ಮೊನ್ನೆ ಮೊನ್ನೆಯಷ್ಟೇ ಅತ್ತೆ ಹೇಳುವ ಮಳೆ ಗಾದೆಗಳ ಬಗ್ಗೆ ಹೇಳಿದ್ದೆ. ಈಗ ಮತ್ತೆ ಅತ್ತೆಯದೇ ನೆನಪು...
ಕಾರಣ ಸದಾ ತಿರುಗುವ ಮಗ ಚಿನ್ಮಯನಿಗೆ ಮಲಗಿಸಿದ 105 ಡಿಗ್ರಿ ತಲುಪಿದ ಜ್ವರ !
ಹೌದು. ವಾರಗಳ ಹಿಂದೆ ಗೆಳೆಯರ ಜೊತೆ ಹತ್ತಿರದ ಜಲಪಾತಕ್ಕೆ ಹೋಗಿದ್ದ ಚಿನ್ಮಯ್ ಎತ್ತರದ ಬಂಡೆಯಿಂದ ಜಾರಿ ಬಿದ್ದು ತರಚಿದ ಗಾಯಗಳೊಂದಿಗೆ ಮನೆಗೆ ಬಂದಿದ್ದ. ಎಂದಿನಂತೆ ನಿರ್ಲಕ್ಷ್ಯ ಅವನಿಗೆ. ಸಣ್ಣಪುಟ್ಟ ಗಾಯಗಳಿಗೆ ಚಿಂತಿಸುವುದೇ ಇಲ್ಲ. ಸ್ವಲ್ಪ ತರಚಿದೆ ಅಂದುಕೊಂಡು; ನನ್ನ ಪ್ರೀತಿಯ ‘HURBOL ಮುಲಾಮ್’ ಹಚ್ಚಿ ನಾನೂ ಸುಮ್ಮನಿದ್ದೆ.
ಈ HURBOL ಮುಲಾಮ್ ಬಗ್ಗೆ ಹೇಳಲೇಬೇಕು. ನಮ್ಮ ಮನೆಗೆ ಬರುವ ಅವಿ ಗಣಪಿಗೆ, ‘ಮಕ್ಕಳಿಗೆ ಕಾಲಿಗೆ ತುರಿಕೆ, ಕಜ್ಜಿ ಆಗಿದೆ. ಏನು ಹಚ್ಚಲಿ?’ ಎಂದು ಒಮ್ಮೆ ಕೇಳಿದ್ದೆ. ಅವಳು ‘ಹರ್ಬೋಲ್ ಹಚ್ಚಿ. ಕಡಿಮೆ ಆಗ್ತದೆ. ನಾವು ನಂಜು ಆದಾಗ ಎಲ್ಲ ಅದನ್ನೇ ಹಚ್ಚುದು. ಆನಂದು ಅಂಗಡಿ(ಕಿರಾಣಿ ಅಂಗಡಿ)ಲೂ ಸಿಗ್ತದೆ’ ಎಂದಿದ್ದಳು.
ಅರೆ! ನನಗೆ ತಟ್ಟನೆ ಬಹಳ ವರ್ಷಗಳ ಹಿಂದಿನ ನೆನಪಾಯಿತು. ನಾವು ಸಣ್ಣವರಿರುವಾಗ ಅಪ್ಪ ಮನೆಯಲ್ಲಿ ಖಾಯಂ ಈ ಹರ್ಬೋಲ್ ಮುಲಾಮ್ ತಂದಿಡುತ್ತಿದ್ದ. ನನಗೆ ಖುಷಿಯಾಯಿತು. ಅದನ್ನು ತಂದು ಹಚ್ಚಿದಾಗ ಮಕ್ಕಳಿಗೆ ಗುಣವಾಯಿತು.
4-5 ವರ್ಷಗಳ ಹಿಂದೆ ಒಮ್ಮೆ ಬಟ್ಟೆಯಿಂದ ಆದ ತುರಿಕೆ ನನಗೆ ತುಂಬಾ ತೊಂದರೆ ಕೊಡುತ್ತಿತ್ತು. ಅಟ್ಲಕಾಯಿಂದ(ಅಂಟುವಾಳ) ತೊಳೆದು, ಈ ಮುಲಾಮ್ ಹಚ್ಚಿ ಗುಣವಾಗಿದ್ದು ಮತ್ತೆ ತುರಿಕೆ ಬಂದಿಲ್ಲ. ಹಾಗಾಗಿ ನನಗೆ ಈಗ ಯಾವುದೇ ಕೊರೆದ ಗಾಯ, ಸಣ್ಣಪುಟ್ಟ ಗುಳ್ಳೆ ಏನೇ ಆದರೂ ಈ ‘HURBOL’ ಮನೆಗೆ ಬಂದಾಗಿಂದ ಭಯಾನೇ ಇಲ್ಲ! ಇದು ನಮ್ಮ ಪಕ್ಕದ ಭಟ್ಕಳ ತಾಲೂಕಿನಲ್ಲೆ ತಯಾರಾಗೋದು ಅನ್ನೋದು ಇನ್ನೂ ಖುಷಿ......
ಚಿನ್ಮಯ ಹಾಗೇ ಮರುದಿನ ಮತ್ತೆ ಆಡಲು ಹೋದ. ತಿರುಗಾಡಲು ಹೋದ. ನನಗೂ ಲಕ್ಷ್ಯದಲ್ಲಿರಲಿಲ್ಲ. 4 ದಿನ ಕಳೆದ ಮೇಲೆ ಬೆಳಿಗ್ಗೆ ಏಳುವಾಗ ‘ಅಮ್ಮ, ಕಾಲು ತುಂಬಾ ನೋವು’ ಎಂದು ಹೇಳುತ್ತ ಬಂದ. ನೋಡಿದರೆ ಕಾಲಿನ ಗಾಯದ ಸುತ್ತ ಸುಮಾರು ಜಾಗ ರಕ್ತ ಹೆಪ್ಪುಗಟ್ಟಿ ಕಪ್ಪಾಗಿತ್ತು. ಅದು ಮೀನಖಂಡ(ಮೊಣಕಾಲಿನ ಹಿಂದೆ).
ಅಲ್ಲಿ ಮಾಂಸ ಹೆಚ್ಚಿರುವುದರಿಂದ ಗೊತ್ತೇ ಆಗಿರಲಿಲ್ಲ. ಅವನ ಒಂದು ಕಾಲು ಎರಡರಷ್ಟು ದಪ್ಪಗಾಗಿತ್ತು !! ನಂತರ ಚಳಿ ಎಂದು ಮಲಗಿದ. ನಡುಗುತ್ತಿದ್ದ. ಬಿಸಿ ನೀರಿಗೆ ಲಿಂಬು+ಸಕ್ಕರೆ+ಉಪ್ಪು ಹಾಕಿ ಕೊಟ್ಟೆ. ಚಳಿ ಕಡಿಮೆ ಆಯಿತು. ಆದರೆ ಜ್ವರ 103-4-5... ಡಿಗ್ರಿಗೆ ಏರುತ್ತಿತ್ತು. ಹಣೆಗೆ ಐಸ್‌ಪಟ್ಟಿ ಯಾವುದೂ ತಾಗುತ್ತಿರಲಿಲ್ಲ. ಕಣ್ಣು ಬಿಟ್ಟರೆ ಎಲ್ಲ ಬ್ಲಾಕ್&ವೈಟ್ ಕಾಣುತ್ತಿದೆ ಎನ್ನುತ್ತಿದ್ದ.
ಕೊರೊನ ಸಮಯ ಬೇರೆ. ನಮಗೆ ಚಿಂತೆ ಶುರುವಾಯ್ತು. ಜ್ವರ ಯಾಕೆ ಬಂತು ಅಂತಾನೇ ತಿಳಿಯಲಿಲ್ಲ. ಗಾಯದ ನೋವಿಗೆ ಜ್ವರ ಬಂದರೂ ಇಷ್ಟು ಜೋರಾಗಿ ಯಾಕೆ ಬರುತ್ತಿದೆ ತಿಳಿಯದೇ ಡಾಕ್ಟರಿಗೆ ಫೋನ್ ಮಾಡಿ ಕೊರೊನಾ ಟೆಸ್ಟ್ ಮಾಡಬೇಕಾ ಕೇಳಿದರೆ ಬೇಡ. ಕೊರೊನಾಕ್ಕೆ ಇಷ್ಟು ಜೋರಾಗಿ ಜ್ವರ ಬರುವುದಿಲ್ಲ. ಮತ್ತೆ ಈಗ ಕೊರೊನ ಕೇಸ್ ಕಡಿಮೆ ಆಗುತ್ತಿದೆ ಎಂದರು. ಜ್ವರದ ತೀವ್ರತೆಗೆ ಅವನಿಗೆ ನಡೆಯಲೂ ಆಗದ್ದರಿಂದ ಕಾಲಿನ ಫೋಟೊ ತೋರಿಸಿ ಅಪ್ಪ ಮಾತ್ರೆ, ಕಾಲಿಗೆ ಮುಲಾಮ್ ತಂದರು. ಮರುದಿನ ಒಮ್ಮೆ ಕಡಿಮೆಯಾಗಿತ್ತು. ಮತ್ತೆ ಸಂಜೆಯಾಗುತ್ತಿದ್ದಂತೆ ತೀವ್ರ ಜ್ವರ. ಹಾಗೆ ಮತ್ತೆ ಮುಂಜಾನೆ ಡಾಕ್ಟರ್ ಬಳಿ ತೋರಿಸಿ ಇಂಜೆಕ್ಷನ್ ತೆಗೆದುಕೊಂಡು ಬಂದ. ರಕ್ತಹೆಪ್ಪುಗಟ್ಟಿದ ಜಾಗ ಕೆಂಪಾಗಿತ್ತು. ಅಲ್ಲಿ ಕೀವು ತುಂಬಿತ್ತು!
ಮಾತ್ರೆ ತೆಗದುಕೊಂಡು 2-3 ದಿನಕ್ಕೆ ಜ್ವರ ಕಡಿಮೆ ಆಗಿತ್ತು. ಆಯಿ ಇಡಿ ಲಿಂಬೆಹಣ್ಣು ಕಷಾಯ ನೆನಪು ಮಾಡಿದಳು. ಅತ್ತೆ ಮನೆಯಲ್ಲಿ ಯಾರಿಗೇ ತುಂಬಾ ನೆಗಡಿ, ಜ್ವರ ಬಂದಾಗೆಲ್ಲ ಮಾಡುತ್ತಿದ್ದ ಇಡೀ ಲಿಂಬೆ ಹಣ್ಣಿನ ಕಷಾಯ ಮಾಡಿಕೊಟ್ಟಿದ್ದೆ. ಸ್ವಲ್ಪ ಕಾಯಿರುವ ಲಿಂಬೆಹಣ್ಣನ್ನು ಕಡ್ಡಿಯಿಂದ ಅಲ್ಲಲ್ಲಿ ತೂತು ಮಾಡಿ 1 ಲೀಟರ್‌ನಷ್ಟು ನೀರಿಗೆ ಹಾಕಿ ನಂತರ ಅದಕ್ಕೆ 1 ಚಮಚ ಕೊತ್ತಂಬರಿ + 7-8 ಕಾಳುಮೆಣಸು + ಒಂದು ಮುಷ್ಟಿಯಷ್ಟು ದೂರ್ವೆ ಹಾಕಿ ಕುದಿಸಿ ಅರ್ಧ ಲೀಟರ್ ಆಗುವಷ್ಟು ಕುದಿಸಿ, ಸೋಸಿ; 2 ದಿನ ಬೆಳಿಗ್ಗೆ 1 ಲೋಟದಷ್ಟು ಕುಡಿಯಲು ಕೊಟ್ಟೆ.
ಯಾವುದೇ ತರದ ಜ್ವರ ಬಂದರೂ, ನೆಗಡಿ, ಕಫ ಕೆಮ್ಮು ಆದರೂ ನಮ್ಮ ಮನೆಯಲ್ಲಿ ಖಾಯಂ ಔಷಧ ‘ಮಹಾಸುದರ್ಶನಾದಿ ಕಾಡಾ’. ನಮಗೆ ಎಲ್ಲರಿಗೂ ಅದು ಪರಿಣಾಮಕಾರಿ. ಅದನ್ನೂ ಕೊಟ್ಟೆ.
ಅಕ್ಕನಿಗೆ ಫೋನ್ ಮಾಡಿ ಜ್ವರ, ಬಿದ್ದ ನೋವು-ಬಾವಿಗೆ ಯಾವುದು ಎಂದು ಕೇಳಿ; ಅವಳು ಮನೆಗೆ ತಂದಿಟ್ಟಿದ್ದ ಹೋಮಿಯೋಪತಿ ಔಷಧ ಕೂಡಾ ಕೊಟ್ಟೆ.
ಹೀಗೇ ಅವನ ಜ್ವರದ ತಾಪ ನೋಡಿ ನಾನು ಕೈಕಾಲು ಬಿಟ್ಟದ್ದೆ.
4-5 ದಿನ ಆದ ಮೇಲೆ, ಸೆಪ್ಟಿಕ್ ಮಾತ್ರೆ ಮುಗಿಯುವ ದಿನ ಬೆಳಿಗ್ಗೆ ಎದ್ದಾಗ ಅವನ ಕಾಲಿನಿಂದ ರಕ್ತ ದಪ್ಪವಾಗಿ ಇಳಿಯುತ್ತಿತ್ತು. ಬಹುಶಃ ಕೆಟ್ಟ ರಕ್ತ ಕೀವಾಗಿ ಹೊರಗೆ ಹೋಗುತ್ತಿತ್ತು! ಅದು ಹರಿಯುವ ಪರಿ ನೋಡಿ ನಮಗೇ ಕಣ್ಣುಕತ್ತಲಾಗುತ್ತಿತ್ತು.
ಇದನ್ನೆಲ್ಲ ನೋಡಿದಾಗ ನನಗೆ ಅತ್ತೆ ನೆನಪಾಗುತ್ತಲೇ ಇದ್ದಳು..... ಕಾರಣ ನಾನು ಮಗನಿಗೆ ಬಿದ್ದು ನೋವಾದ ದಿನ ಸರಿಯಾಗಿ ನೋಡಿ ಔಷಧ ಮಾಡದ ತಪ್ಪಿಗೆ !
ನನ್ನ ಅತ್ತೆ ಚುರುಕು. ಸದಾ ಅವಸರ. ಸದಾ ಕೆಮ್ಮಿರುತ್ತಿತ್ತು ಅವಳಿಗೆ. ಆದರೆ ಶುಗರ್, ಬಿ.ಪಿ., ಮಂಡಿನೋವು ಏನೂ ಇರಲಿಲ್ಲ. ಕೊನೆಯವರೆಗೂ ಒಂದು ದಿನವೂ ಅವಳು ಎಲ್ಲೂ ನೋವು ಅಂತ ಹೇಳಿಕೊಂಡಿದ್ದಿಲ್ಲ. ಅವಳ ಮುಂದೆ ನಮಗೆ ಏನಾದರೂ ಆಗಿದೆ ಅಂತ ಹೇಳಿಕೊಳ್ಳಲೂ ಮುಜುಗರವಾಗುತ್ತಿತ್ತು.
ವಯಸ್ಸಾಗುತ್ತಿದ್ದಂತೆ ಅತ್ತೆಗೆ ದೇಹ ಸ್ವಲ್ಪ ಓಲಾಡುತ್ತಿತ್ತು. ಮನೆಯಲ್ಲಿರುವಾಗ ಹೆಚ್ಚಿನ ದಿನ ಬೆಳಿಗ್ಗೆ ಏಳುವಾಗ ಅತ್ತೆಯ ಮುಖ, ತಲೆ ಅಥವಾ ಕೈಯಲ್ಲಿ ಎಲ್ಲಾದರೂ ಕಪ್ಪಾಗಿ ಉಬ್ಬಿರುತ್ತಿತ್ತು. ಕೇಳಿದರೆ ರಾತ್ರೆ ಎದ್ದು ಹೋಗುವಾಗ ಎಲ್ಲಾದರೂ ಗೋಡೆ, ಬಾಗಿಲು ಏನಾದರೂ ಬಡಿದಿರುತ್ತಿತ್ತು. ಆದರೆ ಸಂಜೆಯಾಗುವಷ್ಟರಲ್ಲಿ ಅದು ಕಡಿಮೆಯಾಗಿರುತ್ತಿತ್ತು! ಕಾರಣ ಅವಳು ತಕ್ಷಣ ಬೆಣ್ಣೆ ಸವರಿಕೊಳ್ಳುತ್ತಿದ್ದಳು.
ಮಕ್ಕಳು ಸಣ್ಣವರಿರುವಾಗ ಕೂಡಾ ಬಿದ್ದು ಎಲ್ಲಾದರೂ ಬೊಮ್ಮಟೆ ಬಂದರೆ ಅಥವಾ ಉಬ್ಬಿದರೆ ತಕ್ಷಣ ಬೆಣ್ಣೆ ಹಚ್ಚಿ ತಾಮ್ರದ ತಟ್ಟೆಯಿಂದ ತಿಕ್ಕುತ್ತಿದ್ದಳು. ಅದರಿಂದ ನೋವು ಸಹಿತ ಬಾವು ಕಡಿಮೆ ಆಗಿರುತ್ತಿತ್ತು!!
ನಾನೂ ಈ ಪ್ರಯೋಗ ತುಂಬಾ ಬಾರಿ ಮಾಡಿದ್ದೆ. ಈಗ 2-3 ತಿಂಗಳ ಹಿಂದೆ ನಮ್ಮ ಮನೆಯಲ್ಲಿರುವ 73 ವರ್ಷದ ಚಿಕ್ಕಮ್ಮ ಅಂಗಳದಿಂದ ಮೆಟ್ಟಿಲು ಹತ್ತುವಾಗ ಬಿದ್ದು ಭುಜ, ಹಾಗೇ ತಲೆಯ ಮೇಲೆ ಪುಟ್ಟ ಪುರಿಯಂತೆ ಉಬ್ಬಿತ್ತು. ಬಿದ್ದ ತಕ್ಷಣ ತಲೆಗೆ ಐಸ್‌ಪೀಸ್ ಇಟ್ಟಿದ್ದೆ. ನಂತರ ಪ್ರತಿದಿನ ಬೆಳಿಗ್ಗೆ ಉಬ್ಬಿದ ಭುಜಕ್ಕೆ ಹಾಗು ತಲೆಗೆ ನಾನೇ ಬೆಣ್ಣೆ ಹಚ್ಚಿದ್ದೆ. 4-5 ದಿನಗಳಲ್ಲಿ ನೋವಿನ ಸಹಿತ ಬಾವು ಸಂಪೂರ್ಣ ಗುಣವಾಗಿತ್ತು! ಅತ್ತೆಯ ಪ್ರಯೋಗ ಯಶಸ್ವಿಯಾಗಿತ್ತು.
ಡಾಕ್ಟರ್ ಚಿನ್ಮಯನಿಗೆ ಹೇಳಿದ್ದರು ‘ತಕ್ಷಣ ಐಸ್ ಇಟ್ಟಿದ್ದರೂ ಇಷ್ಟು ತೊಂದರೆ ಆಗುತ್ತಿರಲಿಲ್ಲ' ಎಂದು. ಆದರೆ ತಿಳಿಯದೇ ಇಷ್ಟೊಂದು ತೊಂದರೆ ಅನುಭವಿಸುವ ಹಾಗಾಗಿತ್ತು. ಸುಮ್ಮನೆ ಗಾಯ ಆಗಿದೆ ಅಂದುಕೊಂಡು ನೋಡದೇ ಇದ್ದುದು ನಮ್ಮದೇ ತಪ್ಪಾಗಿತ್ತು. ರಕ್ತ ಹೆಪ್ಪುಗಟ್ಟಿದ್ದು ತಿಳಿದಿದ್ದರೆ ಖಂಡಿತ ಬೆಣ್ಣೆ ಪ್ರಯೋಗ ಮಾಡಿ ಯಶಸ್ವಿಯಾಗುತ್ತಿದ್ದೆ ಎನ್ನುವ ನಂಬಿಕೆ ಈಗಲೂ ನನಗಿದೆ. ಯಾಕೆಂದರೆ ಅತ್ತೆಯ ಜೊತೆಗಿದ್ದು ಕಂಡುಕೊಂಡ ಅನುಭವ ಅಷ್ಟು ಗಟ್ಟಿಯಾಗಿದೆ!!



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ