; ಮನೆಯ ಮೂಲೆ ಮುಕ್ಕಾದರೂ ಚಡಪಡಿಸುತ್ತ ಸರಿಪಡಿಸುತ್ತಿದ್ದ ಮಾವ - ಅತ್ತೆ; ನಿಜಕ್ಕೂ ನಮಗೆಲ್ಲ ಮಾದರಿ. 'ಸುಣ್ಣ-ಮಣ್ಣಿನಿಂದ ಗಿಲಾಯಮಾಡಿದ ಗೋಡೆ. ಸಾರಿಸಿದರೆ ಗಟ್ಟಿಯಾಗುತ್ತತದೆ' ಎಂದು ಅತ್ತೆ ಪ್ರತಿವರ್ಷ ಗಣೇಶ ಚವತಿ ಸಂದರ್ಭದಲ್ಲಿ ಸಣ್ಣತ್ತೆ, ಅತ್ತಿಗೆಯರ ಜೊತೆ ಸೇರಿ ಮೆಂತ್ಯದಕಾಳು ನೆನೆಸಿ, ಬೀಸಿ, ಸಗಣಿ ಜೊತೆ ಸೇರಿಸಿ ಅಥವಾ ಕಾಡುಬೆಂಡೆ ಗಿಡ ತಂದು ಬೀಸಿ, ಗೋಡೆಗೆ ಬಡಿದು ಸಾರಿಸುವ ಆ ಸಾಹಸ ಮರೆಯಲಾಗದು....
ಮ್ಯೂಸಿಯಂಗಳಲ್ಲಿ ಹಳೆಯದನ್ನೆಲ್ಲ ಹಣಕೊಟ್ಟು ನೋಡಲು ಹೋಗುವ ನಾವು; ಆ ಕಾಲದಲ್ಲಿ ಸಿಗುತ್ತಿದ್ದ ಶುದ್ಧವಾದ ಕಲ್ಲು-ಮಣ್ಣಿನಿಂದ, ಯಂತ್ರಗಳ ಸಹಾಯವಿಲ್ಲದೆ ನಿಜವಾದ ದೈಹಿಕ ಶ್ರಮದಿಂದ, ಮನೆಯ ಪ್ರತಿಯೊಂದು ಮೂಲೆಯನ್ನೂ ಕೈಯಿಂದ ಮುಟ್ಟಿ ಮುಟ್ಟಿ ಕಷ್ಟದಿಂದ ಕಟ್ಟಿದ ಯಾವುದೇ ಮನೆಯನ್ನೂ ಕಾದಿಟ್ಟುಕೊಂಡರೆ ಬಹುಶಃ ಅಂತಹ ಮನೆಗಳು ಭವಿಷ್ಯದ ಅಮೂಲ್ಯ ಆಸ್ತಿಯಾಗಬಹುದು....
ನನ್ನ ಅಪ್ಪ ಗಂಗೊಳ್ಳಿಯಲ್ಲಿ ಕಟ್ಟಿನಿಲ್ಲಿಸಿದ ಸುಂದರ ಪ್ರಕೃತಿಯ ನಡುವಿನ ತಂಪಾದ ನನ್ನ ತವರುಮನೆ ಕೂಡ ಬಂದವರೆಲ್ಲ ಇಷ್ಟಪಡುವ ಇಂತಹುದೇ ಒಂದು ಅಪ್ಪಟ ಆಸ್ತಿ......
ಗೃಹಪ್ರವೇಶ ಮಾಡಿದ ಸಂದರ್ಭದಲ್ಲಿ ಅಟ್ಟದ ಮೇಲೆ ಮೂಡಿಸಿಟ್ಟ ಮಾವನ ಹಸ್ತದ ಗುರುತುಗಳು ಇನ್ನೂ ಇರುವುದನ್ನು ನೋಡಿ; ಒಮ್ಮೆ ನಮ್ಮ ಮನೆಗೆ ಬಂದ ಪತ್ರಕರ್ತ ಶಿವಾನಂದ ಕಳವೆಯವರು, ಸಾಹಿತಿ ಜಯಂತ ಕಾಯ್ಕಿಣಿಯವರು ಖುಷಿಪಟ್ಟು; ಇಂದೂ ಅದನ್ನು ನೆನಪಿಸಿಕೊಳ್ಳುತ್ತಿರುವುದು.....
ಬೆಂಗಳೂರಿನಿಂದ ಬಂದ ನನ್ನ ಅಣ್ಣನ ಹೆಂಡತಿ ನಮ್ಮ ಮನೆಯ ವಿಶಾಲವಾದ ಅಟ್ಟ ನೋಡಿ ಒಂದು ದಿನ ರಾತ್ರಿ ಇಲ್ಲಿ ಮಲಗಿ ಸುದ್ದಿ ಹೇಳಬೇಕು ಎಂದು ಆಸೆ ಪಟ್ಟಿದ್ದು; ಮತ್ತೊಮ್ಮೆ ಬಂದಾಗ ಉಳಿದು ಖುಷಿಪಟ್ಟು ಹೋಗಿದ್ದು .....
ವಾರಕ್ಕೆ, 15 ದಿನಕ್ಕೆ ಪಿಜಿಯಿಂದ ಬರುವಾಗ ತಂದು ರಾಶಿ ಹಾಕುತ್ತಿದ್ದ ನನ್ನ ಮಗನ ತೊಳೆಯದ ಬಟ್ಟೆಗಳನ್ನೆಲ್ಲಾ ತೊಳೆದು ಅಟ್ಟದ ಗಳಕ್ಕೆ ಹರಡಿ ಫ್ಯಾನ್ ಹಾಕಿ ಇಟ್ಟಾಗ, ಸುರಿಯುವ ಮಳೆಗಾಲದಲ್ಲೂ ಬೇಗಬೇಗ ಒಣಗಿಸಿಕೊಟ್ಟ ನಮ್ಮ ಮನೆಯ ಅಟ್ಟ.....
ಎಷ್ಟೇ ಜನ ಬಂದರೂ ಬೆಚ್ಚಗೆ ಮಲಗಲು ಇರುವ ಜಾಗ.....
ಮನೆಗೆ ಬಂದವರೆಲ್ಲ ಅಚ್ಚರಿಯಿಂದ ನೋಡುವ ಹಗ್ಗದಿಂದ ಕಡೆದ ಕಂಬ, ಗಟ್ಟಿಯಾಗಿರುವ ತೊಲೆ, ಜಂತಿ....
ಇವೆಲ್ಲ ನನಗೆ ನಮ್ಮ ಮನೆಯ ಬಗ್ಗೆ ಇನ್ನಷ್ಟು ಹೆಮ್ಮೆ ಮೂಡಿಸಿವೆ.
ಮಾವ ಇರುವಾಗ ಮನೆಯ ಪ್ರತಿಯೊಂದು ಬಾಗಿಲು, ಕಲ್ಲು, ಕಿಟಕಿ, ನೆಲ, ಮೆಟ್ಟಿಲು, ಸಿಮೆಂಟು, ಮಣ್ಣು, ಬಣ್ಣ.... ಹೀಗೇ ಎಲ್ಲದರ ಬಗ್ಗೂ ಏನೇನೋ ಒಂದೊಂದು ಕತೆ ಹೇಳುತ್ತಿದ್ದ. ಆ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲದಿದ್ದರೂ ಮಾವ ಆಗಾಗ ಹೇಳುತ್ತಿದ್ದ ಕೆಲವೊಂದು ಮಾತು ನೆನಪಿದೆ. ಕರ್ಕಿಅಣೆ ಕಲ್ಲು..... ಭರಣಿಗೆ, ಹಲಸು, ಮತ್ತಿ ಕಟ್ಟಿಗೆ, ಡಬ್ಬಲ್ ಪಳಿ- ಸಿಂಗಲ್ ಪಳಿ ಹಂಚು.... ಹಗಲು ರಾತ್ರಿ ಎನ್ನದೇ ಕಲ್ಲು ಕಟ್ಟಿ ಕೆಲಸ ಮಾಡಿದ ಉಪ್ಪಾರ ಜಟ್ಟಿ ಕುಟುಂಬ - ಬೀರಪ್ಪ ಆಚಾರಿ ಸಾಹಸ..... ನಯಾಪೈಸೆ ಕಯ್ಯಲ್ಲಿರದ ಆ ಕಾಲದಲ್ಲಿ ನಂಬಿಕೆಯಿಂದ ಕೈಗಡ ಕೊಟ್ಟವರು.... ಮನೆಯವರ ಜೊತೆ ಸೇರಿಕೊಂಡು ಗದ್ದೆಯಲ್ಲಿ ಕೆಲಸ ಮಾಡಿ; ಕೊಟ್ಟವರ ಸಾಲವನ್ನು ಬಡ್ಡಿ ಸಮೇತ ತೀರಿಸಿದ್ದು..... ಹೀಗೇ ಯಾರ್ಯಾರನ್ನೋ ಮಾವ ನೆನಪಿಸಿಕೊಳ್ಳುತ್ತಿದ್ದ. ನಿಜಕ್ಕೂ ಅವನ್ನೆಲ್ಲ ಬರೆದಿಟ್ಟುಕೊಂಡರೆ ಒಂದು ಕಾದಂಬರಿಯೇ ಆಗುತ್ತಿತ್ತೇನೋ.
ಒಟ್ಟಿನಲ್ಲಿ ಸರಿಯಾಗಿ ಕಾದಿಟ್ಟುಕೊಂಡರೆ ಹೆಚ್ಚೇನೂ ಬಾಕಿಯಿರದ ವಿನ್ಯಾಸದ ಕೆಲಸ.... ಖಾಲಿ ದಿನಗಳಲ್ಲಿ ಓಡಾಡಲು, ಸ್ವಚ್ಛಗೊಳಿಸಲು ಸ್ವಲ್ಪ ದೊಡ್ಡ ಎನಿಸಿದರೂ ಎಲ್ಲರೂ ಮನೆಗೆ ಬಂದಾಗ ನೆಮ್ಮದಿಯಾಗಿ ಕೈಕಾಲು ನೀಡಿ ಕೂಡ್ರಲು, ಮಲಗಲು ಇರುವ ಜಾಗ..... ಮಳೆಗಾಲದಲ್ಲಿ ಆರಾಮಾಗಿ ಬಟ್ಟೆ ಒಣಗಿಸಲು, ಬೆಚ್ಚಗೆ ಮಲಗಲು ಇರುವ ಭದ್ರವಾದ ಅಟ್ಟ.... ಜಿರಲೆ, ವರಲೆಗಳ ತೀರಾ ತರಲೆ ಇಲ್ಲದೆ ಆರಾಮಾಗಿರುವ; 56 ವರ್ಷಗಳ ಕಾಲ ನೆಲೆಸಿದವರಿಗೆ ನೆಮ್ಮದಿಯ ಆಸರೆ ನೀಡಿದ; ಹಿರಿಯರ ಬೆವರಲ್ಲಿ ಹುಟ್ಟಿದ ‘ನಮ್ಮ ಮನೆ’ ನಿಜಕ್ಕೂ ನಮ್ಮ ಮನೆಯವರೆಲ್ಲರ ಹೆಮ್ಮೆ..........

ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ